ಸಾರಾಂಶ
ಯು.ಪಿ.ಯೋಧಾಸ್ ವಿರುದ್ಧ ಗೆದ್ದ ಜೈಪುರ ಪಿಂಕ್ ಪ್ಯಾಂಥರ್ಸ್. ಆಶು ಮಲಿಕ್ 11 ಅಂಕಗಳ ಸಾಹಸದ ಹೊರತಾಗಿಯೂ ಯು ಮುಂಬಾಗೆ ಶರಣಾದ ದಬಾಂಗ್ ಡೆಲ್ಲಿ.
ಹೈದರಾಬಾದ್: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಯು ಮುಂಬಾ ತಂಡಗಳು ಜಯದ ಲಯ ಕಂಡುಕೊಂಡಿವೆ. ಮಂಗಳವಾರ ನಡೆದ ಯು.ಪಿ.ಯೋಧಾಸ್ ವಿರುದ್ಧದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ 33-30 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ರೈಡರ್ ನೀರಜ್ ನರ್ವಾಲ್ 9 ಅಂಕ ಕಲೆಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭರತ್ ಹೂಡಾ ಅವರ 7 ಅಂಕಗಳ ಹೋರಾಟ ಯೋಧಾಸ್ ಗೆಲುವಿಗೆ ಸಾಕಾಗಲಿಲ್ಲ.
ದಿನದ 2ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾ 32-26 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಮನ್‌ಜೀತ್ 9 ರೈಡ್ ಅಂಕ ಕಲೆಹಾಕಿ, ಮುಂಬಾ ಗೆಲುವಿಗೆ ಸಹಕರಿಸಿದರು. ಡೆಲ್ಲಿಯ ನಾಯಕ ಆಶು ಮಲಿಕ್ 11 ಅಂಕ ಗಳಿಸಿದರೂ, ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಮೂಡಿಬರದ ಹಿನ್ನೆಲೆಯಲ್ಲಿ ತಂಡಕ್ಕೆ ಸೋಲಾಯಿತು.ಇಂದಿನ ಪಂದ್ಯಗಳು: ಪಾಟ್ನಾ-ಮುಂಬಾ, ರಾತ್ರಿ 8ಕ್ಕೆ, ತಲೈವಾಸ್-ಟೈಟಾನ್ಸ್, ರಾತ್ರಿ 9ಕ್ಕೆ