ಸಾರಾಂಶ
ಭಾರತಕ್ಕೆ ಗುಂಪು ಹಂತದ ಕೊನೆ ಪಂದ್ಯ: ತಂಡ ಮತ್ತಷ್ಟು ಬಲಿಷ್ಠಗೊಳಿಸುವ ಅವಕಾಶ - ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಒತ್ತು । ವೇಗಿ ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ಸಾಧ್ಯತೆ
ಅಬುಧಾಬಿ: ಈ ಬಾರಿ ಏಷ್ಯಾಕಪ್‌ನಲ್ಲಿ ಈಗಾಗಲೇ ಸೂಪರ್-4 ಹಂತ ಪ್ರವೇಶಿಸಿರುವ 8 ಬಾರಿ ಚಾಂಪಿಯನ್ ಭಾರತ ತಂಡ, ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಶುಕ್ರವಾರ ಒಮಾನ್ ವಿರುದ್ಧ ಸೆಣಸಾಡಲಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ಆಡಬೇಕಿರುವ ಭಾರತ ತಂಡ, ಒಮಾನ್ ಪಂದ್ಯವನ್ನು ಅಭ್ಯಾಸ ರೂಪದಲ್ಲಿ ಬಳಸಿಕೊಳ್ಳಲಿದೆ.
ಆರಂಭಿಕ ಪಂದ್ಯದಲ್ಲಿ ಯುಎಇಯನ್ನು ಮಣಿಸಿ, 2ನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ, ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಪ್ರಮುಖವಾಗಿ ತಂಡ ಈ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಕಳೆದೆರಡು ಪಂದ್ಯಗಳಲ್ಲೂ ಗುರಿ ಬೆನ್ನತ್ತಿ ಗೆದ್ದಿದ್ದ ತಂಡ, ಒಮಾನ್ ವಿರುದ್ಧ ಮೊದಲು ಬ್ಯಾಟ್ ಮಾಡುವ ಅವಕಾಶಕ್ಕಾಗಿ ಕಾಯುತ್ತಿದೆ. ಅಭಿಷೇಕ್ ಶರ್ಮಾ ಅಬ್ಬರದ ಆಟವಾಡುತ್ತಿದ್ದರೂ, ಶುಭ್‌ಮನ್ ಗಿಲ್ ಇನ್ನಷ್ಟು ಸಮಯ ಕ್ರೀಸ್‌ನಲ್ಲಿ ಇರಬೇಕಾದ ಅಗತ್ಯವಿದೆ. ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಕೂಡಾ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದಾರೆ. ಇನ್ನು, ಸೂಪರ್-4ಗೂ ಮುನ್ನ ವಿಶ್ರಾಂತಿ ನೆಲೆಯಲ್ಲಿ ಒಮಾನ್ ವಿರುದ್ಧ ಪಂದ್ಯಕ್ಕೆ ವೇಗಿ ಬೂಮ್ರಾ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾದರೆ ಅರ್ಶ್‌ದೀಪ್ ಸಿಂಗ್‌ಗೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಅತ್ತ ಒಮಾನ್ ತಂಡ ಆರಂಭಿಕ 2 ಪಂದ್ಯಗಳಲ್ಲೂ ಸೋತಿದ್ದು, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ.
01ನೇ ಬಾರಿಭಾರತ ಹಾಗೂ ಒಮಾನ್ ತಂಡಗಳು ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
ನೇರಪ್ರಸಾರ: ಸೋನಿ ಲೈವ್, ಸೋನಿ ಸ್ಪೋರ್ಟ್ಸ್
ಭಾರತ vs ಪಾಕಿಸ್ತಾನ
ನಡುವೆ ನಾಡಿದ್ದು ಮತ್ತೆ
ಹೈವೋಲ್ಟೇಜ್ ಕದನ!
ಬುಧವಾರ ಯುಎಇ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ‘ಎ’ ಗುಂಪಿನ 2ನೇ ತಂಡವಾಗಿ ಸೂಪರ್-4 ಪ್ರವೇಶಿಸಿದೆ. ಈಗಾಗಲೇ ‘ಎ’ ಗುಂಪಿನಿಂದ ಭಾರತ ಸೂಪರ್-4 ಪ್ರವೇಶಿಸಿತ್ತು. ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಭಾನುವಾರ ಮತ್ತೆ ಮುಖಾಮುಖಿಯಾಗಲಿವೆ. ಈಗಾಗಲೇ ಗುಂಪು ಹಂತದಲ್ಲಿ ಉಭಯ ತಂಡಗಳು ಆಡಿದ್ದವು. ಪಂದ್ಯದಲ್ಲಿ ಭಾರತೀಯರ ‘ನೋ ಶೇಕ್‌ಹ್ಯಾಂಡ್’ ಭಾರೀ ಸದ್ದು ಮಾಡಿತ್ತು. ಸೂಪರ್-4ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಅಗ್ರ-2 ಸ್ಥಾನ ಪಡೆದುಕೊಂಡರೆ, ಟೂರ್ನಿಯ ಫೈನಲ್‌ನಲ್ಲೂ ಉಭಯ ತಂಡಗಳು ಸೆಣಸಾಡಲಿವೆ.