ಸಾರಾಂಶ
ಈ ಬಾರಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಪರಸ್ಪರ ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡದ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.
ಮುಂಬೈ: ಈ ಬಾರಿ ಐಪಿಎಲ್‌ನ ಪ್ಲೇ-ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮಂಗಳವಾರ ಪರಸ್ಪರ ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡದ ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.
ಸದ್ಯ ಮುಂಬೈ ತಂಡ ಆಡಿರುವ 11ರಲ್ಲಿ 7 ಪಂದ್ಯ ಗೆದ್ದಿದ್ದರೆ, ಗುಜರಾತ್ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡಕ್ಕೆ ಉಳಿದ 3ರಲ್ಲಿ 2 ಪಂದ್ಯ ಗೆದ್ದರೆ ಅಧಿಕೃತವಾಗಿ ನಾಕೌಟ್‌ಗೇರಲಿದೆ. ಒಂದರಲ್ಲಿ ಗೆದ್ದರೂ ತಂಡಕ್ಕೆ ನಾಕೌಟ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಈ ಬಾರಿ ತವರಿನಲ್ಲಿ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿರುವ ತಂಡ, ವಾಂಖೆಡೆಯಲ್ಲಿ ಇನ್ನೂ 2 ಪಂದ್ಯ ಆಡಬೇಕಿದೆ. ಹೀಗಾಗಿ ತಂಡ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದೆಡೆ ಗುಜರಾತ್‌ಗೆ ಇನ್ನು 4 ಪಂದ್ಯ ಬಾಕಿಯಿದೆ. ಇದರಲ್ಲಿ 2 ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಮುಂಬೈ ವಿರುದ್ಧ ಅದರದೇ ತವರಿನಲ್ಲಿ ಗೆಲ್ಲುವ ಮೂಲಕ ಪ್ಲೇ-ಆಫ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸುವುದು ತಂಡದ ಗುರಿ. ಅಲ್ಲದೆ, ಮುಂಬೈ ವಿರುದ್ಧ ಈ ಬಾರಿ ಮೊದಲ ಮುಖಾಮುಖಿಯಲ್ಲಿ ಗೆದ್ದಿದ್ದ ಗುಜರಾತ್, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಪಂದ್ಯ: ಸಂಜೆ 7.30ಕ್ಕೆ