ಸಾರಾಂಶ
ಐಪಿಎಲ್ ಹರಾಜಿಗೆ ಸಿದ್ಧವಾಗುತ್ತಿದೆ ವೇದಿಕೆ. ಯಾವ ಆಟಗಾರರಿಗೆ ಒಲಿಯಲಿದೆ ಲಕ್. ಖಾಲಿ ಇರುವ 204 ಸ್ಥಾನಗಳಿಗೆ ನಡೆಯಲಿದೆ ಹರಾಜು. ಅದೃಷ್ಟ ಪರೀಕ್ಷೆಗಿಳಿಯಲಿರುವ ನೂರಾರು ಆಟಗಾರರು.
ನವದೆಹಲಿ: 2025ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನ.24 ಹಾಗೂ 25ಕ್ಕೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ. ಹರಾಜಿಗೆ ಬರೋಬ್ಬರಿ 1574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 400ರಿಂದ 500 ಆಟಗಾರರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಬಹುದು. ಮುಂದಿನ ವಾರ ಬಿಸಿಸಿಐ ಅಂತಿಮ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.
1574 ಆಟಗಾರರ ಪೈಕಿ 1165 ಭಾರತೀಯರು ಹಾಗೂ 409 ವಿದೇಶಿಗರು ಇದ್ದಾರೆ. 320 ಆಟಗಾರರು ಅಂ.ರಾ. ಕ್ರಿಕೆಟ್ ಆಡಿದ್ದು, 1224 ಮಂದಿ ಅಂ.ರಾ. ಕ್ರಿಕೆಟ್ ಆಡಿಲ್ಲ. 30 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರೂ ಇದ್ದಾರೆ. ಹರಾಜಿಗೆ ನೋಂದಣಿ ಮಾಡಿಕೊಳ್ಳಲು ನ.4ರ ಗಡುವು ನೀಡಲಾಗಿತ್ತು. ವಿದೇಶಿ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದ 91 ಆಟಗಾರರಿದ್ದು, ಆಸ್ಟ್ರೇಲಿಯಾದ 76, ಇಂಗ್ಲೆಂಡ್‌ನ 52 ಮಂದಿ ಇದ್ದಾರೆ. ಉಳಿದಂತೆ ನ್ಯೂಜಿಲೆಂಡ್‌ನ 39, ವೆಸ್ಟ್‌ಇಂಡೀಸ್‌ನ 33, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾದ ತಲಾ 29, ಬಾಂಗ್ಲಾದೇಶದ 13, ಅಮೆರಿಕದ 10, ಐರ್ಲೆಂಡ್‌ನ 9, ಜಿಂಬಾಬ್ವೆಯ 8, ಸ್ಕಾಟ್ಲೆಂಡ್‌ನ 2, ಯುಎಇ ಹಾಗೂ ಇಟಲಿಯ ತಲಾ ಒಬ್ಬ ಆಟಗಾರ ನೋಂದಣಿ ಮಾಡಿಕೊಂಡಿದ್ದಾರೆ.