ಭಾರತ vs ದ.ಆಫ್ರಿಕಾ ಮಹಿಳಾ 2ನೇ ಟಿ20 ಪಂದ್ಯ ಮಳೆಯಿಂದ ರದ್ದು

| Published : Jul 08 2024, 12:31 AM IST / Updated: Jul 08 2024, 04:39 AM IST

ಸಾರಾಂಶ

ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ ಬಳಿಕ ಮತ್ತೆ ಮಳೆ ಅಡ್ಡಿ. ಹೀಗಾಗಿ ಪಂದ್ಯ ಸ್ಥಗಿತ. ಬಳಿಕ ಪಂದ್ಯ ರದ್ದುಗೊಳಿಸಲು ರೆಫ್ರಿಗಳ ನಿರ್ಧಾರ.

ಚೆನ್ನೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಟಾಸ್‌ ನಿಗದಿತ ಸಮಯಕ್ಕೆ ನಡೆದರೂ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಸುಮಾರು 15 ನಿಮಿಷ ತಡವಾಗಿ ಆರಂಭಿಸಲಾಯಿತು. 

ಸಂಜೆ 7 ಗಂಟೆಯ ಬದಲು 7.15ಕ್ಕೆ ಪಂದ್ಯ ಶುರು ಮಾಡಲಾಯಿತು. ನಡುನಡುವೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ, ಪಂದ್ಯ ಸ್ಥಗಿತಗೊಳ್ಳದೆ ಮುಂದುವರಿಯಿತು. ಆದರೆ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಬಳಿಕ ಮಳೆ ಜೋರಾದ ಕಾರಣ ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಳಿಸಲಾಯಿತು. ಮಳೆ ನಿಲ್ಲದ ಕಾರಣ ಪಂದ್ಯ ರದ್ದು ಮಾಡಲಾಯಿತು.ಮಳೆ ಅಡ್ಡಿಪಡಿಸುವುದಕ್ಕೂ ಮೊದಲು ದ.ಆಫ್ರಿಕಾ 6 ವಿಕೆಟ್‌ಗೆ 177 ರನ್‌ ಗಳಿಸಿ ಇನ್ನಿಂಗ್ಸ್‌ ಕೊನೆಗೊಳಿಸಿತ್ತು. ತಾಜ್ಮಿನ್‌ ಬ್ರಿಟ್ಸ್‌ ತಂಡಕ್ಕೆ ಮತ್ತೆ ಆಸರೆಯಾಗಿ 52 ರನ್‌ ಸಿಡಿಸಿದರೆ, ಅನ್ನೆಕೆ ಬಾಶ್‌ 40 ರನ್‌ ಕೊಡುಗೆ ನೀಡಿದರು.

ಕೆರಿಬಿಯನ್‌ ಲೀಗ್‌ನಲ್ಲಿ ಜೆಮಿಮಾ, ಶಿಖಾ ಕಣಕ್ಕೆ

ನವದೆಹಲಿ: ಭಾರತದ ತಾರಾ ಕ್ರಿಕೆಟಿಗರಾದ ಜೆಮಿಮಾ ರೋಡ್ರಿಗ್ಸ್‌ ಹಾಗೂ ಶಿಖಾ ಪಾಂಡೆ ಆ.21ರಿಂದ ಆರಂಭಗೊಳ್ಳಲಿರುವ ಮಹಿಳಾ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲಿದ್ದಾರೆ. ಇಬ್ಬರನ್ನೂ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ಫ್ರಾಂಚೈಸಿಯು ತಂಡಕ್ಕೆ ಸೇರಿಸಿಕೊಂಡಿದೆ. ಟೂರ್ನಿಯಲ್ಲಿ ಒಟ್ಟು 3 ತಂಡಗಳು ಪಾಲ್ಗೊಳ್ಳಲಿವೆ. ಆ.29ಕ್ಕೆ ಟೂರ್ನಿ ಕೊನೆಗೊಳ್ಳಲಿದೆ.