ಟ್ರೆಂಡ್‌ನಲ್ಲಿರುವ ವಾಕಿಂಗ್‌ ಸ್ಟೈಲ್‌ ಜಪಾನೀಸ್‌ ವಾಕಿಂಗ್‌ : ಗಮನಿಸಿ !

| N/A | Published : Oct 05 2025, 01:08 PM IST

all about japanese walking the secret to staying fit

ಸಾರಾಂಶ

ನೀವು ಬೆಳಿಗ್ಗೆದ್ದು ಪಾರ್ಕ್‌ಗೆ ಹೋದರೆ ತರಹೇವಾರಿ ವಾಕರ್‌ಗಳನ್ನು ನೋಡುತ್ತೀರಿ. ನೇರವಾಗಿ ನಡೆಯುವವರು, ವೇಗವಾಗಿ ನಡೆಯುವವರು, ಜಿಗ್‌ಜಾಗ್‌ ಮಾದರಿಯಲ್ಲಿ ನಡೆಯುವವರು, ಕಷ್ಟ ಸುಖ ಮಾತಾಡುತ್ತಾ ನಡೆಯುವವರು, ಒಂದು ರೌಂಡು ವಾಕ್‌ ಮಾಡಿ ಆಮೇಲೆ ಹರಟೆ ಹೊಡೆಯುವವರು 

- ರಾಜ್

ನೀವು ಬೆಳಿಗ್ಗೆದ್ದು ಪಾರ್ಕ್‌ಗೆ ಹೋದರೆ ತರಹೇವಾರಿ ವಾಕರ್‌ಗಳನ್ನು ನೋಡುತ್ತೀರಿ. ನೇರವಾಗಿ ನಡೆಯುವವರು, ವೇಗವಾಗಿ ನಡೆಯುವವರು, ಜಿಗ್‌ಜಾಗ್‌ ಮಾದರಿಯಲ್ಲಿ ನಡೆಯುವವರು, ಕಷ್ಟ ಸುಖ ಮಾತಾಡುತ್ತಾ ನಡೆಯುವವರು, ಒಂದು ರೌಂಡು ವಾಕ್‌ ಮಾಡಿ ಆಮೇಲೆ ಹರಟೆ ಹೊಡೆಯುವವರು, ಬೇಗ ವಾಕಿಂಗ್‌ ಮುಗಿಸಿ ವಡೆ ತಿನ್ನಲು ಹೋಗುವವರು, ಎಲ್ಲಕ್ಕಿಂತ ವಿಶೇಷ ಎಂದರೆ ರಿವರ್ಸ್‌ ನಡೆಯುವವರು. ಇದಂತೂ ಬಹಳ ಅಪಾಯಕಾರಿಯಾದ ಸ್ಟೈಲು. ಯಾಕೆಂದರೆ ಹೀಗೆ ರಿವರ್ಸ್‌ ನಡೆಯುತ್ತಾ ನಡೆಯುತ್ತಾ ಅದ್ಯಾವುದೋ ವೇಳೆಯಲ್ಲಿ ಬಿದ್ದು ಎದ್ದಿರುವ ಎರಡು ಮೂರು ಮಂದಿಯನ್ನು ನಾನು ನೋಡಿದ್ದೇನೆ. ಇದಕ್ಕಂತೂ ಬಹಳ ಸಂಯಮ ಬೇಕು. ಹಾಗಾಗಿ ನನಗೆ ರಿವರ್ಸ್‌ ವಾಕ್‌ ಮಾಡುವವರನ್ನು ಕಂಡರೆ ಬಹಳ ಗೌರವ.

