ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ!

| N/A | Published : Sep 28 2025, 10:47 AM IST

Durga Devi

ಸಾರಾಂಶ

ʻದುರ್ಗಾಪೂಜೆಯ ಸಂದರ್ಭದ ಕೋಲ್ಕತ್ತಾದ ನಿಜ ಸ್ವರೂಪವನ್ನು ಕಾಣಬೇಕೆಂದಿದ್ದರೆ ನೀವು ರಾತ್ರಿ ಒಂಭತ್ತರ ಈ ಹೊತ್ತಿನಲ್ಲೇ ಬೀದಿಗಿಳಿಯಬೇಕುʼ ಎಂದು ಪರಿಚಿತ ಬಿಶ್ವಜಿತ್ ಮೊದಲೇ ಹೇಳಿದ್ದ. ಆತ ಹೇಳಿದ್ದು ಅನುಭವದ ಮಾತು ಎಂದು ನಾವು ಹಿಂತಿರುಗಿದಾಗ ಪೂರ್ತಿಯಾಗಿ ಅರ್ಥವಾಗಿ ಬಿಟ್ಟಿತ್ತು

ರಾಧಿಕಾ ವಿಟ್ಲ

ಗಂಟೆ ರಾತ್ರಿ ಒಂಭತ್ತು ದಾಟಿತ್ತು. ಆಗಷ್ಟೇ ಊಟ ಮುಗಿಸಿ ನಮ್ಮ ಸೈನ್ಯ ನಿಧಾನಕ್ಕೆ ಕೋಲ್ಕತ್ತಾದ ಬೀದಿಗಿಳಿಯಿತು. ರಸ್ತೆಗಳೆಲ್ಲ ಝಗಮಗಿಸಿ ಬಣ್ಣಬಣ್ಣದ ಚಿತ್ತಾರ ಬರೆದು ಮಾಯಾಲೋಕವನ್ನೇ ಸೃಷ್ಟಿಸಿದ್ದವು. ʻದುರ್ಗಾಪೂಜೆಯ ಸಂದರ್ಭದ ಕೋಲ್ಕತ್ತಾದ ನಿಜ ಸ್ವರೂಪವನ್ನು ಕಾಣಬೇಕೆಂದಿದ್ದರೆ ನೀವು ಈ ಹೊತ್ತಿನಲ್ಲೇ ಬೀದಿಗಿಳಿಯಬೇಕುʼ ಎಂದು ಪರಿಚಿತ ಬಿಶ್ವಜಿತ್ ಮೊದಲೇ ಹೇಳಿದ್ದ. ಆತ ಹೇಳಿದ್ದು ಅನುಭವದ ಮಾತು ಎಂದು ನಾವು ಹಿಂತಿರುಗಿದಾಗ ಪೂರ್ತಿಯಾಗಿ ಅರ್ಥವಾಗಿ ಬಿಟ್ಟಿತ್ತು. ಯಾಕೆಂದರೆ, ನಾವು ವಾಪಸ್ ರೂಮಿಗೆ ಮರಳಿದ್ದು ಬೆಳಗ್ಗಿನ ಜಾವ ಆರು ಗಂಟೆಗೆ! ಆಗಲೇ ಸೂರ್ಯ ನಿದ್ದೆ ಮುಗಿಸಿದ ಖುಷಿಯಲ್ಲಿ ಲಕಲಕ ಹೊಳೆಯುತ್ತಿದ್ದ. ನಿದ್ದೆಯಿಲ್ಲದಿದ್ದರೂ ನಮ್ಮ ಕಣ್ಣ ತುಂಬಾ ರಾತ್ರಿಯಿಡೀ ನೋಡಿದ ಬೆಳಕಿತ್ತು.

