‘ಹಗಲೆಲ್ಲ ಶಾ ಜತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ’

| N/A | Published : Oct 06 2025, 01:21 PM IST

 Basanagouda Patil Yatnal

ಸಾರಾಂಶ

ಯತ್ನಾಳರು ‘ಅಮಿತ್ ಶಾ ಹಾಗೂ ಎಂ.ಬಿ.ಪಾಟೀಲರು ಎಲ್ಲಾ ಒಂದಾಗಿದ್ದಾಗ ನಮ್ಮದೇನಿದೆ. ಹಗಲೆಲ್ಲ ಅಮಿತ್ ಶಾ ಜೊತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ...’ ಎಂದು ಎಂ.ಬಿ.ಪಾಟೀಲರಿಗೆ ಟಾಂಗ್ ಕೊಟ್ಟರು.

 ಯತ್ನಾಳರು ‘ಅಮಿತ್ ಶಾ ಹಾಗೂ ಎಂ.ಬಿ.ಪಾಟೀಲರು ಎಲ್ಲಾ ಒಂದಾಗಿದ್ದಾಗ ನಮ್ಮದೇನಿದೆ. ಹಗಲೆಲ್ಲ ಅಮಿತ್ ಶಾ ಜೊತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ...’ ಎಂದು ಎಂ.ಬಿ.ಪಾಟೀಲರಿಗೆ ಟಾಂಗ್ ಕೊಟ್ಟರು. ಇದನ್ನು ಕೇಳಿ ಗುಟ್ಟು ರಟ್ಟಾಯ್ತೆನೋ ಎಂಬಂತೆ ಎಂ.ಬಿ.ಪಾಟೀಲರು ಅವರು ಏ... ನಮ್ಮ ಜೊತೆ ಏನೂ... ಕಾಂಟ್ಯಾಕ್ಟ್‌ ಇಲ್ಲರೀಪಾ... ಎಂದು ಒಂದು ಕ್ಷಣವೂ ಅಲ್ಲಿ ನಿಲ್ಲದೆ ಕಾರುಹತ್ತಿ ಹೊರಟೇಬಿಟ್ಟರು.

ಇತ್ತೀಚೆಗೆ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಒಂದು ಕಾರ್ಯಕ್ರಮ. ಅಲ್ಲಿ ಹಿಂದು ಫೈರ್ ಬ್ರಾಂಡ್‌ ಬಸವರಾಜ ಯತ್ನಾಳ್‌ ಹಾಗೂ ಕಾಂಗ್ರೆಸ್‌ ಬ್ರಾಂಡೆಂಡ್‌ ಫಯರ್‌ ಎಂ.ಬಿ.ಪಾಟೀಲ್‌ ಇದ್ದರು. ಮಾತಿನ ಓಘದಲ್ಲಿ ಇಂಡಿಯಾ-ಪಾಕಿಸ್ತಾನ ಪಂದ್ಯದ ಕುರಿತು ಪ್ರಸ್ತಾಪಿಸಿದ ಸಚಿವ ಎಂ.ಬಿ.ಪಾಟೀಲರು ಭಾರತ ತಂಡವನ್ನು ಪಾಕಿಸ್ತಾನದೊಂದಿಗೆ ಆಡಿಸಬಾರದಿತ್ತು. ಮುಗ್ಧ ಜನರನ್ನು ಹತ್ಯೆ ಮಾಡಿದ ಪಾಪಿ ಪಾಕಿಸ್ತಾನದ ಜೊತೆಗೆ ಮ್ಯಾಚ್‌ ಆಡುವ ಅಗತ್ಯವಿರಲಿಲ್ಲ. ಅಮಿತ್ ಶಾ ಪುತ್ರನೇ ಬಿಸಿಸಿಐ ಅಧ್ಯಕ್ಷರಿದ್ದು, ಪಾಕಿಸ್ತಾನದ ಜೊತೆಗೆ ಮ್ಯಾಚ್‌ ಏಕೆ ಆಡಿಸ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

