ಭಾರತೀಯರ ಕಿಚ್ಚಿಗೆ ನೆಲ ಕಚ್ಚಿದ ಇಂಗ್ಲೆಂಡ್

| Published : Feb 27 2024, 01:35 AM IST / Updated: Feb 27 2024, 10:46 AM IST

ಸಾರಾಂಶ

ಹಲವು ಪ್ರಮುಖ ಆಟಗಾರರ ಗೈರು, ಮೊದಲ ಪಂದ್ಯದ ಆಘಾತಕಾರಿ ಸೋಲು, ಬಳಿಕ ನಿರ್ಣಾಯಕ ಟೆಸ್ಟ್‌ನಲ್ಲಿ ಎದುರಾದ ಇನ್ನಿಂಗ್ಸ್‌ ಹಿನ್ನಡೆಯ ಹೊರತಾಗಿಯೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯನ್ನು ಕೈ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಯಶಸ್ವಿಯಾಗಿದೆ.

ರಾಂಚಿ: ಹಲವು ಪ್ರಮುಖ ಆಟಗಾರರ ಗೈರು, ಮೊದಲ ಪಂದ್ಯದ ಆಘಾತಕಾರಿ ಸೋಲು, ಬಳಿಕ ನಿರ್ಣಾಯಕ ಟೆಸ್ಟ್‌ನಲ್ಲಿ ಎದುರಾದ ಇನ್ನಿಂಗ್ಸ್‌ ಹಿನ್ನಡೆಯ ಹೊರತಾಗಿಯೂ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯನ್ನು ಕೈ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಯಶಸ್ವಿಯಾಗಿದೆ.

ಸೋಮವಾರ ಕೊನೆಗೊಂಡ 4ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 5 ವಿಕೆಟ್‌ ಗೆಲುವು ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3-1ರಲ್ಲಿ ತನ್ನದಾಗಿಸಿಕೊಂಡಿತು.

ಈ ಪಂದ್ಯದಲ್ಲಿ ಭಾರತ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ತಾರಾ ಸ್ಪಿನ್ನರ್‌ಗಳ ಅಭೂತಪೂರ್ವ ಪ್ರದರ್ಶನ, ಯುವ ಆಟಗಾರರ ಕೆಚ್ಚೆದೆಯ ಹೋರಾಟದಿಂದಾಗಿ ಭಾರತ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು. 

192 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಸುಲಭದಲ್ಲೇನೂ ಜಯ ಸಿಗಲಿಲ್ಲ. ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ರ ವೇಗದ ಆಟದ ಹೊರತಾಗಿಯೂ ತಂಡ ಸೋಲಿನತ್ತ ಮುಖ ಮಾಡಿತ್ತು. 

ಆದರೆ ಶುಭ್‌ಮನ್‌ ಗಿಲ್‌ ಹಾಗೂ ಧ್ರುವ್‌ ಜುರೆಲ್‌ರ ಜವಾಬ್ದಾರಿಯುತ ಆಟ ಭಾರತವನ್ನು ಗೆಲ್ಲಿಸಿತು.3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 40 ರನ್ ಗಳಿಸಿದ್ದ ಭಾರತಕ್ಕೆ ಸೋಮವಾರವೂ ರೋಹಿತ್‌ ಹಾಗೂ ಜೈಸ್ವಾಲ್‌ ಆಸರೆಯಾದರು. 

ಮೊದಲ ವಿಕೆಟ್‌ಗೆ 84 ರನ್‌ ಸೇರಿಸಿದ್ದ ಈ ಜೋಡಿಯನ್ನು ಜೋ ರೂಟ್‌ ಬೇರ್ಪಡಿಸಿದರು. ಜೈಸ್ವಾಲ್‌ 37ಕ್ಕೆ ವಿಕೆಟ್‌ ಒಪ್ಪಿಸಿದ ಬಳಿಕ, 55 ರನ್‌ ಗಳಿಸಿದ್ದ ರೋಹಿತ್‌ ಔಟಾಗಿ ಪೆವಿಲಿಯನ್‌ ಸೇರಿದರು.

 ಇವರಿಬ್ಬರ ಪತನದೊಂದಿಗೆ ಇಂಗ್ಲೆಂಡ್‌ ಪಾಳಯದಲ್ಲಿ ಸಂಭ್ರಮ ಮನೆಮಾಡಿತು. ಬಳಿಕ ಕ್ರೀಸ್‌ಗೆ ಬಂದ ರಜತ್‌ ಪಾಟೀದಾರ್‌ ಸೊನ್ನೆ ಸುತ್ತಿದರೆ, ರವೀಂದ್ರ ಜಡೇಜಾ 4 ರನ್‌ಗೆ ಔಟಾದರು.

