2026ರ ಜನವರಿಯಲ್ಲಿ ಭಾರ್ತಿ ಏರ್‌ಟೆಲ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ಶಾಶ್ವತ್ ಶರ್ಮಾ ನೇಮಕಗೊಳ್ಳುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಹೊಸ ವರ್ಷದಲ್ಲಿ ಭಾರ್ತಿ ಏರ್‌ಟೆಲ್‌ನ ನಾಯಕತ್ವ ಬದಲಾಗುತ್ತಿದೆ. 2026ರ ಜನವರಿಯಲ್ಲಿ ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ಶಾಶ್ವತ್ ಶರ್ಮಾ ನೇಮಕಗೊಳ್ಳುತ್ತಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆಗಿ ನಾಯಕತ್ವ ವಹಿಸಿದ್ದ ಗೋಪಾಲ್ ವಿಟ್ಟಲ್ ಅವರಿಗೆ 2024ರ ಅಕ್ಟೋಬರ್‌ನಲ್ಲಿ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ವೈಸ್ ಚೇರ್ ಮನ್ ಹೊಣೆಯನ್ನೂ ಹೊರೆಸಲಾಗಿತ್ತು. 2026 ಜನವರಿ 1ರಿಂದ ಗೋಪಾಲ್ ವಿಟ್ಟಲ್ ಅವರು ಭಾರ್ತಿ ಏರ್‌ಟೆಲ್‌ನ ಎಕ್ಸಿಕ್ಯೂಟಿವ್ ಚೇರ್ ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದರಲ್ಲಿ ಭಾರ್ತಿ ಏರ್‌ಟೆಲ್ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳ ಮೇಲ್ವಿಚಾರಣೆಯೂ ಸೇರಿದೆ.ಜನವರಿ 1ರಿಂದ ಎಂಡಿ ಮತ್ತು ಸಿಇಓ ಸ್ಥಾನ ಅಲಂಕರಿಸಲಿರುವ ಶಾಶ್ವತ್ ಶರ್ಮಾ ಅವರು ಕಳೆದ ಕೆಲವು ತಿಂಗಳಲ್ಲಿ ಹಂಗಾಮಿ ಸಿಇಓ ಆಗಿ ವ್ಯವಹಾರದಾದ್ಯಂತ ಸಾಕಷ್ಟು ಸಮಯ ಕಳೆದು ಈ ಹುದ್ದೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಶ್ವತ್ ಅವರು ಇನ್ನು ಮುಂದೆ ಗೋಪಾಲ್ ಅವರಿಗೆ ವರದಿ ಮಾಡಲಿದ್ದಾರೆ.ಪ್ರಸ್ತುತ ಭಾರ್ತಿ ಏರ್‌ಟೆಲ್ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಆಗಿರುವ ಸೌಮೆನ್ ರೇ ಅವರನ್ನು ಗುಂಪಿನ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲಾಗುತ್ತದೆ. ಅವರು ಕೂಡ ಗೋಪಾಲ್ ಅವರಿಗೆ ವರದಿ ಮಾಡಲಿದ್ದಾರೆ. ಸೌಮೆನ್ ಅವರು ಸುಮಾರು 4 ವರ್ಷಗಳಿಂದ ಈ ಹುದ್ದೆಯಲ್ಲಿದ್ದಾರೆ.ಪ್ರಸ್ತುತ ಭಾರ್ತಿ ಏರ್‌ಟೆಲ್‌ನ ಫೈನಾನ್ಶಿಯಲ್ ಕಂಟ್ರೋಲರ್ ಆಗಿರುವ ಅಖಿಲ್ ಗಾರ್ಗ್ ಅವರನ್ನು ಭಾರ್ತಿ ಏರ್‌ಟೆಲ್ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲಾಗುವುದು. ಅಖಿಲ್ ಅವರು ಏರ್‌ಟೆಲ್‌ನಲ್ಲಿ ಸುಮಾರು 12 ವರ್ಷಗಳಿಂದಿದ್ದು, ಹೆಕ್ಸಾಕಾಮ್ ಐಪಿಓ ಸೇರಿದಂತೆ ಹಲವು ಯೋಜನೆಗಳನ್ನು ಮುನ್ನಡೆಸಿದ್ದಾರೆ. ಹೊಸ ಹುದ್ದೆಯಲ್ಲಿ ಅಖಿಲ್ ಅವರು ಶಾಶ್ವತ್ ಮತ್ತು ಸೌಮೆನ್ ಅವರಿಗೆ ವರದಿ ಮಾಡಲಿದ್ದಾರೆ.ಪ್ರಸ್ತುತ ಜಾಯಿಂಟ್ ಕಂಪನಿ ಸೆಕ್ರೆಟರಿ ಮತ್ತು ಕಂಪ್ಲಯನ್ಸ್ ಆಫೀಸರ್ ಆಗಿರುವ ರೋಹಿತ್ ಪುರಿ ಅವರನ್ನು ಭಾರ್ತಿ ಏರ್‌ಟೆಲ್‌ನ ಕಂಪನಿ ಸೆಕ್ರೆಟರಿ ಮತ್ತು ಕಂಪ್ಲಯನ್ಸ್ ಆಫೀಸರ್ ಆಗಿ ನೇಮಿಸಲಾಗುವುದು. ಗ್ರೂಪ್ ಕಂಪನಿ ಸೆಕ್ರೆಟರಿ ಆದ ಪಂಕಜ್ ತೇವಾರಿ ಅವರು ಗ್ರೂಪ್ ಲೆವೆಲ್ ನಲ್ಲಿ ನಾಯಕತ್ವ ನಿಭಾಯಿಸಲಿದ್ದಾರೆ.ಈ ಕುರಿತು ಮಾತನಾಡಿದ ಭಾರ್ತಿ ಏರ್‌ಟೆಲ್ ಚೇರ್ ಮನ್ ಸುನೀಲ್ ಭಾರ್ತಿ ಮಿತ್ತಲ್ ಅವರು, ‘ಏರ್‌ಟೆಲ್‌ನಲ್ಲಿ ನಾಯಕತ್ವ ಬದಲಾಗಿರುವುದು ನನಗೆ ಸಂತೋಷ ತಂದಿದೆ. ಗೋಪಾಲ್ ಮತ್ತು ಶಾಶ್ವತ್ ಇಬ್ಬರೂ ಈ ಸಂಸ್ಥೆಯನ್ನು ಇನ್ನಷ್ಟು ಬೆಳೆಸುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ನಾವು ನಮ್ಮ ಅತ್ಯಂತ ಹುಮ್ಮಸ್ಸಿನ ಮತ್ತು ವೃತ್ತಿಪರ ನಿರ್ವಹಣಾ ತಂಡದ ಬಗ್ಗೆ ಸದಾ ಹೆಮ್ಮೆಪಡುತ್ತೇವೆ. ನಾವು ವಿಶ್ವದ ಅತ್ಯುತ್ತಮ ಟೆಲಿಕಾಂ ಕಂಪನಿಯನ್ನು ನಿರ್ಮಿಸುವ ನಮ್ಮ ಮಹತ್ವಾಕಾಂಕ್ಷೆಯತ್ತ ಸಾಗುತ್ತಿದ್ದೇವೆ’ ಎಂದು ಹೇಳಿದರು.