ಮಾಸದ ಮಾಧುರ್ಯ ಕಾರ್ಯಕ್ರಮಕ್ಕೆ 100ರ ಸಂಭ್ರಮ

| Published : Sep 29 2025, 03:02 AM IST

ಸಾರಾಂಶ

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯು ಸಾರ್ವಜನಿಕ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂಬ ಉದ್ದೇಶದಿಂದ ಆರಂಭಿಸಿದ ‘ಮಾಸದ ಮಾಧುರ್ಯ’ ಕಾರ್ಯಕ್ರಮ ಭಾನುವಾರ ಯಶಸ್ವಿ 100ರ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯು ಸಾರ್ವಜನಿಕ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂಬ ಉದ್ದೇಶದಿಂದ ಆರಂಭಿಸಿದ ‘ಮಾಸದ ಮಾಧುರ್ಯ’ ಕಾರ್ಯಕ್ರಮ ಭಾನುವಾರ ಯಶಸ್ವಿ 100ರ ಸಂಭ್ರಮಕ್ಕೆ ಸಾಕ್ಷಿಯಾಯಿತು.

‘ಮಾಸದ ಮಾಧುರ್ಯ’ಕ್ಕೆ ನೂರು ತುಂಬಿದ ಹಿನ್ನೆಲೆಯಲ್ಲಿ ತೆಲುಗು ವಿಜ್ಞಾನ ಸಮಿತಿಯ ಶ್ರೀ ಕೃಷ್ಣದೇವರಾಯ ಸಭಾಂಗಣದಲ್ಲಿ 100ರ ನೋಟ ಪ್ರದರ್ಶಿನಿಯನ್ನು ಭಾನುವಾರ ಬೆಳಗ್ಗೆ ಉದ್ಘಾಟಿಸಿ ದಿನವಿಡೀ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರದರ್ಶಿನಿ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಪರಿಷತ್ ಸದಸ್ಯ ಕೇಶವಪ್ರಸಾದ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ‘ಮಾಸದ ಮಾಧುರ್ಯ’ ಸಂಚಾಲಕ ದತ್ತಗುರು ಹೆಗ್ಡೆ, ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕಿ ರೂಪಾ ಅಯ್ಯರ್, ಸಹ ಸಂಚಾಲಕ ಎಚ್.ಎ.ಆತ್ಮಾನಂದ ಮತ್ತಿತರರು ಪಾಲ್ಗೊಂಡಿದ್ದರು.

ಉತ್ಸಾಹಕ್ಕೆ ಸಹಕಾರಿ:ವಿಜಯೇಂದ್ರ:

ಬಳಿಕ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜಕೀಯ ಜಂಜಾಟದಿಂದ ಹೊರಬರಲು ಕಲೆ, ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸಿಕೊಂಡರೆ ಉತ್ಸಾಹ, ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಜಗನ್ನಾಥ ಭವನವು ಕೇವಲ ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾಗದೇ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಕೇಂದ್ರವಾಗಿದೆ ಎಂದು ಬಣ್ಣಿಸಿದರು.

ಸಾರ್ವಜನಿಕ ಚಟುವಟಿಕೆಗೆ ಬಳಕೆ:ಸಂತೋಷ್‌:

ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಮಾತನಾಡಿ, ಜಗನ್ನಾಥ ಭವನವು ಸಾರ್ವಜನಿಕ ಚಟುವಟಿಕೆಗೆ ಬಳಕೆಯಾಗಬೇಕು ಎಂದು ‘ಮಾಸದ ಮಾಧುರ್ಯ’ ಕಾರ್ಯಕ್ರಮ ಆರಂಭಿಸಲಾಗಿದೆ. ಗಣೇಶ್ ಯಾಜಿ ಮತ್ತು ದತ್ತಗುರು ಹೆಗ್ಡೆ ಅವರು ಈ ಕಾರ್ಯಕ್ರಮದ ಜೊತೆ ಬಲವಾಗಿ ನಿಂತಿದ್ದರು. 100 ಕಾರ್ಯಕ್ರಮವನ್ನು ನಿರಂತರವಾಗಿ ಮುನ್ನಡೆಸಡುವುದು ಒಂದು ವ್ರತದಂತೆ ಎಂದು ತಿಳಿಸಿದರು.

ಜಗನ್ನಾಥ ಭವನವು ದೈವಿಕ ಶಕ್ತಿಗಳಿರುವ ಪ್ರದೇಶದಲ್ಲಿದೆ. ಸುತ್ತಲಿನ ಜನರನ್ನು ನಮ್ಮ ಜೊತೆ ಜೋಡಿಸಲು ಇದು ಪೂರಕ. ಮಾಸದ ಮಾಧುರ್ಯವು ಸದಭಿರುಚಿಯನ್ನು ಹುಟ್ಟು ಹಾಕಿದೆ. ಬೇರೆ ರಾಜ್ಯದ ಕಾರ್ಯಾಲಯಗಳಿಗೆ ಹೋಲಿಸಿದರೆ ಜಗನ್ನಾಥ ಭವನ ಚಿಕ್ಕದಾದರೂ ಇಲ್ಲಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ಆತ್ಮೀಯ ವಾತಾವರಣವಿದೆ ಎಂದು ವಿಶ್ಲೇಷಿಸಿದರು. ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.