ಜತೆಗೆ, ಪಾಕ್ ಜತೆಗೆ ಭಾರತ ತಂಡ ಕ್ರಿಕೆಟ್ ಆಡಿಸುತ್ತಿರುವುವುದನ್ನು ನನ್ನಂತೆ ನೀವು ಮಾಧ್ಯಮಗಳ ಎದುರು ಖಂಡಿಸಿ ಎಂದು ಜತೆಗಿದ್ದ ಯತ್ನಾಳರಿಗೆ ತುಸು ಕಿಚಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಯತ್ನಾಳರು ‘ಅಮಿತ್ ಶಾ ಹಾಗೂ ಎಂ.ಬಿ.ಪಾಟೀಲರು ಎಲ್ಲಾ ಒಂದಾಗಿದ್ದಾಗ ನಮ್ಮದೇನಿದೆ. ಹಗಲೆಲ್ಲ ಅಮಿತ್ ಶಾ ಜೊತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ...’ ಎಂದು ಎಂ.ಬಿ.ಪಾಟೀಲರಿಗೆ ಟಾಂಗ್ ಕೊಟ್ಟರು.

ಇದನ್ನು ಕೇಳಿ ಗುಟ್ಟು ರಟ್ಟಾಯ್ತೆನೋ ಎಂಬಂತೆ ಎಂ.ಬಿ.ಪಾಟೀಲರು ಅವರು ಏ... ನಮ್ಮ ಜೊತೆ ಏನೂ... ಕಾಂಟ್ಯಾಕ್ಟ್‌ ಇಲ್ಲರೀಪಾ... ಎಂದು ಒಂದು ಕ್ಷಣವೂ ಅಲ್ಲಿ ನಿಲ್ಲದೆ ಕಾರುಹತ್ತಿ ಹೊರಟೇಬಿಟ್ಟರು.

ನಾಯಕರನ್ನು ಬೇಸ್ತು ಬೀಳಿಸಿದ ರೈತ!

ಅತಿವೃಷ್ಟಿ ಆಗಿತ್ತಲ್ಲ. ಸೋ, ಬಿಜೆಪಿ ನಾಯಕರ ನಿಯೋಗ ಹಾನಿಗೊಳಗಾಗಿದ್ದ ಬೆಳಗಾವಿ ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಲು ಬಂದಿದ್ದರು. ಅತಿವೃಷ್ಟಿ ಅಂದ ಮೇಲೆ ರೈತರಿಗೆ ನಷ್ಟವಾಗಿರುತ್ತದೆ. ಸರ್ಕಾರ ನಿರೀಕ್ಷೆ ಮಟ್ಟಕ್ಕೆ ಸ್ಪಂದಿಸಿರುವುದಿಲ್ಲ. ಸೋ, ಇದನ್ನು ಬಳಸಿಕೊಂಡು ರಾಜ್ಯ ಸರ್ಕಾರವನ್ನು ಚೆಂಡಾಡಿ, ಒಂದಷ್ಟು ಪ್ರಚಾರ ಗಿಟ್ಟಿಸುವ ಉಮೇದಿ ಯಾವುದೇ ಪ್ರತಿಪಕ್ಷಕ್ಕೆ ಇದ್ದರೇ ತಪ್ಪೇನೂ ಇಲ್ಲ.

