ಸಾರಾಂಶ
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಅದೃಷ್ಟ ಮತ್ತೆ ಕೈಕೊಟ್ಟಿದೆ. ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶನಿವಾರ ಮುಕ್ತಾಯಗೊಂಡ 3ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಮುಂಬೈ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಫೈನಲ್‌ನಲ್ಲಿ ಡೆಲ್ಲಿ ತಂಡವನ್ನು 8 ರನ್‌ಗಳಿಂದ ಬಗ್ಗುಬಡಿದ ಮುಂಬೈ 2ನೇ ಟ್ರೋಫಿ ಗೆದ್ದರೆ, ಡೆಲ್ಲಿ ಸತತ 3ನೇ ಫೈನಲ್‌ನಲ್ಲೂ ಸೋಲುವ ಮೂಲಕ ಚೊಚ್ಚಲ ಕಪ್ ಕನಸು ಭಗ್ನಗೊಳಿಸಿತು.ಟಾಸ್ ಗೆದ್ದ ಡೆಲ್ಲಿ ಆಯ್ಕೆ ಮಾಡಿಕೊಂಡಿದ್ದು ಫೀಲ್ಡಿಂಗ್. ಫೈನಲ್‌ನ ಒತ್ತಡ ಹಿಮ್ಮೆಟ್ಟಿಸಿ ಗುರಿ ಬೆನ್ನತ್ತಿ ಗೆಲ್ಲುವ ಯೋಜನೆ ಡೆಲ್ಲಿಯದ್ದಾಗಿತ್ತು.
ಇದಕ್ಕೆ ತಕ್ಕಂತೆ ಡೆಲ್ಲಿ ಆರಂಭದಲ್ಲಿ ಬೆಂಕಿ ದಾಳಿ ಸಂಘಟಿಸಿದರೂ, ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 149 ರನ್ ಕಲೆಹಾಕಿತು. ಮಹತ್ವದ ಪಂದ್ಯದಲ್ಲಿ ಒತ್ತಡ ನಿಭಾಯಿಸಲು ಡೆಲ್ಲಿಗೆ ಸಾಧ್ಯವಾಗಲಿಲ್ಲ. ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 141 ರನ್ ಗಳಿಸಿ ಸೋಲೊಪ್ಪಿಕೊಂಡಿತು. 1.5 ಓವರ್‌ಗಳಲ್ಲಿ 15 ರನ್ ಗಳಿಸಿದ್ದ ಡೆಲ್ಲಿ ಬಳಿಕ ಅಕ್ಷರಶಃ ಪತನ ಕಂಡಿತು. ಬಳಿಕ 3.1 ಓವರ್‌ಗಳಲ್ಲಿ 7 ರನ್ ಗಳಿಸಿ 2 ವಿಕೆಟ್‌ಗಳನ್ನೂ ಕಳೆದುಕೊಂಡಿತು.
15 ಓವರ್ ಆಗುವಾಗ ತಂಡದ ಸ್ಕೋರ್ 6 ವಿಕೆಟ್‌ಗೆ 98. ಇನ್ನೇನು ಸೋತೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಮಾರಿಯಾನ್ ಕಾಪ್ ತಂಡಕ್ಕೆ ಆಸರೆಯಾದರು. 16ನೇ ಓವರ್‌ನಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿದರು.
ಆದರೆ 18ನೇ ಓವರ್‌ನ 4ನೇ ಎಸೆತದಲ್ಲಿ ಕಾಪ್(26 ಎಸೆತಗಳಲ್ಲಿ 40) ವಿಕೆಟ್ ಕಿತ್ತ ಸ್ಕೀವರ್ ಬ್ರಂಟ್ ಪಂದ್ಯ ಮುಂಬೈನ ಕೈ ಜಾರದಂತೆ ನೋಡಿಕೊಂಡರು. ಕರ್ನಾಟಕದ ನಿಕಿ ಪ್ರಸಾದ್ (ಔಟಾಗದೆ 24) ಕೊನೆವರೆಗೆ ಕ್ರೀಸ್‌ನಲ್ಲಿದ್ದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ.
ಹರ್ಮನ್ ಆರ್ಭಟ: ಇದಕ್ಕೂ ಮುನ್ನ, ಮುಂಬೈ ಆರಂಭ ಕೂಡಾ ತೀರಾ ಕಳಪೆಯಾಗಿತ್ತು. ಟೂರ್ನಿಯುದ್ದಕ್ಕೂ ತಂಡಕ್ಕೆ ಆಸರೆಯಾಗಿದ್ದ ಹೇಲಿ ಮ್ಯಾಥ್ಯೂಸ್ 3 ರನ್‌ಗೆ ಔಟಾದರು. ಪವರ್-ಪ್ಲೇ ಮುಕ್ತಾಯಕ್ಕೆ ತಂಡದ ಸ್ಕೋರ್ 2 ವಿಕೆಟ್‌ಗೆ 22. ಕಾಪ್ 4 ಓವರ್‌ಗಳಲ್ಲಿ ಕೇವಲ 11 ರನ್‌ಗೆ 2 ವಿಕೆಟ್ ಕಿತ್ತರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕ್ರೀಸ್‌ಗಿಳಿಯುತ್ತಲೇ ತಂಡದ ಚಿತ್ರಣವೇ ಬದಲಾಯಿತು. ಸ್ಫೋಟಕ ಆಟವಾಡಿದ ಹರ್ಮನ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 66 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಸ್ಕೀವರ್ ಬ್ರಂಟ್ 30 ರನ್ ಗಳಿಸಿದರು. ಕೊನೆಯಲ್ಲಿ ಅಮನ್‌ಜೋತ್ 14 ರನ್ ಗಳಿಸಿ ತಂಡವನ್ನು 150ರ ಸನಿಹಕ್ಕೆ ತಂದರು.
ಸ್ಕೋರ್: ಮುಂಬೈ 20 ಓವರಲ್ಲಿ 149/7 (ಹರ್ಮನ್‌ಪ್ರೀತ್ 66, ಸ್ಕೀವರ್ 30, ಕಾಪ್ 2-11), ಡೆಲ್ಲಿ 20 ಓವರಲ್ಲಿ 141/9 (ಕಾಪ್ 40, ಜೆಮಿಮಾ 30, ಸ್ಕೀವರ್ 3-30)
ಐಪಿಎಲ್, ಡಬ್ಲ್ಯುಪಿಎಲ್‌ನಲ್ಲಿ ಮುಂಬೈಗೆ 7ನೇ ಟ್ರೋಫಿ!
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಿದು ಒಟ್ಟಾರೆ 7ನೇ ಟ್ರೋಫಿ. ಮುಂಬೈ ತಂಡ ಐಪಿಎಲ್‌ನಲ್ಲಿ 5 ಬಾರಿ (2013, 2015, 2017, 2019, 2020) ಚಾಂಪಿಯನ್ ಆಗಿದೆ. ಮಹಿಳಾ ತಂಡ 2023, 2025ರಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದೆ.
ಲ್ಯಾನಿಂಗ್‌ಗೆ ಮತ್ತೆ ಮತ್ತೆ ನಿರಾಸೆ!
ಡೆಲ್ಲಿ ತಂಡ ಸತತ 3ನೇ ಬಾರಿ ಫೈನಲ್‌ನಲ್ಲಿ ಸೋತಿತು. 2023ರಲ್ಲಿ ಮುಂಬೈ ವಿರುದ್ಧ ಸೋತಿದ್ದ ತಂಡ, 2024ರಲ್ಲಿ ಆರ್‌ಸಿಬಿಗೆ ಶರಣಾಗಿತ್ತು. ಈ ಸಲ ಮತ್ತೆ ಮುಂಬೈ ವಿರುದ್ಧ ಸೋತಿದೆ. ಮೂರೂ ಆವೃತ್ತಿಯಲ್ಲಿ ತಂಡ ಮುನ್ನಡೆಸಿದ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್‌ಗೆ ಮತ್ತೆ ಮತ್ತೆ ನಿರಾಸೆಯಾಗಿದೆ.