ಗುಲಾಬಿ ಹೂ ಮತ್ತು ಇತರ ಕಥೆಗಳು ಸಂಕಲನದಲ್ಲಿ 39 ಕಥೆಗಳಿವೆ. ಅವುಗಳಲ್ಲಿ ಋಣ-ಭಾರ, ಗೋದಾವರಿ, ನಾಯಿ ಬದುಕು, ಬದಲಾವಣೆ, ಭಾನುಮತಿ, ಶರ್ಮಿಷ್ಠೆ, ಸುಂದರಿ- ಇವು ದೀರ್ಘ ಕಥೆಗಳು. ಉಳಿದ 32 ಕಿರುಕಥೆಗಳು. ತಮ್ಮ ಸುತ್ತಮುತ್ತಲಿನಲ್ಲಿ ನಡೆದಿರುವ ಘಟನೆಗಳಿಗೆ ಕಥಾ ರೂಪ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕ, ಯಕ್ಷಗಾನ ತಾಳಮದ್ದಲೆಯ ಪ್ರಸಿದ್ಧ ಅರ್ಥಧಾರಿ ಗಣಪತಿ ಹೆಗಡೆ ಮೂರೂರು ಅವರು ಗುಲಾಬಿ ಹೂ ಮತ್ತು ಇತರ ಕಥೆಗಳು ಕೃತಿಯನ್ನು ಹೊರತಂದಿದ್ದಾರೆ.ಈ ಸಂಕಲನದಲ್ಲಿ 39 ಕಥೆಗಳಿವೆ. ಅವುಗಳಲ್ಲಿ ಋಣ-ಭಾರ, ಗೋದಾವರಿ, ನಾಯಿ ಬದುಕು, ಬದಲಾವಣೆ, ಭಾನುಮತಿ, ಶರ್ಮಿಷ್ಠೆ, ಸುಂದರಿ- ಇವು ದೀರ್ಘ ಕಥೆಗಳು. ಉಳಿದ 32 ಕಿರುಕಥೆಗಳು. ತಮ್ಮ ಸುತ್ತಮುತ್ತಲಿನಲ್ಲಿ ನಡೆದಿರುವ ಘಟನೆಗಳಿಗೆ ಕಥಾ ರೂಪ ನೀಡಿದ್ದಾರೆ. ಗ್ರಾಮೀಣ ಬದುಕು, ಕೌಟುಂಬಿಕ ಬಿಕ್ಕಟ್ಟು, ಮೂಢನಂಬಿಕೆ, ಬ್ಯಾಂಕ್ ವ್ಯವಹಾರ, ಪುರಾಣ ಮತ್ತಿತರ ವಿಭಿನ್ನ ಕಥಾ ಹಂದರವಿದೆ. ಎಲ್ಲಾ ಕಥೆಗಳು ಉತ್ತರ ಕನ್ನಡದ ಪರಿಸರದಲ್ಲಿ ಘಟಿಸುವಂಥವೇ ಆಗಿವೆ. ಜೊತೆಗೆ ಹವ್ಯಕ ಭಾಷೆಯೂ ಬಳಕೆಯನ್ನು ಮಾಡಿದ್ದಾರೆ.
‘ಸನ್ಮಾನ’ ಕಿರು ಕಥೆಯಂತೂ ಅತ್ಯಂತ ಮಾರ್ಮಿಕ ಹಾಗೂ ವಿಡಂನಾತ್ಮಕವಾಗಿದೆ. ಅದೇ ರೀತಿ ‘ಸ್ವಾತಂತ್ರ್ಯ’ ಕಥೆಯೂ ಹೇಳುವುದು ಒಂದು ಮಾಡುವುದು ಮತ್ತೊಂದಕ್ಕೆ ನಿದರ್ಶನವಾಗಿದೆ.! ‘ಮೋಡ ಚದುರಿತು’, ‘ಸಂಶಯ’- ಅನುಮಾನ ಪಿಶಾಚಿ ಕುರಿತ ಕಥೆಗಳು. ಅದೇ ರೀತಿ ‘ವಿಲ್’ ಪ್ರಸ್ತುತ ಎಲ್ಲರ ಮನೆಯಲ್ಲಿ ಹಿರಿಯರು ಎದುರಿಸುತ್ತಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.ಸಂಕಲನದ ಶೀರ್ಷಿಕೆ ‘ಗುಲಾಬಿ ಹೂ’- ಜನ್ಮದಿಂದು ಟೀಚರ್ ಕೊಡಲು ವಿದ್ಯಾರ್ಥಿನಿಯೊಬ್ಬಳು ಹೂ ಅಂಗಡಿಯಿಂದ ಗುಲಾಬಿ ಕದ್ದಿದ್ದು, ಅದನ್ನು ನೋಡಿದ ಮಾಲೀಕ ರಾಮಣ್ಣ ಆಕೆಯನ್ನು ಹಿಡಿದು ಶಾಲೆಯ ಟೀಚರ್ ಬಳಿ ಬುದ್ದಿ ಹೇಳಲು ಕರೆದುಕೊಂಡು ಹೋಗಿದ್ದು, ಅದೇ ಟೀಚರ್‌ಗೆ ಎಲ್ಲಾ ಮಕ್ಕಳು ಬಣ್ಣ ಬಣ್ಣದ ಗುಲಾಬಿ ನಡೆಸಿ, ವಿಶ್ ಮಾಡುತ್ತಿದ್ದದನ್ನು ಕಂಡ ರಾಮಣ್ಣ ತಾನೂ ಮತ್ತೆರಡು ಗುಲಾಬಿ ತರಿಸಿ, ಟೀಚರ್‌ಗೆ ನೀಡಿ ವಿಶ್ ಮಾಡಿದ್ದು ಸ್ವಾರಸ್ಯಕರವಾಗಿದೆ.
ಮೈಸೂರಿನ ಶ್ರುತಿ ಪ್ರಕಾಶನ ಈ ಕಥಾ ಸಂಕಲವನ್ನು ಪ್ರಕಟಿಸಿದ್ದು, ಹು.ವಾ. ಪ್ರಕಾಶ ಅವರ ಮುನ್ನುಡಿ ಇದೆ. ಆಸಕ್ತರು ಪ್ರಕಾಶಕರಾದ ಜೀನಹಳ್ಳಿ ಸಿದ್ದಲಿಂಗಪ್ಪ, ಮೊ. 98860 26085 ಸಂಪರ್ಕಿಸಬಹುದು.