ಕೂಲಿ ಕಾರ್ಮಿಕರು ವಲಸೆ ಹೋಗದಂತೆ ತಡೆಯಿರಿ: ಡಾ.ಜಿ.ಸಿ.ಪ್ರಕಾಶ್
2 Min read
Author : KannadaprabhaNewsNetwork
Published : Oct 08 2023, 12:01 AM IST
Share this Article
FB
TW
Linkdin
Whatsapp
೭ಕೆಎಂಎನ್ಡಿ-೭ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಮಾತನಾಡಿದರು. | Kannada Prabha
Image Credit: KP
ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಮನರೇಗಾ ಹಾಗೂ ಇನ್ನಿತರ ಯೋಜನೆಯಡಿ ಕೆಲಸ ನೀಡಿ ಕೂಲಿ-ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅಧಿಕಾರಿಗಳಿಗೆ ಸೂ
ಸ್ಥಳೀಯವಾಗಿ ಕೆಲಸ ನೀಡುವುದಕ್ಕೆ ಕ್ರಿಯಾಯೋಜನೆ ರೂಪಿಸಿ । ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ಪರಿಸ್ಥಿತಿ ಅವಲೋಕನಾ ಸಭೆ ಕನ್ನಡಪ್ರಭ ವಾರ್ತೆ ಮಂಡ್ಯ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಮನರೇಗಾ ಹಾಗೂ ಇನ್ನಿತರ ಯೋಜನೆಯಡಿ ಕೆಲಸ ನೀಡಿ ಕೂಲಿ-ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು ಎಂದು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಗಾಲ ಬಂದಾಗ ಕೃಷಿಕರು ಹಾಗೂ ಗ್ರಾಮಸ್ಥರು ದುಡಿಯುವುದಕ್ಕೆ ಊರು ಬಿಟ್ಟು ಹೋಗುತ್ತಾರೆ. ಹಾಗಾಗಿ ಅಂತಹ ಜನರು ವಲಸೆ ಹೋಗುವುದನ್ನು ತಡೆಯಿರಿ. ಸ್ಥಳೀಯವಾಗಿ ಅವರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ. ಕೃಷಿ ಹೊಂಡ, ಹೂಳು ಎತ್ತುವುದು ಸೇರಿದಂತೆ ಇನ್ನಿತರ ಕೆಲಸ ನೀಡುವಂತೆ ನಿರ್ದೇಶನ ನೀಡಿದರು. ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಮನವಿ ಸಲ್ಲಿಸುವವರಿಗೆ ಆದ್ಯತೆ ಮೇಲೆ ವಯೋಮಾನ ಆಧರಿಸಿ ಅವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ. ನರೇಗಾ ಯೋಜನೆಯಡಿ ದಿನಗೂಲಿ ೩೧೬ ರು. ನೀಡುತ್ತಾರೆ. ಅದನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಕೆ ಮಾಡಬೇಕು. ಹೆಚ್ಚುವರಿ ಕೆಲಸ ಬೇಕಿದ್ದರೆ ಜಿಲ್ಲೆಗೆ ಮಾಹಿತಿ ನೀಡಿ. ಕೆಲಸ ನೀಡುವಂತೆ ತಿಳಿಸಿದರು. ರಂಗನತಿಟ್ಟು ಸೇರಿದಂತೆ ಪ್ರವಾಸೋದ್ಯಮ ಸ್ಥಳದಲ್ಲಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ. ಗಿಡಕ್ಕೆ ನೀರು ಹಾಕುವುದು. ಅಲ್ಲಿಯ ಪರಿಸರ ನೋಡಿಕೊಳ್ಳುವುದು ಹೀಗೆ ಅಧಿಕಾರಿಗಳು ಚಿಂತಿಸಿ ಕೂಲಿ-ಕಾರ್ಮಿಕರಿಗೆ ಉದ್ಯೋಗ ನೀಡುವಂತೆ ಸಲಹೆ ನೀಡಿದರು. ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಪಂಚಾಯತಿಯ ಅಧಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಬೇಕು ಎಂದರು. ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರದ ಯೋಜನೆಗಳು ಕೂಡ ನೆರವಾಗಲಿವೆ. ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಅವಶ್ಯ. ಪ್ರತಿ ಮಾಹೆ ಡಿ.ಬಿ.ಟಿ ಮುಖೇನ ಹಣ ಸಂದಾಯವಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು. ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಮೊದಲೇ ನೀರು ದೊರೆಯುವ ಮೂಲಗಳನ್ನು ಪತ್ತೆ ಮಾಡಿಕೊಳ್ಳಿ. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯ ಏಳು ತಾಲೂಕುಗಳು ಬರ ಎಂದು ಘೋಷಣೆಯಾಗಿದೆ. ಎಲ್ಲಾ ನೋಡಲ್ ಅಕಾರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು. ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಉಪಸ್ಥಿತರಿದ್ದರು.