ವಿರಾಟ್ ಕೊಹ್ಲಿ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೈಲುಗಲ್ಲು : ಚೆನ್ನೈ ಟೆಸ್ಟ್‌ನಲ್ಲಿ ದಾಖಲೆಗಳ ಸರಮಾಲೆ

| Published : Sep 21 2024, 01:54 AM IST / Updated: Sep 21 2024, 04:34 AM IST

ವಿರಾಟ್ ಕೊಹ್ಲಿ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೈಲುಗಲ್ಲು : ಚೆನ್ನೈ ಟೆಸ್ಟ್‌ನಲ್ಲಿ ದಾಖಲೆಗಳ ಸರಮಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಟ್ ಕೊಹ್ಲಿ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12000 ರನ್‌ ಪೂರೈಸಿದ ಎರಡನೇ ಭಾರತೀಯ ಎನಿಸಿಕೊಂಡರು. ಚೆನ್ನೈನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ದಿನವೊಂದರಲ್ಲಿ ಗರಿಷ್ಠ ವಿಕೆಟ್‌ ಪತನವಾದಂತಹ ದಾಖಲೆಗಳು ಸೃಷ್ಟಿಯಾದವು.  

ಚೆನ್ನೈ: ವಿರಾಟ್‌ ಕೊಹ್ಲಿ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಒಟ್ಟಾರೆ 12000 ರನ್‌ ಪೂರ್ಣಗೊಳಿಸಿದ್ದಾರೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ತಲುಪಿದರು. 

ಈ ಸಾಧನೆ ಮಾಡಿದ 2ನೇ ಭಾರತೀಯ ಎನಿಸಿಕೊಂಡರು. ಸಚಿನ್‌ ತೆಂಡುಲ್ಕರ್ ಭಾರತದಲ್ಲಿ 14,192 ರನ್ ಕಲೆಹಾಕಿದ್ದಾರೆ. ಒಟ್ಟಾರೆ ವಿರಾಟ್‌ ತವರಿನಲ್ಲಿ 12 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ ವಿಶ್ವದ 5ನೇ ಬ್ಯಾಟರ್‌. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌(13,117), ದಕ್ಷಿಣ ಆಫ್ರಿಕಾದ ಜಾಕಸ್‌ ಕ್ಯಾಲಿಸ್‌(12,305) ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕರ(12,043) ಕೂಡಾ ಈ ಸಾಧನೆ ಮಾಡಿದ್ದಾರೆ.

ಒಂದೇ ದಿನ 17 ವಿಕೆಟ್‌ ಪತನ

ಪಂದ್ಯದ 2ನೇ ದಿನ ಇತ್ತಂಡಗಳ ಒಟ್ಟು 17 ವಿಕೆಟ್‌ಗಳು ಪತನಗೊಂಡವು. ಇದು ಚೆನ್ನೈ ಕ್ರೀಡಾಂಗಣದಲ್ಲಿ ಗರಿಷ್ಠ. ಈ ಮೊದಲು 3 ಬಾರಿ ದಿನವೊಂದರಲ್ಲಿ ತಲಾ 15 ವಿಕೆಟ್‌ಗಳು ಉರುಳಿದ್ದವು. ಶುಕ್ರವಾರ ಭಾರತದ ಮೊದಲ ಇನ್ನಿಂಗ್ಸ್‌ನ 4, ಎರಡನೇ ಇನ್ನಿಂಗ್ಸ್‌ನ 3, ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್‌ನ 10 ವಿಕೆಟ್‌ಗಳು ಪತನಗೊಂಡವು.

10 ಟೆಸ್ಟ್‌ನಲ್ಲಿ ಗರಿಷ್ಠ ರನ್‌: 4ನೇ ಸ್ಥಾನಕ್ಕೆ ಜೈಸ್ವಾಲ್‌

ಭಾರತದ ಯುವ ಬ್ಯಾಟರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಟೆಸ್ಟ್‌ ವೃತ್ತಿ ಜೀವನದ ಆರಂಭಿಕ 10 ಪಂದ್ಯಗಳಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 22 ವರ್ಷದ ಜೈಸ್ವಾಲ್‌ 4ನೇ ಸ್ಥಾನಕ್ಕೇರಿದ್ದಾರೆ. ಕಳೆದ ವರ್ಷ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ಜೈಸ್ವಾಲ್‌ ಈ ವರೆಗೂ 10 ಪಂದ್ಯಗಳಲ್ಲಿ 1094 ರನ್‌ ಗಳಿಸಿದ್ದಾರೆ. 1446 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್‌ಇಂಡೀಸ್‌ನ ಎವರ್ಟನ್‌ ವೀಕ್ಸ್‌(1125 ರನ್‌), ಜಾರ್ಜ್‌ ಹೆಡ್ಲಿ(1102 ರನ್‌) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ. 

01ನೇ ಬ್ಯಾಟರ್‌: 2023ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್ ಶುಭ್‌ಮನ್‌ ಗಿಲ್‌. ಶ್ರೀಲಂಕಾದ ಕುಸಾಲ್‌ ಮೆಂಡಿಸ್‌ 2851 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.