ಅದೇ ಉಮೇದಿ ನಿಯೋಗದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗಕ್ಕೆ ಆಗಮಿಸಿದ್ದ ವಿಪಕ್ಷ ನಾಯಕ ಆರ್‌.ಅಶೋಕ್, ವಿಪ ಸದಸ್ಯ ಸಿ.ಟಿ.ರವಿ ನೇತೃತ್ವದ ತಂಡಕ್ಕೂ ಇತ್ತು. ಹಾನಿ ವೀಕ್ಷಣೆಗೆ ರೈತರು ಕೂಡ ವೀಕ್ಷಣೆ ವೇಳೆ ನಾಯಕರೊಟ್ಟಿಗೆ ಇದ್ದರು. ಅದೇನು ಆಯ್ತೋ ಗೊತ್ತಿಲ್ಲ. ಸಳೀಯ ರೈತ ಮುರಿಗೆಪ್ಪ ಅರ್ಜುನಗಿ ಅವರು ದಿಢೀರನೆ ಕೇಂದ್ರದ ನಾಯಕರ ವಿರುದ್ಧ ವಾಗ್ದಾಳಿ ನಡೆಸಲು ಶುರು ಮಾಡಿ ಬಿಟ್ಟರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಅದಾನಿ ಹಾಗೂ ಅಂಬಾನಿಗೆ ಎಲ್ಲವನ್ನು ಮಾಡುತ್ತಿದ್ದಾರೆ. ಆದರೆ ರೈತರ ಸಮಸ್ಯೆಗಳನ್ನು ಏಕೆ ಪರಿಹರಿಸುತ್ತಿಲ್ಲ ಎಂದು ಪ್ರಶ್ನಿಸತೊಡಗಿದರು.

ರೈತರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಾರೆ ಎಂದುಕೊಂಡಿದ್ದ ಸಿ.ಟಿ.ರವಿ, ಆರ್.ಅಶೋಕ್ ಕೆಲ ಕ್ಷಣ ಬೇಸ್ತು ಬಿದ್ದರು. ಸಾವರಿಸಿಕೊಂಡು ನಾವು ಸಜ್ಜನಿಕೆಯಿಂದ ಬೆಳೆ ವೀಕ್ಷಿಸಲು ಬಂದಿದ್ದೇವೆ. ಅದಕ್ಕೆ ಬೇರೆ ವೇದಿಕೆ ಸಿದ್ಧಪಡಿಸಿ ಉತ್ತರ ಕೊಡುತ್ತೇವೆ. ದಯವಿಟ್ಟು ನಿಮ್ಮ ಅರ್ಥವಿಲ್ಲದ ವಾದವನ್ನು ನಿಲ್ಲಿಸಿ ಎಂದು ರೈತ ನಾಯಕನ ಬಾಯಿ ಮುಚ್ಚಿಸಲು ಯತ್ನಿಸಿದರು.

ಆದರೆ, ನೆರೆದಿದ್ದ ರೈತರು, ರೈತ ಮುಖಂಡನಿಗೆ ಮಾತನಾಡಲು ಅವಕಾಶ ಕೊಡಿ ಎಂದು ಒತ್ತಾಯ ಮಾಡಿದರು. ಇದರಿಂದ ಗೊಂದಲಕ್ಕೆ ಒಳಗಾದ ಬಿಜೆಪಿ ನಾಯಕರು ಅಲ್ಲಿ ನಡೆಸುತ್ತಿದ್ದ ವೀಕ್ಷಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಿಂದ ಪರಾರಿ!

ಜಾತಿ ಗಣತಿ ತಪ್ಪಿಸಿಕೊಳ್ಳಲು ‘ಗುಪ್ತ’ ಪ್ಲ್ಯಾನ್‌!

ಈ ಜಾತಿ ಗಣತಿ ರಾಜ್ಯದ ನಾಯಕರಷ್ಟೇ ಅಲ್ಲ, ಅಧಿಕಾರ ಹಾಗೂ ಸಿಬ್ಬಂದಿಯ ತಲೆಯನ್ನೂ ಕೆಡಿಸಿದೆ. ಸರ್ಕಾರಿ ನೌಕರರು ಅಂಗವಿಕಲತೆ, ಗರ್ಭಿಣಿ, ಬಾಣಂತಿ ಸೇರಿ ಹತ್ತು ಹಲವು ಆರೋಗ್ಯ ಸಮಸ್ಯೆ ಮುಂದಿಟ್ಟು ಸಮೀಕ್ಷೆ ಹೊಣೆಯಿಂದ ತಪ್ಪಿಸಿಕೊಳ್ಳಲು ಎಂಥೆಂಥದ್ದೋ ಪ್ಲಾನ್‌ ಮಾಡುತ್ತಿದ್ದಾರೆ.