ಜಡೇಜಾರ ಬೆನ್ನಲ್ಲೇ ಸರ್ಫರಾಜ್‌ ಖಾನ್‌ರನ್ನು ಬಶೀರ್‌ ಪೆವಿಲಿಯನ್‌ಗೆ ಅಟ್ಟಿದಾಗ ತಂಡದ ಸ್ಕೋರ್‌ 5 ವಿಕೆಟ್‌ಗೆ 120 ರನ್‌.ಈ ವೇಳೆ ಭಾರತೀಯರಲ್ಲಿ ಸೋಲಿನ ಭೀತಿ ಆವರಿಸಿದ್ದರೆ, ಇಂಗ್ಲೆಂಡ್‌ ಮತ್ತಷ್ಟು ವಿಕೆಟ್‌ ಕಿತ್ತು ಗೆಲ್ಲುವ ಲೆಕ್ಕಾಚಾರದಲ್ಲಿತ್ತು. 

ಆದರೆ ಶುಭ್‌ಮನ್‌ ಗಿಲ್‌ ಹಾಗೂ ಧ್ರುವ್‌ ಜುರೆಲ್‌ 6ನೇ ವಿಕೆಟ್‌ಗೆ ಮುರಿಯದ 72 ರನ್‌ ಜೊತೆಯಾಟವಾಡಿ ಭಾರತವನ್ನು ಸೋಲಿನಿಂದ ಪಾರು ಮಾಡಿದರು. 

ಗಿಲ್‌ 124 ಎಸೆತಗಳಲ್ಲಿ ಔಟಾಗದೆ 52 ರನ್‌ ಸಿಡಿಸಿದರೆ, ಧ್ರುವ್‌ 77 ಎಸೆತಗಳಲ್ಲಿ 39 ರನ್‌ ಗಳಿಸಿ ಭಾರತದ ಪಾಲಿನ ಹೀರೋಗಳು ಎನಿಸಿಕೊಂಡರು. ಬಶೀರ್‌ 3 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಕಲೆಹಾಕಿದ್ದ ಇಂಗ್ಲೆಂಡ್‌, ಭಾರತವನ್ನು 307 ರನ್‌ಗೆ ನಿಯಂತ್ರಿಸಿ 46 ರನ್ ಮುನ್ನಡೆ ಪಡೆದಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 145ಕ್ಕೆ ಆಲೌಟಾಗಿತ್ತು.

ಸ್ಕೋರ್‌: ಇಂಗ್ಲೆಂಡ್‌ 353/10 ಮತ್ತು 145/10, ಭಾರತ 307/10 ಮತ್ತು 192/5(ರೋಹಿತ್‌ 55, ಗಿಲ್‌ 52*, ಧ್ರುವ್‌ 39, ಜೈಸ್ವಾಲ್‌ 37, ಬಶೀರ್‌3-79) ಪಂದ್ಯಶ್ರೇಷ್ಠ: ಧ್ರುವ್‌ ಜುರೆಲ್‌

ತವರಿನಲ್ಲಿ ಸತತ 17ನೇ ಸರಣಿ ಗೆಲುವು!
ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್‌ಗೆ ಈ ಬಾರಿಯೂ ಸಾಧ್ಯವಾಗಲಿಲ್ಲ. 2013ರಿಂದ ಭಾರತ ತವರಿನಲ್ಲಿ ಆಡಿರುವ 17 ಟೆಸ್ಟ್ ಸರಣಿಯಲ್ಲೂ ಜಯಭೇರಿ ಬಾರಿಸಿದೆ. 

2012ರಲ್ಲಿ ಇಂಗ್ಲೆಂಡ್ ವಿರುದ್ಧವೇ ಸರಣಿ ಸೋತಿದ್ದ ಟೀಂ ಇಂಡಿಯಾ ಆ ಬಳಿಕ ಎಲ್ಲಾ ಸರಣಿಯಲ್ಲೂ ಪರಾಕ್ರಮ ಮೆರೆದು ಗೆದ್ದಿದೆ. ಭಾರತ ಹೊರತುಪಡಿಸಿ ಬೇರೆ ಯಾವ ತಂಡವೂ ತವರಿನಲ್ಲಿ ಸತತ 10ಕ್ಕಿಂತ ಹೆಚ್ಚು ಸರಣಿ ಗೆದ್ದ ಚರಿತ್ರೆಯಿಲ್ಲ.

