ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ: ಭಾರತಿ ವಿಷ್ಣುವರ್ಧನ್

| Published : Sep 19 2025, 01:00 AM IST

ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ: ಭಾರತಿ ವಿಷ್ಣುವರ್ಧನ್
Share this Article
  • FB
  • TW
  • Linkdin
  • Email

ಸಾರಾಂಶ

ನಿಮಗೆ ಆಗಿರುವ ಸಂತೋಷ ನೋಡಿ ನನಗೆ ಬಹಳಷ್ಟು ಖುಷಿಯಾಗಿದೆ. ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಳ್ಳೆಯ ಕೆಲಸಗಳನ್ನು ಮಾಡೋಣ. ನಮ್ಮ ಅಭಿಮಾನಿಗಳು ಬುದ್ಧಿವಂತರು ಹಾಗೂ ವಿದ್ಯಾವಂತರು ಎಂಬುದು ಗೊತ್ತಿದೆ. ನಿಮ್ಮ ಪ್ರೀತಿ ಹೀಗೆ ಇರಲಿ.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಕುಟುಂಬದ ಬಗ್ಗೆ ಯಾರಾದರು, ಏನಾದರೂ ಇಲ್ಲದಿರುವುದನ್ನು ಹೇಳಿದರೆ ನಂಬಬೇಡಿ. ಏನೇ ಇದ್ದರೂ ನೇರವಾಗಿ ಬಂದು ಮಾತನಾಡಿ ಸರಿಪಡಿಸಿಕೊಳ್ಳಿ ಎಂದು ನಟಿ ಭಾರತಿ ವಿಷ್ಣುವರ್ಧನ್‌ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ನಗರದ ಹೊರ ವಲಯದ ಉದ್ಭೂರು ಗೇಟ್‌ ಬಳಿ ಇರುವ ವಿಷ್ಣುವರ್ಧನ್‌ ಸ್ಮಾರಕ ಬಳಿ ವಿಷ್ಣುವರ್ಧನ್‌ ಹುಟ್ಟುಹಬ್ಬ ಅಂಗವಾಗಿ ಗುರುವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲದಿರುವುದು ಮಾತನಾಡಿದಾಗ ನಮ್ಮ ಮನಸ್ಸಿಗೂ ಕಷ್ಟ ಆಗುತ್ತದೆ. ಯಾರೋ, ಏನೋ ಹೇಳಿದರೆ ತಪ್ಪಾಗಿ ತಿಳಿದುಕೊಳ್ಳಬೇಡಿ. ನಮ್ಮ ಮನೆಗೆ ಬಂದು ಏನೇ ಇದ್ದರೂ ಮಾತನಾಡಿ ಸರಿಪಡಿಸಿಕೊಳ್ಳಿ ಎಂದರು.

ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ ಮಾತನಾಡಿ, ನಿಮಗೆ ಆಗಿರುವ ಸಂತೋಷ ನೋಡಿ ನನಗೆ ಬಹಳಷ್ಟು ಖುಷಿಯಾಗಿದೆ. ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜೊತೆಯಲ್ಲೇ ಇದ್ದಾರೆ. ಎಲ್ಲರೂ ಒಳ್ಳೆಯ ಕೆಲಸಗಳನ್ನು ಮಾಡೋಣ. ನಮ್ಮ ಅಭಿಮಾನಿಗಳು ಬುದ್ಧಿವಂತರು ಹಾಗೂ ವಿದ್ಯಾವಂತರು ಎಂಬುದು ಗೊತ್ತಿದೆ. ನಿಮ್ಮ ಪ್ರೀತಿ ಹೀಗೆ ಇರಲಿ. ನಮ್ಮ ಯಜಮಾನರ ಮೊಮ್ಮಗ ಜೇಷ್ಟವರ್ಧನ್ ಬಂದಿದ್ದಾನೆ. ಅವನಿಗೆ ನಿಮ್ಮ ಪ್ರೀತಿ ಇರಲಿ ಎಂದು ಕೋರಿದರು.

ರಾಜ್ಯ ಸರ್ಕಾರ ವಿಷ್ಣುವರ್ಧನ್‌ ಅವರಿಗೆ ಕರ್ನಾಟಕ ರತ್ನ ಕೊಟ್ಟಿದೆ. ಆದ್ದರಿಂದ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಸಂತೋಷವೇ ನಮ್ಮ ಸಂತೋಷ. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದು ಅವರು ಮನವಿ ಮಾಡಿದರು.

ವಿಷ್ಣುವರ್ಧನ್‌ ಜನ್ಮದಿನದ ಅಂಗವಾಗಿ ನಾಳೆ ವಿಶೇಷ ಗಾಯನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ನಕ್ಷತ್ರ ಅಕಾಡೆಮಿ ಆಫ್‌ ಆರ್ಟ್ಸ್‌, ಮಲ್ಟಿ ಟ್ಯಾಲೆಂಟ್‌ ಕ್ರಿಯೇಟರ್ಸ್, ಮೋಹನ ಮಾಧುರ್ಯ ಕಲಾರಸಿಕರ ಸ್ನೇಹ ಬಳಗದಿಂದ ಸೆ.20 ರಂದು ಸಂಜೆ 5ಕ್ಕೆ ಜಗನ್ಮೋಹನ ಅರಮನೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಗಾಯನ ಕಾರ್ಯಕ್ರಮ ಏರ್ಪಡಿಸಿದೆ.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು. ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಉದ್ಘಾಟಿಸುವರು. ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಿ.ಟಿ. ಪ್ರಕಾಶ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ,. ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ. ಕೆ.ಆರ್. ಕ್ಷೇತ್ರ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ನಂದೀಶ್‌ ನಾಯಕ್‌ ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರನ್ನು ಸನ್ಮಾನಿಸಲಾಗುವುದು ಎಂದು ಮೋಹನ್‌ ಮಾಧರ್ಯ ತಿಳಿಸಿದ್ದಾರೆ.