ನವರಾತ್ರಿ ಮೊದಲೆರಡು ದಿನ ಬಿಡದೆ ಸುರಿದ ಮಳೆ, ರಸ್ತೆಯಲ್ಲಿ ತುಂಬಿದ ನೀರು ನಮಗಿಂತಲೂ, ಪಾಪ, ಈ ಬಾರಿ ಕೋಲ್ಕತ್ತಾ ನಿವಾಸಿಗಳನ್ನು ಬಹಳವೇ ಕಾಡಿತ್ತು. ಆದರೂ ನಮ್ಮ ಆ ರಾತ್ರಿಗಳ ಪಾದಯಾತ್ರೆಯ ಸುತ್ತಾಟಕ್ಕೆ ಮಳೆರಾಯ ಪೂರ್ಣ ಅನುಮತಿ ನೀಡಿ ಸುಮ್ಮನಾಗಿದ್ದ. ಎರಡು ದಿನಗಳಿಗಾಗುವಷ್ಟು ಒಮ್ಮೆಯೇ ನಡೆದ ಖುಷಿ, ರಾಶಿ ಚಿತ್ರಗಳ ಸೆರೆಹಿಡಿದ ಜೊತೆಗೊಂದು ಸಾರ್ಥಕ್ಯದ ಭಾವ ಎದೆಯ ತುಂಬಿತ್ತು.

ದುರ್ಗಾಪೂಜೆಯ ಸಂಭ್ರಮಕ್ಕೆ ಕೋಲ್ಕತ್ತಾಗೆ ಬಂದರೆ ಸಾಕು ನೀವು ಇಲ್ಲಿಂದಲೇ ಜಗತ್ತು ನೋಡಬಹುದು. ಈಗಷ್ಟೇ ನೀವು ಪುರಿ ಜಗನ್ನಾಥನ ದೇಗುಲ ಹೊಕ್ಕು ದರ್ಶನ ಮುಗಿಸಿ ರಸ್ತೆ ದಾಟಿ ಮತ್ತೊಂದು ಗಲ್ಲಿಯಲ್ಲಿರುವ ನ್ಯೂಜೆರ್ಸಿಯ ಅಕ್ಷರಧಾಮದೊಳಗೆ ಕಾಲಿಡಬಹುದು. ಅಲ್ಲಿಂದ ಹೊರಬಂದು ಅಲ್ಲೇ ಪಕ್ಕದಲ್ಲಿ ರಸ್ತೆಬದಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಮತ್ತೊಂದು ಗಲ್ಲಿಯತ್ತ ತಿರುಗಿ ಅಲ್ಲಿ ಶಿವತಾಂಡವ ರೂಪವನ್ನು ಕಣ್ತುಂಬಿಕೊಂಡು, ಗಂಟೆಯೊಳಗೆ ಕೇರಳದ ತೆಯ್ಯಂಗೂ ಸಾಕ್ಷಿಯಾಗಬಹುದು.

ಭೂಮಿ, ದುಂಡಗಿದೆ, ಜಗತ್ತು ಬೆರಳ ತುದಿಯಲ್ಲೇ ಇದೆ ಎಂದುಕೊಂಡು, ಕುಳಿತಲ್ಲೇ ಕೋಲ್ಕತ್ತಾದ ದುರ್ಗಾಪೂಜೆಯ ಸಂಭ್ರಮವನ್ನು ಅರ್ಧ ಗಂಟೆಯಲ್ಲಿ ಅರುವತ್ತು ರೀಲ್ಸ್ ನೋಡಿ ಹೊದ್ದು ಮಲಗಬಹುದು, ನಿಜ. ಆದರೆ, ಕೋಲ್ಕತ್ತಾದ ಬೀದಿಗಳಲ್ಲಿ ಸುತ್ತಾಡಿ, ಅದು ನಮ್ಮ ಕಣ್ಣೆದುರು ಮಾಯಾಲೋಕವಾಗಿ ತೆರೆದುಕೊಳ್ಳುವ ಅನುಭವ ಮಾತ್ರ ವಿಶೇಷವಾದದ್ದು. ಕೊಲ್ಕತ್ತಾಕ್ಕೆ ಹೋಗಿಯೂ ರಾತ್ರಿಯಿಡೀ ಬೀದಿ ಬೀದಿ ಸುತ್ತದಿದ್ದರೆ ಇಡೀ ನಗರವೇ ಏಕೋಧ್ಯಾನದ ಅಲೆಯಲ್ಲಿ ಮಿಂದೇಳುವ ಅನುಭೂತಿಯನ್ನು ಸಂಪೂರ್ಣವಗಿ ದಕ್ಕಿಸಲು ಸಾಧ್ಯವಾಗದು.