ಅದೇ ರೀತಿ ಗ್ರೇಟರ್‌ ಬೆಂಗಳೂರು ಚೀಫ್‌ ಕಮಿಷನರ್‌ ಬಳಿ ಸರ್ಕಾರಿ ನೌಕರರನೊಬ್ಬ ವಿನಾಯ್ತಿ ಕೋರಲು ಬಂದ. ‘ಯಾಕಪ್ಪ ನಿನಗೆ ವಿನಾಯ್ತಿ ಕೊಡಬೇಕು’ ಎಂದು ಕೇಳಿದ ಕೂಡಲೇ ಆತ ಶಾಸಕರೊಬ್ಬರ ಶಿಫಾರಸು ಪತ್ರ ಮುಂದಿಟ್ಟ. ಇದಕ್ಕೂ ಶಿಫಾರಸ್ಸಾ ಎಂದು ಅಚ್ಚರಿಕೊಂಡ ಮುಖ್ಯ ಆಯುಕ್ತರು. ಅದಿರಲಿ, ‘ಏನು ನಿನಗೆ ಆರೋಗ್ಯ ಸಮಸ್ಸೆಯೇ?’ ಎಂದು ಪ್ರಶ್ನಿಸಿದರು.

ಅದಕ್ಕೆ ಆ ಅಧಿಕಾರಿ, ‘ನಾನು ಹೊರಗಿನಿಂದ ಚೆನ್ನಾಗಿದ್ದೇನೆ, ಆದರೆ, ಒಳಗೆ ಸಮಸ್ಯೆಯಿದೆ. ಹೇಳಿಕೊಳ್ಳೋದು ಕಷ್ಟ’ ಎಂದ. ಓಹೋ ಅಂದ ಆಯುಕ್ತರು, ವೈದ್ಯಕೀಯ ದಾಖಲೆ ತೋರಿಸಪ್ಪ ಅಂದ್ರು. ಅದಕ್ಕೆ ಆತ ‘ಇಲ್ಲ’ ಎಂಬಂತೆ ತಲೆ ಅಲ್ಲಾಡಿಸಿದ.

‘ದಾಖಲೆ ಇಲ್ಲ ಅಂದ್ರೆ ಹೇಗಪ್ಪ’ ಅಂತ ಆಯುಕ್ತರು ಹೇಳಿದಾಗ, ತಲೆ ಕೆರೆದುಕೊಂಡ ಆತ ‘ಸರ್. ನನಗೆ ಮೂತ್ರ ಸೋಂಕಿನ ಸಮಸ್ಯೆ ಇದೆ. ಹೀಗಾಗಿ, ವಿನಾಯಿತಿ ಕೊಡಿ’ ಅಂದ.

ತಾಳ್ಮೆ ಕಳೆದುಕೊಂಡ ಆಯುಕ್ತರು, ‘ಸಾಧ್ಯವಿಲ್ಲ. ತಕ್ಷಣ ಹೋಗಿ ಸಮೀಕ್ಷೆಗೆ ವರದಿ ಮಾಡಿಕೋ’ ಎಂದು ತಾಕೀತು ಮಾಡಿದರು. ಮುಖ ಸಪ್ಪೆ ಮಾಡಿಕೊಂಡ ಮೂತ್ರ ಸೋಂಕಿಗೆ ಒಳಗಾಗಿರುವ ನೌಕರ, ಚೀಪ್‌ ಕಮಿಷನರ್‌ ಕಚೇರಿಯಿಂದ ಕುಂಟುಕೊಂಡು ಹೊರ ನಡೆದ.

-ಶಶಿಕಾಂತ ಮೆಂಡೆಗಾರ

-ಮಂಜುನಾಥ ಪ್ಯಾಟಿ

-ವಿಶ್ವನಾಥ್‌ ಮಲೇಬೆನ್ನೂರು

Read more Articles on