ಸಾರಾಂಶ
ನವದೆಹಲಿ: 2024ರ ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಟ್ರೋಫಿ ಗೆಲ್ಲಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಟೆಸ್ಟ್, ಏಕದಿನಕ್ಕೆ ರೋಹಿತ್ ನಾಯಕತ್ವದ ವಿಚಾರದಲ್ಲೂ ಸ್ಪಷ್ಟನೆ ಸಿಕ್ಕಂತಾಗಿದೆ.ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಶಾ, ‘ರೋಹಿತ್ ನಾಯಕತ್ವದಲ್ಲಿ ನಮಗೆ ತುಂಬಾ ವಿಶ್ವಾಸವಿದೆ. ಟೆಸ್ಟ್ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾವು ಚಾಂಪಿಯನ್ ಆಗುತ್ತೇವೆ’ ಎಂದಿದ್ದಾರೆ. ‘ಕಳೆದ ವರ್ಷ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್, ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದೇವೆ.
ಏಕದಿನ ವಿಶ್ವಕಪ್ ಮೂಲಕ ಹೃದಯ ಗೆದ್ದಿದ್ದರೂ ಕಪ್ ಗೆಲ್ಲಲಾಗಲಿಲ್ಲ. ಆದರೆ ಟಿ20 ವಿಶ್ವಕಪ್‌ನಲ್ಲಿ ಕಪ್ ಗೆಲ್ಲುವುದಾಗಿ ರಾಜ್‌ಕೋಟ್‌ನಲ್ಲಿ ಹೇಳಿದ್ದೆ. ಅದರಂತೆ ರೋಹಿತ್ ಬಾರ್ಬಡೊಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ನೆಟ್ಟು ಬಂದಿದ್ದಾರೆ’ ಎಂದು ಶಾ ತಿಳಿಸಿದ್ದಾರೆ.
2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಾಕಿಸ್ತಾನ ಬಳಿ ಇದೆ. ಆದರೆ ಭಾರತ ತಂಡ ಪಾಕ್‌ಗೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ 2025ರ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿದೆ.