ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನವರಾತ್ರಿ ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಸೋಮವಾರ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರ್ಜರಿಯಾಗಿ ನಡೆಯಿತು.ದಶಮಿಯ ದಿನವಾದ ಬುಧವಾರ ಮತ್ತ ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿ, ವಾಹನಗಳಿಗೆ ಮಂಗಳವಾರವೇ ಆಯುಧ ಪೂಜೆ ನೆರವೇರಿಸಲಿವೆ. ಹೀಗಾಗಿ ಎರಡು ದಿನ ಮುಂಚಿತವಾಗಿಯೇ ಜನತೆ ಖರೀದಿಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿ ಕಂಡುಬಂತು.
ನಗರದ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಯಶವಂತಪುರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಜಯನಗರ ಸೇರಿ ವಿವಿಧ ಮಾರುಕಟ್ಟೆಗಳು ಹೂವು, ಹಣ್ಣು, ಬೂದುಗುಂಬಳಕಾಯಿ, ಬಾಳೆಕಂದು, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿ ಹೋಗಿವೆ. ನಗರದ ಹಲವೆಡೆ ಬೀದಿಗಳಲ್ಲಿ ರೈತರು ಬಾಳೆಕಂದು, ಬೂದುಗುಂಬಳ ಮಾರಾಟಕ್ಕೆ ತಂದಿಟ್ಟುಕೊಂಡಿದ್ದಾರೆ.ಬೂದುಗುಂಬಳ ದರ ಹೆಚ್ಚಳ:
ಆಯುಧಪೂಜೆ ದಿನ ಅಂಗಡಿ, ಮನೆ, ವಾಹನಗಳು, ಕಚೇರಿಗಳೂ, ಕಾರ್ಖಾನೆಗಳಲ್ಲಿನ ಯಂತ್ರೋಪಕರಣಗಳ ಪೂಜೆಗೆ ಬಳಕೆಯಾಗುವ ಬೂದಗುಂಬಳದ ಬೆಲೆ ಈ ಬಾರಿ ಹೆಚ್ಚಾಗಿದೆ. ಸಗಟು ದರದಲ್ಲಿ 25-30 ದರ ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆಜಿ ₹ 40 ರಿಂದ ₹ 60 ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ಕೆಲವರು ಕೆಜಿಗೆ ಬದಲಾಗಿ ಕಾಯಿಯ ಗಾತ್ರದ ಮೇಲೆ ಚಿಕ್ಕ ಕಾಯಿಗೆ ₹100 - ₹150, ದೊಡ್ಡ ಕಾಯಿಗೆ ₹ 200 - ₹250 ವರೆಗೂ ಮಾರಾಟ ಮಾಡುತ್ತಿದ್ದಾರೆ. ಹಬ್ಬದ ದಿನ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳಿದರು.ದಸರಾ ಹಬ್ಬಕ್ಕೆಂದು ತಮಿಳುನಾಡು, ಆಂಧ್ರಪ್ರದೇಶದಿಂದ ಬೂದಗುಂಬಳಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಈ ವರ್ಷ ಅಲ್ಲಿ ಮಳೆಯಿಂದಾಗಿ ಬೆಳೆ ಹಾಳಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕಾಯಿ ಬರುತ್ತಿದೆ. ಕರ್ನಾಟಕದಲ್ಲೂ ಬೆಳೆಯಲಾಗಿದೆ. ಆದರೆ ಹಬ್ಬಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಬೆಲೆಗಳನ್ನು ಹೆಚ್ಚಿಸಿ ಮಾರಲಾಗುತ್ತಿದೆ.
ಗುಲಾಬಿ ದುಬಾರಿ:ಹಬ್ಬದ ವೇಳೆ ಕೆಲ ಹೂವುಗಳು ದುಬಾರಿಯಾಗಿದ್ದರೆ ಇನ್ನು ಕೆಲ ಹೂವುಗಳ ದರ ಇಳಿದಿದೆ. ಈ ಬಾರಿ ಮಳೆ ಹಾಗೂ ರೋಗಬಾಧೆಯಿಂದ ಗುಲಾಬಿ ಬೆಳೆ ಹಾಳಾಗಿದ್ದು, ದರ ದುಬಾರಿಯಾಗಿದೆ. ಕೆಜಿ ಗುಲಾಬಿ ಹೂವು ಸಗಟು ದರದಲ್ಲಿ ₹ 250 - ₹300 ವರೆಗೆ ಇದ್ದರೆ, ಚಿಲ್ಲರೆ ದರದಲ್ಲಿ ₹ 400- 450 ನಂತೆ ಮಾರಾಟ ಮಾಡಲಾಗುತ್ತಿದೆ. ಸೇವಂತಿಗೆ ಹೂವು ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 200 - 250 ವರೆಗೆ ಮಾರಾಟ ಮಾಡುತ್ತಿದ್ದರೆ, ಚಿಲ್ಲರೆ ಮಾರಾಟಗಾರರು ₹ 300 - ₹ 350 ವರೆಗೆ ಮಾರುತ್ತಿದ್ದಾರೆ. ಚೆಂಡು ಹೂವು ದರ ಇಳಿಕೆಯಾಗಿದೆ. ಕನಕಾಂಬರ, ಮಲ್ಲಿಗೆ, ಕಾಕಡ, ಸುಗಂಧ ರಾಜ ಹೂವುಗಳ ದರವೂ ಸ್ವಲ್ಪ ಏರಿಕೆಯಾಗಿವೆ.
ಗುಲಾಬಿ ಹೂವು ಬೆಳೆ ಹಾಳಾಗಿರುವುದರಿಂದ ಇದರ ದರ ದುಬಾರಿಯಾಗಿದೆ. ಮತ್ತೊಂದೆಡೆ ಕೆ.ಆರ್. ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ನಿಬಂಂಧ ಹೇರಿರುವುದರಿಂದ ಶೇ. ೫೦ ವ್ಯಾಪಾರ ಕುಸಿದಿದೆ ಎಂದು ಕೆ.ಆರ್. ಮಾರುಕಟ್ಟೆ ಸಗಟು ಹೂವಿನ ಮಾರಾಟಗಾರರ ಸಂಘದ ಜಿ.ಎನ್. ದಿವಾಕರ್ ಹೇಳಿದರು.--------------ಕೆ.ಆರ್.ಮಾರುಕಟ್ಟೆ ಸಗಟು ದರ
ಹೂದರ (ಕೆಜಿ/₹)ಮಲ್ಲಿಗೆ ಹೂವು400-800
ಗುಲಾಬಿ300ಕಾಕಡ400
ಕನಕಾಂಬರ1000ಸುಗಂಧ ರಾಜ120-300
ಚೆಂಡು ಹೂವು30-50-------
ಹಣ್ಣುಗಳುದರ (ಕೆಜಿ/₹)ದಾಳಿಂಬೆ120-150ಸೇಬು80-120ಮೂಸಂಬಿ50-80ಏಲಕ್ಕಿ ಬಾಳೆ100ಪಚ್ಚಬಾಳೆ30ನಿಂಬೆಹಣ್ಣು100