10 ಸಾವಿರ ಸ್ಟೆಪ್ಸ್‌

ಹಲವು ಸಮಯದಿಂದ ವಾಕರ್‌ಗಳಲ್ಲಿ 10 ಸಾವಿರ ಸ್ಟೆಪ್‌ ನಡೆಯಬೇಕು ಅನ್ನುವ ನಿಯಮ ಬಹಳ ಜನಪ್ರಿಯವಾಗಿದೆ. ದಿನಾಂತ್ಯಕ್ಕೆ ನಿಮ್ಮ ನಿಮ್ಮ ಸ್ಮಾರ್ಟ್‌ವಾಚ್‌ಗಳಲ್ಲಿ 10 ಸಾವಿರ ಸ್ಟೆಪ್‌ ಕಂಪ್ಲೀಟ್‌ ಆಗಿರಬೇಕು ಅನ್ನುವುದು ನಿಯಮ. ಅದರಲ್ಲಿ ನೀವು ಹೇಗೆ ಬೇಕಾದರೂ ನಡೆಯಬಹುದು. ಯಾವಾಗ ಬೇಕಾದರೂ ನಡೆಯಬಹುದು. ಯಾವತ್ತೂ ನಡೆಯದವರು ಈ ವಿಧಾನದಿಂದ ಬಹಳ ಪ್ರಯೋಜನ ಆಗಿದೆ ಎನ್ನುತ್ತಾರೆ. ಅವರವರೇ ಗ್ರೂಪ್‌ ಮಾಡಿಕೊಂಡು ಇಂತಿಷ್ಟು ದಿನ 10 ಸಾವಿರ ಸ್ಟೆಪ್‌ ನಡೆಯಬೇಕು ಅಂತ ನಿಯಮ ಮಾಡಿಕೊಂಡಿರುತ್ತಾರೆ. ಕೆಲವರು 30 ದಿನ, ಇನ್ನು ಹಲವರು 100 ದಿನ. ಇತ್ತೀಚೆಗೆ ಏಷ್ಯಾ ಕಪ್ ಫೈನಲ್‌ನಲ್ಲಿ ಕಮೆಂಟೇಟರ್‌ಗಳು ಮಾತನಾಡುತ್ತಾ ಸುನೀಲ್‌ ಗವಾಸ್ಕರ್‌ ಬಳಿಯಲ್ಲಿ ನಿಮ್ಮದು 10 ಸಾವಿರ ಸ್ಟೆಪ್‌ ಮುಗೀತಾ ಅಂತ ಕೇಳಿದ್ದನ್ನು ಅನೇಕರು ನೋಡಿರಬಹುದು. 10 ಸಾವಿರ ಸ್ಟೆಪ್‌ ಎಲ್ಲಿಯವರೆಗೆ ತಲುಪಿದೆ ಅಂತ ಇದರಿಂದ ತಿಳಿಯಬಹುದು ಇದೀಗ ಮತ್ತೊಂದು ವಾಕಿಂಗ್‌ ಸ್ಟೈಲ್‌ ಜನಪ್ರಿಯವಾಗುತ್ತಿದೆ. ಅದರ ಹೆಸರು ಜಪಾನೀಸ್‌ ವಾಕಿಂಗ್‌.

ಜಪಾನೀಸ್‌ ವಾಕಿಂಗ್‌

ಬಹಳ ಸಮಯದಿಂದ ಈ ಜಪಾನೀಸ್‌ ವಾಕಿಂಗ್‌ ಪದ್ಧತಿ ಪ್ರಚಲಿತದಲ್ಲಿದ್ದರೂ 2025ರಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕುರಿತು ಮಾಹಿತಿಗಳನ್ನು, ರೀಲ್‌ಗಳನ್ನು ಕೆಲವರಾದರೂ ನೋಡಿರುತ್ತಾರೆ. 2007ರಲ್ಲಿ ಈ ಜಪಾನೀಸ್‌ ವಾಕಿಂಗ್‌ ಶೈಲಿಯನ್ನು ಜಪಾನಿನ ಶಿನ್‌ಶು ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾದ ಹಿರೋಶಿ ನೋಸೆ ಮತ್ತು ಶಿಜುಯೆ ಮಸುಕಿ ರೂಪಿಸಿದರು ಎಂದು ಮಾಹಿತಿಗಳು ಹೇಳುತ್ತವೆ. ಇದನ್ನು ಇಂಟರ್‌ವಲ್ಸ್‌ ವಾಕಿಂಗ್‌ ಎಂದೂ ಕರೆಯುತ್ತಾರೆ. ಈ ಶೈಲಿಯಲ್ಲಿ ಮೂರು ಹಂತಗಳಿವೆ.

- ವಾರ್ಮ್-ಅಪ್: 5 ನಿಮಿಷ ನಿಧಾನವಾಗಿ ನಡೆಯುವುದು.

