ಸಾರಾಂಶ
ಮುಂಬೈ: ಈ ಬಾರಿ ಐಪಿಎಲ್‌ನ ಹರಾಜು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಅಮೆರಿಕ, ಇಟಲಿಯವರೂ ಇದ್ದಾರೆ. 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಥಾಮಸ್ ಡ್ರಾಕಾ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಇಟಲಿಯ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಇತ್ತೀಚೆಗಷ್ಟೇ ಯುಎಇಯ ಐಎಲ್‌ಟಿ20 ಲೀಗ್‌ನ ಮುಂಬೈ ಎಮಿರೇಟ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ಐಪಿಎಲ್‌ನಲ್ಲೂ ಮುಂಬೈ ತಂಡಕ್ಕೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಗಮನ ಸೆಳೆದಿದ್ದ ಅಮೆರಿಕದ ತಂಡದ ವೇಗಿ, ಭಾರತ ಮೂಲದ ಸೌರಭ್ ನೇತ್ರವಾಲ್ಕರ್ ಸಹ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು, ಹಾಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಜೇಮ್ಸ್ ಆ್ಯಂಡರ್‌ಸನ್ ಕೂಡಾ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 42 ವರ್ಷದ ಜಿಮ್ಮಿ 2014ರಿಂದ ಟಿ20 ಪಂದ್ಯ ಆಡಿಲ್ಲ. ಅಚ್ಚರಿ ಎಂಬಂತೆ ಈ ಬಾರಿ ಮೂಲಬೆಲೆ 1.25 ಕೋಟಿ ರು.ಗೆ ಹೆಸರು ನೋಂದಾಯಿಸಿದ್ದಾರೆ. ಆದರೆ ಇಂಗ್ಲೆಂಡ್‌ನ ತಾರಾ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹರಾಜಿನಿಂದ ಹೊರಗುಳಿದಿದ್ದಾರೆ.
ರಾಹುಲ್, ರಿಷಭ್, ಶಮಿ ಮೂಲ ಬೆಲೆ ₹2 ಕೋಟಿಹರಾಜಿನಲ್ಲಿ ಪಾಲ್ಗೊಳ್ಳಲಿರುವ 23 ಭಾರತೀಯ ಆಟಗಾರರು, 15ಕ್ಕೂ ಹೆಚ್ಚು ವಿದೇಶಿ ಆಟಗಾರರ ಮೂಲಬೆಲೆ 2 ಕೋಟಿ ರು. ಇದೆ. ಪಟ್ಟಿಯಲ್ಲಿ ಕೆ.ಎಲ್.ರಾಹುಲ್, ರಿಷಭ್ ಪಂತ್, ಮೊಹಮದ್ ಶಮಿ, ಶ್ರೇಯಸ್ ಅಯ್ಯರ್, ಅಶ್ವಿನ್, ಚಹಲ್, ಇಶಾನ್ ಕಿಶನ್, ದೇವದತ್ ಪಡಿಕ್ಕಲ್, ಮೊಹಮದ್ ಸಿರಾಜ್, ಮಿಚೆಲ್ ಸ್ಟಾರ್, ಜೋಫ್ರಾ ಆರ್ಚರ್ ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ. ಸರ್ಫರಾಜ್ ಖಾನ್, ಪೃಥ್ವಿ ಶಾ ಸೇರಿ ಪ್ರಮುಖರು ₹75 ಲಕ್ಷ ಮೂಲಬೆಲೆ ಹೊಂದಿದ್ದಾರೆ.