ಸಂಜು, ಪಡಿಕ್ಕಲ್‌ ಸೇರಿ ನಾಲ್ವರು ಫಿಫ್ಟಿ : ಭಾರತ ಡಿ ಮೊದಲ ದಿನವೇ 5 ವಿಕೆಟ್‌ಗೆ 306

| Published : Sep 20 2024, 01:40 AM IST / Updated: Sep 20 2024, 04:49 AM IST

ಸಾರಾಂಶ

ದುಲೀಪ್ ಟ್ರೋಫಿಯಲ್ಲಿ ಭಾರತ ‘ಬಿ’ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ‘ಡಿ’ ತಂಡ ಮೊದಲ ದಿನದಾಟದಲ್ಲಿ 5 ವಿಕೆಟ್‌ಗೆ 306 ರನ್ ಗಳಿಸಿದೆ. ಸಂಜು ಸ್ಯಾಮ್ಸನ್ ಅಜೇಯ 89 ರನ್ ಗಳಿಸಿ ಮಿಂಚಿದರು.

ಅನಂತಪುರ: ಇಲ್ಲಿ ನಡೆಯುತ್ತಿರುವ ಭಾರತ ‘ಬಿ’ ವಿರುದ್ಧದ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕೊನೆ ಪಂದ್ಯದಲ್ಲಿ ಭಾರತ ‘ಡಿ’ ತಂಡ ಮೊದಲ ದಿನವೇ ಉತ್ತಮ ಮೊತ್ತ ಗಳಿಸಿದೆ. ನಾಲ್ವರು ಬ್ಯಾಟರ್‌ಗಳ ಅರ್ಧಶತಕದ ನೆರವಿನಿಂದ ತಂಡ ದಿನದಾಟದಂತ್ಯಕ್ಕೆ 5 ವಿಕೆಟ್‌ಗೆ 306 ರನ್ ಗಳಿಸಿದೆ.

ಟಾಸ್‌ ಸೋತ ‘ಬಿ’ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಡಿ ತಂಡಕ್ಕೆ ದೇವದತ್‌ ಪಡಿಕ್ಕಲ್‌ ಹಾಗೂ ಶ್ರೀಖರ್‌ ಭರತ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 105 ರನ್‌ ಸೇರಿಸಿತು. 50 ರನ್‌ ಗಳಿಸಿದ್ದ ಪಡಿಕ್ಕಲ್‌ರನ್ನು ನವ್‌ದೀಪ್‌ ಸೈನಿ ಪೆವಿಲಿಯನ್‌ಗೆ ಅಟ್ಟಿದರು.52 ರನ್‌ ಗಳಿಸಿದ್ದ ಭರತ್‌ಗೆ ಮುಕೇಶ್‌ ಕುಮಾರ್‌ ಪೆವಿಲಿಯನ್‌ ಹಾದಿ ತೋರಿದರು. 

3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಕ್ಕಿ ಭುಯಿ ಕೂಡಾ ‘ಬಿ’ ತಂಡ ಬೌಲರ್‌ಗಳನ್ನು ಚೆಂಡಾಡಿದರು. ಅವರು 87 ಎಸೆತಗಳಲ್ಲಿ 56 ರನ್‌ ಸಿಡಿಸಿ ರಾಹುಲ್‌ ಚಹರ್ ಬೌಲಿಂಗ್‌ನಲ್ಲಿ ಸೈನಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಭಾರತ ತಂಡದ ಕದ ತಟ್ಟುತ್ತಿರುವ ನಾಯಕ ಶ್ರೇಯಸ್‌ ಅಯ್ಯರ್‌ 5 ಎಸೆತಗಳನ್ನು ಎದುರಿಸಿದರೂ ರನ್‌ ಖಾತೆ ತೆರೆಯಲು ವಿಫಲರಾದರು. ಒಂದು ಹಂತದಲ್ಲಿ 5 ವಿಕೆಟ್‌ಗೆ 216 ರನ್‌ ಗಳಿಸಿದ್ದ ತಂಡಕ್ಕೆ ಸಂಜು ಸ್ಯಾಮ್ಸನ್‌ ಆಸರೆಯಾದರು. 

ಅವರು ಬಿ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 83 ಎಸೆತಗಳನ್ನು ಎದುರಿಸಿರುವ ಸಂಜು 10 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 89 ರನ್‌ ಗಳಿಸಿದ್ದು, 2ನೇ ದಿನವೂ ಸ್ಫೋಟಕ ಆಟವಾಡುವ ವಿಶ್ವಾಸದಲ್ಲಿದ್ದಾರೆ. ಅವರಿಗೆ ಉತ್ತಮ ಬೆಂಬಲ ನೀಡುತ್ತಿರುವ ಶರನ್ಶ್‌ ಜೈನ್‌ ಅಜೇಯ 26 ರನ್‌ ಗಳಿಸಿದ್ದಾರೆ. ರಾಹುಲ್‌ ಚಹರ್‌ 3 ವಿಕೆಟ್‌ ಕಿತ್ತಿದ್ದಾರೆ.ಸ್ಕೋರ್‌: ಭಾರತ ‘ಡಿ’ 306/5 (ಮೊದಲ ದಿನದಂತ್ಯಕ್ಕೆ) (ಸ್ಯಾಮ್ಸನ್‌ 89*, ರಿಕ್ಕಿ 56, ಭರತ್‌ 52, ಪಡಿಕ್ಕಲ್‌ 50, ಚಹರ್‌ 3-60)