ಸಾರಾಂಶ
ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯು ಫ್ರಾಂಚೈಸಿಗಳ ಜೊತೆ ಸಭೆ ನಡೆಸಿದ್ದು, ಟೂರ್ನಿ ಆಯೋಜನೆ ಸಮಯದ ಬಗ್ಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ
ನವದೆಹಲಿ: 17ನೇ ಆವೃತ್ತಿ ಐಪಿಎಲ್ 2024ರ ಮಾರ್ಚ್ 22ರಿಂದ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ 2024ರ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಬಳಿಕವೇ ಟೂರ್ನಿಯ ಅಂತಿಮ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸೋಮವಾರ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯು ಫ್ರಾಂಚೈಸಿಗಳ ಜೊತೆ ಸಭೆ ನಡೆಸಿದ್ದು, ಟೂರ್ನಿ ಆಯೋಜನೆ ಸಮಯದ ಬಗ್ಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಆರಂಭದಲ್ಲಿ ಟೂರ್ನಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ಒಂದು ವಾರ ಮೊದಲೇ ಟೂರ್ನಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.-
ಹಲವು ಪಂದ್ಯಗಳಿಗೆಹೇಜಲ್ವುಡ್ ಗೈರು
ಆಸೀಸ್ ವೇಗಿ ಜೋಶ್ ಹೇಜಲ್‌ವುಡ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ಟೂರ್ನಿಯ ಹಲವು ಪಂದ್ಯಗಳಿಗೆ ಗೈರಾಗಲಿದ್ದಾರೆ. ಅವರು ಮೇ ತಿಂಗಳಲ್ಲಿ ಟೂರ್ನಿಗೆ ಮರಳಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು, ಆಸ್ಟ್ರೇಲಿಯಾ, ದ.ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ಇಂಡೀಸ್ ಆಟಗಾರರು ಸಂಪೂರ್ಣ ಟೂರ್ನಿಗೆ ಲಭ್ಯವಿರುವುದಾಗಿಯೂ ಫ್ರಾಂಚೈಸಿಗಳಿಗೆ ಬಿಸಿಸಿಐ ಮಾಹಿತಿ ನೀಡಲಾಗಿದೆ. ಆದರೆ ಇಂಗ್ಲೆಂಡ್ ಆಟಗಾರರು ಸಂಪೂರ್ಣ ಐಪಿಎಲ್‌ಗೆ ಲಭ್ಯವಿರುವ ಬಗ್ಗೆ ಇನ್ನಷ್ಟೇ ಖಚಿತಗೊಳ್ಳಬೇಕಿದೆ.