ಬಾಜ್‌ಬಾಲ್‌ಗೆ ಮೊದಲ ಬಾರಿ ಸರಣಿ ಸೋಲು!
ಇಂಗ್ಲೆಂಡ್‌ಗೆ ಮೆಕ್ಕಲಂ ಕೋಚ್, ಸ್ಟೋಕ್ಸ್ ನಾಯಕನಾಗಿ ನೇಮಕಗೊಂಡ ಬಳಿಕ ತಂಡದ ಆಟದ ಶೈಲಿ ಆಕ್ರಮಣಕಾರಿಯಾಗಿದೆ. ಇದನ್ನೇ ಬಾಜ್‌ಬಾಲ್ ಎಂದು ಕರೆಯುತ್ತಾರೆ. 

ಆದರೆ ಇದೇ ಮೊದಲ ಬಾರಿ ಬಾಜ್‌ಬಾಲ್‌ಗೆ ಸರಣಿ ಸೋಲು ಎದುರಾಗಿದೆ. ಇವರಿಬ್ಬರ ಅವಧಿಯಲ್ಲಿ ಇಂಗ್ಲೆಂಡ್ 8 ಸರಣಿ ಆಡಿದ್ದು, 4ರಲ್ಲಿ ಗೆದ್ದು, 3 ಸರಣಿ ಡ್ರಾಗೊಂಡಿವೆ.

ಇಂಗ್ಲೆಂಡ್ ವಿರುದ್ಧ 12ನೇ ಬಾರಿ ಟೆಸ್ಟ್ ಸರಣಿ ಜಯ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಇದು 12ನೇ ಸರಣಿ ಗೆಲುವು. ಉಭಯ ತಂಡಗಳ ನಡುವೆ ಇದು 36ನೇ ಸರಣಿ. 19 ಸರಣಿಗಳಲ್ಲಿ ಇಂಗ್ಲೆಂಡ್‌ ಗೆದ್ದಿದ್ದರೆ, ಉಳಿದ 5 ಸರಣಿಗಳು ಡ್ರಾಗೊಂಡಿವೆ.

09ನೇ ಸರಣಿ: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಇದು ತವರಿನಲ್ಲಿ 9ನೇ ಸರಣಿ ಗೆಲುವು. 17ರಲ್ಲಿ 5ರಲ್ಲಿ ಇಂಗ್ಲೆಂಡ್‌ ಗೆದ್ದಿದ್ದು, 3 ಸರಣಿ ಡ್ರಾಗೊಂಡಿವೆ.

03ನೇ ಗೆಲುವು: 200ಕ್ಕಿಂತ ಕಡಿಮೆ ರನ್ ಬೆನ್ನತ್ತಿದ 33 ಟೆಸ್ಟ್‌ ಪಂದ್ಯಗಳ ಪೈಕಿ ಭಾರತ 30ರಲ್ಲಿ ಗೆಲುವು ಸಾಧಿಸಿವೆ. 3 ಪಂದ್ಯ ಡ್ರಾ ಆಗಿವೆ.

02ನೇ ಗರಿಷ್ಠ: ಮೊದಲ 8 ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್‌ ಸರದಾರರ ಪಟ್ಟಿಯಲ್ಲಿ ಜೈಸ್ವಾಲ್‌(971 ರನ್‌) 2ನೇ ಸ್ಥಾನದಲ್ಲಿದ್ದಾರೆ. ಡಾನ್‌ ಬ್ರಾಡ್ಮನ್‌(1210) ಅಗ್ರ ಸ್ಥಾನದಲ್ಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರೋಹಿತ್‌ 9000 ರನ್‌
2ನೇ ಇನ್ನಿಂಗ್ಸ್‌ನಲ್ಲಿ 55 ರನ್‌ ಸಿಡಿಸಿದ ರೋಹಿತ್‌ ಶರ್ಮಾ ಟೆಸ್ಟ್‌ನಲ್ಲಿ 17ನೇ ಅರ್ಧಶತಕವನ್ನು ಪೂರೈಸಿಸುವುದರ ಜೊತೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9000 ರನ್‌ ಮೈಲಿಗಲ್ಲು ಸಾಧಿಸಿದರು. ಅವರು 119 ಪಂದ್ಯಗಳನ್ನಾಡಿದ್ದು, 28 ಶತಕ, 37 ಅರ್ಧಶತಕ ಸೇರಿದಂತೆ 9020 ರನ್‌ ಗಳಿಸಿದ್ದಾರೆ.