ಎನ್‌ಸಿಡಿಸಿಯಿಂದ 550 ಕೋಟಿ ರು. ಆರ್ಥಿಕ ನೆರವು ಕೊಡಿಸಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಇಲ್ಲಿನ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ, ಬೀದರ್
ತೀವ್ರ ಸ್ವರೂಪದ ಆರ್ಥಿಕ ಸಂಕಟದಲ್ಲಿ ಸಿಲುಕಿರುವ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಎನ್‌ಸಿಡಿಸಿಯಿಂದ 550 ಕೋಟಿ ರು. ಆರ್ಥಿಕ ನೆರವು ಕೊಡಿಸಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಇಲ್ಲಿನ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅದ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.ಅವರು ಈ ಕುರಿತು ಬೆಂಗಳೂರಿನಲ್ಲಿ ಕಬ್ಬು ಆಭಿವೃದ್ದಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರಾದ ಗೋವಿಂದರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಕಾರ್ಖಾನೆ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಮತ್ತು ಈ ಸಮಸ್ಯೆಗೆ ಕಾರಣವಾದ ಅಂಶಗಳು ಹಾಗೂ ಕಾರ್ಖಾನೆಯ ನಿರ್ಮಾಣಕ್ಕಾಗಿ ಮಾಡಿದ ಸಾಲ, ಎಪ್‌ಆರ್‌ಪಿಗಿಂತ ಅಧಿಕ ಬೆಲೆ ಪಾವತಿಸಿದ್ದರಿಂದ ಉಂಟಾದ ನಷ್ಟ, ಉಚಿತ ಸಕ್ಕರೆ ವಿತರಣೆಯಿಂದ ಆಗಿರುವ ನಷ್ಟ ಮತ್ತು ಬ್ಯಾಂಕ್ ಸಾಲದ ಬಡ್ಡಿ ಪಾವತಿ ಯಿಂದಾದ ಆರ್ಥಿಕ ಹೊರೆ ಕುರಿತು ಮಾಹಿತಿ ನೀಡಿದ್ದಾರೆ.
ರೈತ ಸದಸ್ಯರು, ಖಾಯಂ ನೌಕರರು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಮಾಡುವವರೂ ಸೇರಿದಂತೆ ಸುಮಾರು 2 ಲಕ್ಷ ಜನ ಈ ಕಾರ್ಖಾನೆಯನ್ನು ಅವಲಂಬಿಸಿದ್ದಾರೆ. ತೀವ್ರ ಸ್ವರೂಪದ ಆರ್ಥಿಕ ಸಮಸ್ಯೆಯಿಂದಾಗಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದ್ದು, ಕಾರ್ಖಾನೆ ಸ್ಥಗಿತಗೊಂಡಲ್ಲಿ, 2 ಲಕ್ಷ ಜನರ ಬದುಕು ಪ್ರಭಾವಿತವಾಗುತ್ತದೆ. ಕಬ್ಬು ಬೆಳೆಗಾರರು ತೀವ್ರ ಸಂಕಟಕ್ಕೆ ಸಿಲುಕಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎಂದು ಸೂರ್ಯಕಾಂತ್ ಆತಂಕವ್ಯಕ್ತಪಡಿಸಿದ್ದಾರೆ.ಡಿಸಿಸಿ ಬ್ಯಾಂಕಿನಿಂದ ಪಡೆದ ಅಸಲು ಸಾಲದ ಮೊತ್ತ 57.90 ಕೋಟಿ ರುಪಾಯಿ ಮಾತ್ರ ಆಗಿದೆ ಆದರೆ ಕಳೆದ 2002-03 ರಿಂದ 2024-25 ವರೆಗಿನ ಅವಧಿ ಯಲ್ಲಿ ಸಾಲದ ಮೇಲಿನ ಬಡ್ಡಿಯ ಮೊತ್ತವು 668 ಕೋಟಿ ರು. ಆಗಿದೆ. ಈ ಬೃಹತ್ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿ ಕಾರ್ಖಾನೆ ಇಲ್ಲ. ಬಡ್ಡಿಯ ಹೊರೆಯು ಕಾರಖಾನೆಯ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಹದಗೆಡುವಂತೆ ಮಾಡಿದೆ ಹೀಗಾಗಿ ಬ್ಯಾಂಕುಗಳ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿಸಬೇಕು ಎಂದು ಮನವಿಸಿದ್ದಾರೆ.
ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿರುವ ಬೀದರ್ ಸಹಕಾರ ಸಕ್ಕರೆ ಕಾರಖಾನೆ, ವಿಜಯಪುರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆ, ಬೈಲಹೊಂಗಲದ ಮಲಪ್ರಭಾ ಸಹಕಾರ ಸಕ್ಕರೆ ಕಾರಖಾನೆ, ವಿಜಯಪುರದ ಭೀಮಾಶಂಕರ ಸಹಕಾರ ಸಕ್ಕರೆ ಕಾರಖಾನೆ ಮತ್ತು ಬೆಳಗಾವಿಯ ಸಂಗಮ ಸಹಕಾರ ಸಕ್ಕರೆ ಕಾರಖಾನೆಗಳಿಗೆ ಎನ್‌ಸಿಡಿಸಿಯಿಂದ ಸಾಲ ಕೊಡಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ಈ ಪಟ್ಟಿಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಯನ್ನೂ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.ಎನ್‌ಸಿಡಿಸಿಯಿಂದ 550 ಕೋಟಿ ರೂ. ಆರ್ಥಿಕ ನೆರವು ಕೊಡಿಸಬೇಕು. ಇದರಲ್ಲಿ ಡಿಸಿಸಿ ಬ್ಯಾಂಕಿನ ಅಸಲು ಸಾಲ ₹57.90 ಕೋಟಿ ಮತ್ತು ಅಪೆಕ್ಸ್ ಬ್ಯಾಂಕಿನ ₹40 ಕೋಟಿ ಪಾವತಿಸಿ, ಉಳಿದ ಮೊತ್ತವನ್ನು 60 ಕೆಪಿಎಲ್‌ಡಿ ಸಾಮರ್ಥ್ಯದ ಎಥೆನಾಲ್ ಘಟಕ ಸ್ಥಾಪನೆ ಮತ್ತು ದುಡಿಯುವ ಬಂಡವಾಳಕ್ಕೆ ಬಳಸಲಾಗುತ್ತದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ತಿಳಿಸಿದ್ದಾರೆ.