ಮಹಾಲಯ ಬಂದರೆ ಸಾಕು, ಕೋಲ್ಕತ್ತಾದ ಯುನೆಸ್ಕೋ ಮಾನ್ಯತೆ ಪಡೆದ ಈ ದುರ್ಗಾಪೂಜೆಗೆ ಆರಂಭ ಸಿಕ್ಕಿದ ಹಾಗೆಯೇ. ಭೂಮಿಗಿಳಿದು ಬರುವ ದುರ್ಗೆಯನ್ನು ಸ್ವಾಗತಿಸಲು ಅವರು ತಮ್ಮ ತನುಮನಧನವನ್ನೆಲ್ಲ ಧಾರೆಯೆರೆಯುವ ಜೊತೆಗೆ, ಅತ್ಯಂತ ಕ್ರಿಯಾತ್ಮಕವಾಗಿಯೂ ತಯಾರಾಗುತ್ತಾರೆ. ಆಗಲೇ ಕೋಲ್ಕೊತ್ತಾದ ಬೀದಿ ಬೀದಿಗಳು, ತೊಳೆದು ಒಪ್ಪಗೊಂಡು, ಪೇಂಟ್ ಬಳಿದುಕೊಂಡು, ಶೃಂಗಾರಗೊಳ್ಳಲು ಶುರುವಾಗುತ್ತದೆ. ಮರದ ಮೇಲೆ ಕ್ಯಾಮೋಫ್ಲಾಜ್ ಆಗಿ ಕುಳಿತ ಓತಿಕ್ಯಾತವೊಂದು ನಾವು ಕಣ್ಣು ಮಿಟುಕಿಸುವುದರೊಂದಗೆ ಕಲರ್ಫುಲ್ ಆಗಿ ಬದಲಾಗಿ ಮಾಯೆ ಸೃಷ್ಟಿಸುವ ಹಾಗೆ ಕೋಲ್ಕತ್ತಾ ಥಟ್ಟನೆ ಮಗ್ಗುಲು ಬದಲಾಯಿಸಿ ಝಗಮಗಿಸುತ್ತದೆ. ಅವವೇ ಬದುಕಿನ ಜಂಜಾಟಗಳಿಂದ ಬಿಡಿಸಿಕೊಂಡು, ಅತ್ಯದ್ಭುತ ಜೀವನಪ್ರೀತಿಯಿಂದ ಹಗಲಿರುಳು ಬೆವರು ಸುರಿಸು ದುಡಿದು ಸಂಭ್ರಮಿಸುವುದಕ್ಕೆ ಸಾಕ್ಷಿಯಾಗುವುದೇ ಒಂದು ಜೀವನಾನುನುಭವ, ಸಂಭ್ರಮ.

ದುರ್ಗಾಪೂಜೆಯ ಐತಿಹ್ಯ:

ಕೋಲ್ಕತ್ತಾ ನಗರಿಯ ದುರ್ಗಾಪೂಜೆಯ ಐತಿಹ್ಯ ಸುಮಾರು ೫೦೦-೬೦೦ ವರ್ಷಗಳ ಹಿಂದಕ್ಕೋಡುತ್ತದೆ. ೧೪೮೦ರಲ್ಲಿ ರಾಜ ಕಂಗ್ಶನಾರಾಯಣ ಎಂಬಾತ ತಾಹಿರ್ಪುರ (ಈಗಿನ ಬಾಂಗ್ಲಾದೇಶ) ಎಂಬಲ್ಲಿ ಮೊದಲ ದುರ್ಗಾ ಪೂಜೆಯನ್ನು ಬಹಳ ಆಡಂಬರದಿಂದ ಸಾರ್ವಜನಿಕವಾಗಿ ಆಚರಿಸಿದ ಎಂದು ಹೇಳಲಾಗುತ್ತದೆ. ಅದಕ್ಕೂ ಮೊದಲು ಬಂಗಾಲಿಗಳು ದುರ್ಗಾಪೂಜೆ ಆಚರಿಸುತ್ತಿದ್ದ ಬಗೆಗೆ ದಾಖಲೆಗಳು ಸಿಗುವುದಿಲ್ಲ. ಹಲವು ಜಮೀನ್ದಾರರು ೧೮ನೇ ಶತಮಾನದಲ್ಲಿ ಬಹಳ ಆಡಂಬರದಿಂದ ದುರ್ಗಾಪೂಜೆಯನ್ನು ಆಚರಿಸುತ್ತಿದ್ದ ಬಗೆಗೂ ದಾಖಲೆಗಳು ಸಿಗುತ್ತವೆ. ಆದರೆ, ಇಂಥ ಆಚರಣೆಗಳು ಶ್ರೀಮಂತ ಕುಟುಂಬಗಳ ಖಾಸಗಿ ಸಮಾರಂಭಗಳಾಗಿರುತ್ತಿದ್ದವು.ನಂತರ ನಿಧಾನವಾಗಿ ಇವು ಸಾರ್ವಜನಿಕ ವಲಯಕ್ಕೂ ಪ್ರವೇಶಿಸಿ, ಇಂದು ಕೋಲ್ಕತ್ತಾ ನಗರವೊಂದರಲ್ಲೇ ಪ್ರತಿ ವರ್ಷವೂ ಮೂರು ಸಾವಿರಕ್ಕೂ ಬಗೆಬಗೆಯ ಪೆಂಡಾಲ್ಗಳು ಎದ್ದು ನಿಲ್ಲುವಷ್ಟರಮಟ್ಟಿಗೆ ವ್ಯಾಪಕವಾಗಿ ಬೆಳೆದಿದೆ. ಇದು ಕೇವಲ ಒಂಭತ್ತು ದಿನಗಳ ಸಂಭ್ರಮ ಮಾತ್ರವಲ್ಲ. ಇದೇ ಒಂದು ಉದ್ದಿಮೆ. ವರ್ಷಪೂರ್ತಿ ಹಲವು ಲಕ್ಷ ಕುಟುಂಬಳಿಗೆ ಉದ್ಯೋಗವನ್ನೂ ಇದು ಸೃಷ್ಟಿಸಿದೆ.

ಹೂಗ್ಲಿ ತೀರದ ದುರ್ಗೆಯರು:

ದುರ್ಗೆಯ ಮೂರ್ತಿ ರಚನಾ ಕಾರ್ಯವು ವರ್ಷ ಪೂರ್ತಿ ನಡೆಯುವ ಕೈಂಕರ್ಯ. ಯಾಕೆಂದರೆ ಕೋಲ್ಕತ್ತಾದಲ್ಲಿ ರಚಿಸಲ್ಪಡುವ ದುರ್ಗೆಯ ಮೂರ್ತಿಗಳಿಗೆ ಪ್ರಪಂಚದಾಂದ್ಯಂತ ಮುಂಗಡ ಬುಕ್ಕಿಂಗ್ಗಳು ನಡೆಯುತ್ತವೆ. ಹಾಗಾಗಿ ಕುಮಾರ್ತುಲಿ ಎಂಬ ಹೂಗ್ಲೀ ನದೀ ತೀರದ ಪುಟ್ಟ ಗಲ್ಲಿಯ ಕುಂಬಾರ ಕುಟುಂಬಗಳು ತಮ್ಮ ಜೀವನದುದ್ದಕ್ಕೂ ದುರ್ಗೆಯ ರಚಿಸುವುದನ್ನೇ ಉದ್ಯೋಗವನ್ನಾಗಿಸಿಕೊಂಡಿವೆ. ಮನೆಯ ಸದಸ್ಯರೆಲ್ಲರದ್ದೂ ಇದೇ ಕೆಲಸ. ಆದರೂ ದುರ್ಗಾಪೂಜೆಗೆ ಮೂರ್ತಿ ರಚನಾ ಕಾರ್ಯಕ್ಕೆ ವೇಗ ದೊರೆಯುವುದು ಸುಮಾರು ಒಂದೂವರೆ ತಿಂಗಳಿಗೂ ಮುಂಚೆ. ಮೊದಲೇ ಬಿದಿರು ಹುಲ್ಲು ಹಾಗೂ ನದಿಯ ಆವೆ ಮಣ್ಣು ಬಳಸಿ ಮೂರ್ತಿಯ ಅಸ್ಥಿಪಂಜರ ತಯಾರು ಮಾಡಿಟ್ಟುಕೊಂಡು, ನಂತರ ಮಣ್ಣಿನಿಂದ ಬಗೆಬಗೆ ಥೀಮ್ಗಳು, ಹಾಗೂ ಗಾತ್ರಗಳ ಬೇಡಿಕೆಗಳಿಗೆ ಅನುಗುಣವಾಗಿ ರೂಪ ಕೊಡಲಾಗುತ್ತದೆ. ಅಂತಿಮವಾಗಿ ಮಹಾಲಯದ ದಿನದಂದೇ ಸಾಂಪ್ರದಾಯಿಕವಾಗಿ ಕಣ್ಣಿಗೆ ಜೀವ ನೀಡುವ ಆಚರಣೆಯಾದ ʻಚೊಕ್ಕುದಾನ್ʼ ಮಾಡಲಾಗುತ್ತದೆ. ವಿದೇಶಗಳಲ್ಲೂ ಬೇಡಿಕೆ ಇರುವ ಕೋಲ್ಕೊತ್ತಾದ ಈ ಕುಮಾರ್ತುಲಿ ದುರ್ಗಾ ಮೂರ್ತಿಗಳು ಪ್ರತಿ ವರ್ಷವೂ ಅಮೆರಿಕ, ಜರ್ಮನಿ, ಇಂಗ್ಲೆಂಡ್ಗಳಿಗೂ ಕಳುಹಿಸಲಾಗುತ್ತದೆ. ಈ ೧೫೦ ಕುಟುಂಬಗಳಿರುವ ಪುಟ್ಟ ಗಲ್ಲಿಯಲ್ಲಿ ಪ್ರತಿ ವರ್ಷ ಕೋಟಿಗಟ್ಟಲೆ ರುಪಾಯಿಗಳ ವಹಿವಾಟು ನಡೆಯುತ್ತದೆ.

ಪೆಂಡಾಲ್ ಹಾಪಿಂಗ್

ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಇತ್ಯಾದಿಗಳನ್ನು ಮುಗಿಸಿಕೊಂಡು, ದಂಡು ಕಟ್ಟಿಕೊಂಡು, ಸ್ನೇಹಿತರೊಂದಿಗೆ, ಬಂಧುಮಿತ್ರರೊಂದಿಗೆ ಪೆಂಡಾಲ್ಗಳ ವೀಕ್ಷಣೆಗೆ ತೆರಳುವುದೇ ಈ ಪೆಂಡಾಲ್ ಹಾಪಿಂಗ್. ಇದು ಕೋಲ್ಕತ್ತಾ ಜನತೆಯ ದುರ್ಗಾಪೂಜೆಯ ಒಂದು ಅವಿಭಾಜ್ಯ ಅಂಗದ ಹಾಗೆ. ದಿನದ ೨೪ ಗಂಟೆಯೂ ತೆರೆದಿರುವ ಪೆಂಡಾಲ್ಗಳಿಗೆ ವಿಶೇಷ ಕಳೆ ಬರುವುದು ರಾತ್ರಿಯ ಸಮಯದಲ್ಲಿಯೇ. ಸೂರ್ಯಾಸ್ತವಾದೊಡನೆಯೇ ಝಗಮಗಿಸುವ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಣ್ಸೆಳೆಯುವ ಇವುಗಳಿಗೆ ಜನತೆ ಮುಗಿಬೀಳುತ್ತಾರೆ. ಆದರೆ, ಈ ಸಮಯದಲ್ಲಿ, ಗಂಟೆಗಟ್ಟಲೆ ಸರದಿಯಲ್ಲಿ ಕಾದು ದುರ್ಗೆಯನ್ನು ಕಣ್ತುಂಬಿ, ಧನ್ಯತೆಯಿಂದ ಪೆಂಡಾಲ್ ವೀಕ್ಷಿಸಿ ಮರಳುವುದೇ ದೊಡ್ಡ ಸಾಹಸ. ಆದರೂ ಅದು ಅದಕ್ಕೂ ಮೀರಿದ ಸಂಭ್ರಮ ಕೂಡಾ. ಹೀಗಾಗಿ ಬಹುತೇಕರು, ಮುಖ್ಯವಾಗಿ ಯುವಜನತೆ, ತಮ್ಮ ಗೆಳಯರ ದಂಡು ಕಟ್ಟಿಕೊಂಡು ಹೊರಡುವುದು ರಾತ್ರಿ ಹತ್ತರ ನಂತರವೇ. ಮುಂಜಾವಿನ ಸೂರ್ಯೋದಯದವರೆಗೂ ರಾತ್ರಿ ಪೂರ್ತಿ ಈ ಪೆಂಡಾಲ್ ಹಾಪಿಂಗ್ ಭರ್ಜರಿಯಾಗಿಯೇ ನಡೆಯುತ್ತದೆ. ಮಧ್ಯರಾತ್ರಿ ಕೋಲ್ಕಾತ್ತಾದ ಗಿಜಿಗುಡುವ ಬೀದಿಗಳಲ್ಲಿ ಹೀಗೆ ಸುತ್ತುವುದೇ ಖುಷಿಕೊಡುವಂಥದ್ದು. ನಾವೂ ಮಾಡಿದ್ದು ಇಂತದ್ದೇ ಜಾಗರಣೆಯ ಪೆಂಡಾಲ್ ಹಾಪಿಂಗ್.