- ಇಂಟರ್‌ವಲ್ಸ್: 3 ನಿಮಿಷ ವೇಗವಾಗಿ ನಡೆಯುವುದು. (ಮಾತಾಡಲು ಕಷ್ಟವಾಗುವಷ್ಟು ಬ್ರಿಸ್ಕ್‌ ವಾಕ್‌ ಮಾಡುವುದು) ನಂತರ 3 ನಿಮಿಷ ನಿಧಾನವಾಗಿ ನಡೆಯುವುದು. (ಆರಾಮಾಗಿ ನಡೆಯುವುದು) ಇದೇ ರೀತಿ 5 ಬಾರಿ ಮಾಡಬೇಕು. (ಒಟ್ಟು 30 ನಿಮಿಷ)

- ಕೂಲ್ ಡೌನ್: 5-10 ನಿಮಿಷ ಶಾಂತವಾಗಿ ನಡೆಯುವುದು.

ಸಮಯ ನೋಡಿಕೊಂಡು ವಾಕ್‌ ಮಾಡುವುದು ಸ್ವಲ್ಪ ಕಷ್ಟ. ಆದರೆ ಸ್ಮಾರ್ಟ್‌ವಾಚ್‌ ಇದ್ದರೆ ಅದರಲ್ಲಿ ಸಮಯ ಸೆಟ್‌ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಮೂರು ನಿಮಿಷ ಆದಮೇಲೆ ಅದು ನಿಮ್ಮನ್ನು ಎಚ್ಚರಿಸುತ್ತದೆ. ಅದರ ಪ್ರಕಾರ ಒಮ್ಮೆ ವೇಗ ಮತ್ತೊಮ್ಮೆ ನಿಧಾನದ ನಡಿಗೆಯನ್ನು ಅನುಸರಿಸಬಹುದು.

ಈ ಪದ್ಧತಿಯನ್ನು ಪಾಲಿಸಿದರೆ ಕಾಲಿನ ಶಕ್ತಿ ಹೆಚ್ಚಾಗುತ್ತದೆ, ಕಾಲಿನ ಮಸಲ್‌ ಸ್ಟ್ರೆಂತ್‌ ಜಾಸ್ತಿಯಾಗುತ್ತದೆ, ಅಲ್ಲದೇ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ. ಅಲ್ಲದೇ ನಾಲ್ಕಾರು ತಿಂಗಳು ನಿರಂತರವಾಗಿ ಮಾಡಿದರೆ 3-5 ಕೆಜಿ ತೂಕ ಇಳಿಸಿಕೊಳ್ಳಲೂ ಬಹುದಾಗಿದೆ. ಆದರೆ ಈ ಥರದ ಚಟುವಟಿಕೆಗಳ ಪರಿಣಾಮ ಒಬ್ಬರಿಂದೊಬ್ಬರಿಗೆ ಬದಲಾಗಬಹುದು. ಅವರವರ ಶಕ್ತ್ಯಾನುಸಾರ ಈ ಚಟುವಟಿಕೆಗಳನ್ನು ಮಾಡುವುದು ಮತ್ತು ತಜ್ಞರ ಸಲಹೆ ಜೊತೆ ಮಾಡುವುದು ಏನಕ್ಕೂ ಒಳ್ಳೆಯದು.

ಈ ವಿಧಾನವನ್ನು ಅನುಸರಿಸುವವರು ಆರಂಭದಲ್ಲಿ ಒಂದೊಂದು ನಿಮಿಷದ ಇಂಟರ್‌ವಲ್‌ ತೆಗೆದುಕೊಳ್ಳುವುದು ಒಳಿತು. ಆಮೇಲೆ ಬೇಕಿದ್ದರೂ ಸಮಯ ಜಾಸ್ತಿ ಮಾಡಬಹುದು. ವಾರದಲ್ಲಿ ನಾಲ್ಕೈದು ದಿನ ಈ ವಿಧಾನದಲ್ಲಿ ವಾಕಿಂಗ್‌ ಮಾಡಬಹುದು. ಅದರಿಂದ ಉತ್ತಮ ಪರಿಣಾಮ ಹೊಂದಬಹುದು ಎಂದು ಈ ಕುರಿತು ತಿಳಿದವರು ಹೇಳುತ್ತಾರೆ.

Read more Articles on