ಚೆನ್ನೈ ಪಂದ್ಯಕ್ಕೆ ಅಂಪೈರ್‌ಗಳನ್ನೇ ಫಿಕ್ಸ್‌ ಮಾಡುತ್ತಿದ್ದರು : ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಸ್ಫೋಟಕ ಹೇಳಿಕೆ

| Published : Nov 28 2024, 12:30 AM IST / Updated: Nov 28 2024, 04:55 AM IST

ಚೆನ್ನೈ ಪಂದ್ಯಕ್ಕೆ ಅಂಪೈರ್‌ಗಳನ್ನೇ ಫಿಕ್ಸ್‌ ಮಾಡುತ್ತಿದ್ದರು : ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಸ್ಫೋಟಕ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನೈ ಮಾಲಿಕರಾಗಿದ್ದ ಎನ್‌.ಶ್ರೀನಿವಾಸನ್‌ ಅಂಪೈರ್‌ಗಳನ್ನು ಫಿಕ್ಸ್‌ ಮಾಡುತ್ತಿದ್ದರು ಎಂದ ಲಲಿತ್‌. ಫಿಕ್ಸಿಂಗ್‌ ವಿಚಾರದಲ್ಲಿ 2016, 2017ರ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ

ನವದೆಹಲಿ: ಐಪಿಎಲ್‌ನ 5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧದ ಫಿಕ್ಸಿಂಗ್‌ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಫಿಕ್ಸಿಂಗ್‌ ವಿಚಾರದಲ್ಲಿ 2016, 2017ರ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿದ್ದ ಚೆನ್ನೈ ವಿರುದ್ಧ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಗಂಭೀರ ಆರೋಪಗಳನ್ನು ಹೊರಿಸಿದ್ದು, ‘ಚೆನ್ನೈ ಮಾಲಿಕರಾಗಿದ್ದ ಎನ್‌.ಶ್ರೀನಿವಾಸನ್‌ ಅಂಪೈರ್‌ಗಳನ್ನು ಫಿಕ್ಸ್‌ ಮಾಡುತ್ತಿದ್ದರು’ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಯೂಟ್ಯೂಬರ್‌ ರಾಜ್‌ ಶಮಾನಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಲಲಿತ್‌, ‘ಶ್ರೀನಿವಾಸನ್‌ ತಮಗೆ ಬೇಕಾದ ಹಾಗೆ ಅಂಪೈರ್‌ಗಳನ್ನು ಬದಲಿಸುತ್ತಿದ್ದರು. ಚೆನ್ನೈ ಪಂದ್ಯಕ್ಕೆ ಚೆನ್ನೈನ ಅಂಪೈರ್‌ಗಳನ್ನು ಫಿಕ್ಸ್‌ ಮಾಡುತ್ತಿದ್ದರು. ಇದನ್ನು ಬಹಿರಂಗಗೊಳಿಸಲು ಮುಂದಾದಾಗ ಶ್ರೀನಿವಾಸನ್‌ ನನ್ನ ವಿರುದ್ಧವೇ ತಿರುಗಿಬಿದ್ದರು’ ಎಂದು ದೂರಿದ್ದಾರೆ.

ಹರಾಜಿನಲ್ಲೂ ಸೆಟಪ್‌ ಮಾಡಿದ್ದರು‘ಹರಾಜಿನಲ್ಲೂ ಅವರಿಗೆ ಬೇಕಾದ ಆಟಗಾರರನ್ನು ಉಳಿದವರು ಖರೀದಿಸದಂತೆ ಸೆಟ್ಟಿಂಗ್‌ ನಡೆಯುತ್ತಿತ್ತು. ಇಂಗ್ಲೆಂಡ್‌ನ ಆ್ಯಂಡ್ರ್ಯೂ ಫ್ಲಿಂಟಾಪ್‌ರನ್ನು ಖರೀದಿಸಲು ಶ್ರೀನಿವಾಸನ್‌ ನಿರ್ಧರಿಸಿದ್ದರು. ಹೀಗಾಗಿ ಫ್ಲಿಂಟಾಫ್‌ಗೆ ಹರಾಜಿನಲ್ಲಿ ಬೇರೆ ಯಾವುದೇ ತಂಡ ಬಿಡ್‌ ಮಾಡದಂತೆ ನೋಡಿಕೊಳ್ಳಲಾಗಿತ್ತು’ ಎಂದು ಲಲಿತ್‌ ಆರೋಪಿಸಿದ್ದಾರೆ. 2008ರಿಂದ 2011ರ ವರೆಗೆ ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಶ್ರೀನಿವಾಸನ್‌, 2011ರಿಂದ 2013ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಚೆನ್ನೈ ತಂಡದ ಮಾಲಿಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಗೆ ಶ್ರೀನಿವಾಸನ್‌ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ದಾವೂದ್‌ ಬೆದರಿಕೆಗೆ ಹೆದರಿ ದೇಶ ತೊರೆದೆ

2010ರಲ್ಲಿ ತಾವು ಭಾರತ ತೊರೆದ ಬಗ್ಗೆಯೂ ಲಲಿತ್‌ ಮೋದಿ ಮಾತನಾಡಿದ್ದು, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕೊಲ್ಲುವ ಬೆದರಿಕೆ ಹಾಕಿದ್ದರಿಂದ ಭಾರತ ಬಿಟ್ಟು ಹೋಗಬೇಕಾಯಿತು ಎಂದಿದ್ದಾರೆ. ‘ಮ್ಯಾಚ್‌ ಫಿಕ್ಸಿಂಗ್‌ ನಡೆಸುವಂತೆ ದಾವೂದ್‌ ಇಬ್ರಾಹಿಂನಿಂದ ಕರೆ ಬಂದಿತ್ತು. ನಾನು ಒಪ್ಪದ್ದಕ್ಕೆ 24 ಗಂಟೆಯಲ್ಲಿ ದೇಶ ಬಿಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರು. ನಾನು ದಾವೂದ್‌ನ ಹಿಟ್‌ಲಿಸ್ಟ್‌ನಲ್ಲಿದ್ದೆ. ನನಗೆ ಭದ್ರತೆ ಬಗ್ಗೆ ಪೊಲೀಸ್‌ ಇಲಾಖೆಯೇ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ ಭಾರತ ಬಿಟ್ಟು ಹೋಗಬೇಕಾಯಿತು. ಎಂದು ಲಲಿತ್‌ ಹೇಳಿದ್ದಾರೆ.