ತೆರೆದ ಕ್ಯಾನ್ವಾಸ್:

ಮನೆಮನೆಗಳ ಪೂಜೆ ಒಂದೆಡೆಯಾದರೆ, ಕೋಲ್ಕತ್ತಾದ ಶಕ್ತಿ ಅಡಗಿರುವುದು ಸಾರ್ವಜನಿಕ ಪೆಂಡಾಲ್ಗಳಲ್ಲಿ. ಅದರ ಆಡಂಬರದಲ್ಲಿ. ಅದನ್ನು ಕಟ್ಟುವ ಜನರ ಉತ್ಸಾಹದಲ್ಲಿ. ಪ್ರತಿ ವರ್ಷವೂ ಜನರನ್ನು ಕುತೂಹಲದಿಂದ ತುದಿಗಾಲಲ್ಲಿ ನಿಲ್ಲಿಸುವ ಪೆಂಡಾಲ್ಗಳು ಹಲವಿವೆ. ಇವು ಪೌರಾಣಿಕ ಕಥೆಗಳಿಂದ ಮೊದಲ್ಗೊಂಡು, ಸಾಮಾಜಿಕ ಕಳಕಳಿಯವರೆಗೆ ತಮ್ಮ ವಿಭಿನ್ನ ಕ್ರಿಯಾತ್ಮಕ ವಿನ್ಯಾಸ, ಕಾನ್ಸೆಪ್ಟ್ ಹಾಗೂ ಥೀಮ್ನ ಮೂಲಕ ಸಂದೇಶವನ್ನು ಹೊತ್ತು ತರುತ್ತವೆ. ವಿಭಿನ್ನ ಹಾಗೂ ಕ್ರಿಯಾತ್ಮಕವಾದ ಪೆಂಡಾಲ್ಗೆ ಪ್ರಶಸ್ತಿಯನ್ನೂ ನೀಡುವ ಪರಿಪಾಠವನ್ನು ಸರ್ಕಾರ ಇಟ್ಟುಕೊಂಡಿದೆ. ಈ ಬಾರಿ, ಮೂರು ಲಕ್ಷ ಬಾಟಲಿಗಳನ್ನು ಬಳಸಿ ನಿರ್ಮಿಸಲಾದ ಲಾಲ್ಬಾಗನ್ ನಬಂಕುರ್ನ ʼಕಾರಾಗ್ರಹʼ, ಅನುಶೀಲನ್ ಸಮಿತಿಯ ʻಆಹುತಿʼ, ಬಂಗಾಳಿ ಅಕ್ಷರನಮನ ಸಲ್ಲಿಸುವ ಥೀಮ್ನ ʼಬಾಂಗ್ಲಾ ಅಮರ್ ಮಾʼ, ಅರ್ಜುನ್ಪುರ್ ಆಮ್ರ ಸಬಾಯ್ ಕ್ಲಬ್ನ ಫ್ಯೂಚರಿಸ್ಟಿಕ್ ಕಾನ್ಸೆಪ್ಟ್ನ ʻಮುಖಾಮುಖಿʼ, ಕೊಲ್ಕತ್ತಾ ಪೊಲೀಸ್ ಸಮಿತಿಯ ಪುರಿ ಜಗನ್ನಾಥ, ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ನ ʻನ್ಯೂಜೆರ್ಸಿಯಲ್ಲಿರುವ ಅಕ್ಷರಧಾಮʼ, ದಮ್ ದಮ್ ಪಾರ್ಕ್ ಭಾರತ್ ಚಕ್ರದ ʻಧ್ಯಾನಮಗ್ನ ದುರ್ಗೆʼ, ಚೇತ್ಲಾ ಅಗ್ರಾಣಿಯ ರುದ್ರಾಕ್ಷಿಯʻಸಮುದ್ರ ಮಂಥನʼ.. ಹೀಗೆ ಬಗೆಬಗೆಯ ವಿಭಿನ್ನ ಆಲೋಚನೆಗಳ ಹಾಗೂ ಕ್ರಿಯಾತ್ಮಕ ಕಲಾವೈಭವಕ್ಕೆ ಸಾಕ್ಷಿಯಾಗುವ ಪೆಂಡಾಲ್ಗಳಿಂದ ಕೋಲ್ಕತ್ತಾ ನಗರಿ ತೆರೆದ ಕ್ಯಾನ್ವಾಸ್ ಆಗಿ ಬದಲಾಗಿದೆ.

ಬೊನೇದಿ ಬಾರಿಗಳ ಪೂಜೆಗಳು

ಬೊನೇದಿ ಬಾರಿಯ ಬಗ್ಗೆ ಹೇಳದಿದ್ದರೆ ಕೋಲ್ಕತ್ತಾದ ದುರ್ಗಾ ಪೂಜೆಯ ಸಂಭ್ರಮ ಪೂರ್ಣವಾಗದು. ಬೊನೇದಿ ಬಾರಿ ಎಂದರೆ, ಶತಮಾನಗಳಿಂದ ದುರ್ಗಾಪೂಜೆಯನ್ನು ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಜಮೀನ್ದಾರ/ಶ್ರೀಮಂತ ಕುಟುಂಬಗಳ ಬಂಗಲೆಗಳಲ್ಲಿ ನಡೆಯುವ ದುರ್ಗಾಪೂಜೆ. ಷಷ್ಠಿಯಿಂದ ಇಲ್ಲಿ ಪೂಜೆಗಳು ಅಧಿಕೃತವಾಗಿ ಆರಂಭವಾಗುತ್ತದೆ. ಇದರ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶವಿದೆ. ಶೋಭಾಬಜಾರ್ನಲ್ಲಿ 1757ರಿಂದ ನಡೆಯುತ್ತಿರುವ ಪೂಜೆ ಪ್ರಸಿದ್ಧ. ಇಲ್ಲಿ ದುರ್ಗೆಗೆ ಸಿಂಹದ ಬದಲು ಕುದುರೆಯ ಮುಖದ ವಾಹನವಿದೆ. ಇದಲ್ಲದೆ, ಸಬರ್ಣ ರಾಯ್ ಚೌಧರಿ ಕುಟುಂಬದ ಮನೆಯಲ್ಲಿ 414 ವರ್ಷಗಳಿಂದ ಪೂಜೆ ನಡೆದು ಬರುತ್ತಿದೆ. ಇಲ್ಲಿ ದೇವಿಯು ಹೊಂಬಣ್ಣದಿಂದ ಕಂಗೊಳಿಸುತ್ತಾಳೆ. ಇದಲ್ಲದೆ ರಾಣಿ ರಶ್ಮೋನಿಯ ಅರಮನೆಯಲ್ಲೂ ಬ್ರಿಟೀಷ್ ಕಾಲದಿಂದಲೂ ದುರ್ಗಾಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

Read more Articles on