ಸಾರಾಂಶ
ಇಂದೋರ್: ಟಿ20ಯಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಎನ್ನುವ ದಾಖಲೆಯನ್ನು ಗುಜರಾತ್‌ನ ಯುವ ಬ್ಯಾಟರ್ ಊರ್ವಿಲ್ ಪಟೇಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಬುಧವಾರ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಗುಜರಾತ್‌ನ ಯುವ ಬ್ಯಾಟರ್ ಊರ್ವಿಲ್ ಪಟೇಲ್, ತ್ರಿಪುರಾ ವಿರುದ್ಧ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ 26 ವರ್ಷದ ಊರ್ವಿಲ್, 28 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿದ್ದಾರೆ. ಪಂದ್ಯದಲ್ಲಿ ಅವರು 35 ಎಸೆತಗಳಲ್ಲಿ 113 ರನ್ ಸಿಡಿಸಿದರು.
ಇದು ಟಿ2ಯಲ್ಲೇ ಭಾರತೀಯನಿಂದ ದಾಖಲಾದ ಅತಿ ವೇಗದ ಶತಕ. 2018ರಲ್ಲಿ ರಿಷಭ್ ಪಂತ್ ಹಿಮಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ವರೆಗೆ ದಾಖಲೆ ಎನಿಸಿಕೊಂಡಿತ್ತು.ಇನ್ನು, ಊರ್ವಿಲ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 2ನೇ ಅತಿ ವೇಗದ ಶತಕ ಬಾರಿಸಿದ ಸಾಧನೆಯನ್ನೂ ಮಾಡಿದರು. ಕಳೆದ ಜೂನ್‌ನಲ್ಲಿ ಸಿಪ್ರಸ್ ವಿರುದ್ಧ ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್ ಚೌಹಾಣ್ 27 ಎಸೆತದಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆಯಾಗಿಯೇ ಉಳಿದಿದೆ
. ಊರ್ವಿಲ್ ಕಳೆದ ವರ್ಷ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಭಾರತದ 2ನೇ ವೇಗದ ಶತಕ ಬಾರಿಸಿದ್ದರು. ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ 41 ಎಸೆತಗಳಲ್ಲಿ 100 ರನ್ ಸಿಡಿಸಿದ್ದರು. ಆದರೆ ಇತ್ತೀಚೆಗಷ್ಟೇ ಅವರು ಐಪಿಎಲ್‌ನ ಗುಜರಾತ್ ಟೈಟಾನ್ಸ್ ತಂಡದಿಂದ ಹೊರಬಿದ್ದಿದ್ದರು. ಹರಾಜಿನಲ್ಲೂ ಅವರು ಯಾವುದೇ ತಂಡಕ್ಕೆ ಬಿಕರಿಯಾಗಿಲ್ಲ.