ನಗರದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ಅ.3 ರಂದು ನಡೆಯಲಿದ್ದು, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌ ಸೇರಿ ಅನೇಕರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.

ಬೆಂಗಳೂರು : ನಗರದ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ಘಟಿಕೋತ್ಸವ ಅ.3 ರಂದು ನಡೆಯಲಿದ್ದು, ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌, ಹೋಮಿಯೋಪಥಿ ವೈದ್ಯ ಡಾ.ಬಿ.ಟಿ.ರುದ್ರೇಶ್‌, ಶಿಕ್ಷಣ ತಜ್ಞೆ ಡಾ.ಎಚ್‌.ಎನ್‌.ಉಷಾ, ಬಯೋಕಾನ್‌ನ ಡಾ.ಕಿರಣ್‌ ಮಜುಂದಾರ್‌ ಷಾ, ಮಾನವ ಹಕ್ಕುಗಳ ಹೋರಾಟಗಾರ್ತಿ ದು.ಸರಸ್ವತಿ, ಕ್ರಿಕೆಟ್‌ ತಾರೆ ವೇದಾ ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿಯ ಕುಲಪತಿ ಡಾ.ಟಿ.ಎಂ.ಮಂಜುನಾಥ್‌, ಜ್ಞಾನಜ್ಯೋತಿ ಸಭಾಂಗಣದಲ್ಲಿ 2023-24 ಮತ್ತು 2024-25ನೇ ಸಾಲಿನ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಿವಿಯ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಮಾಜಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

3573 ವಿದ್ಯಾರ್ಥಿಗಳಿಗೆ ಪದವಿ:

ಎರಡು ವರ್ಷದಿಂದ ಒಟ್ಟಾರೆ, ಪದವಿ ಹಾಗೂ ಸ್ನಾಕೋತ್ತರ ವಿಭಾಗದಲ್ಲಿ 107 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದಿದ್ದು, 52 ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ. 3573 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.