ಮೊದಲ ಟೆಸ್ಟ್‌-ಭಾರತೀಯರ ವೇಗಕ್ಕೆ ಬೆದರಿದ ಬಾಂಗ್ಲಾದೇಶ: ಒಟ್ಟು 308 ರನ್‌ ಮುನ್ನಡೆ

| Published : Sep 21 2024, 01:52 AM IST / Updated: Sep 21 2024, 04:35 AM IST

ಸಾರಾಂಶ

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿಗಳ ದಾಳಿಗೆ ಬಾಂಗ್ಲಾ ಕಡಿಮೆ ಮೊತ್ತಕ್ಕೆ ಕುಸಿಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್ ಗಳಿಸಿದ ಭಾರತ, ಬಾಂಗ್ಲಾವನ್ನು 149 ರನ್‌ಗಳಿಗೆ ಸರ್ವಪತನಗೊಳಿಸಿತು.

ಚೆನ್ನೈ: ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾ ಬ್ಯಾಟರ್‌ಗಳು ಕಡಿಮೆ ಮೊತ್ತಕ್ಕೆ ಗಂಟುಮೂಟೆ ಕಟ್ಟಿದ್ದಾರೆ. ಇದರೊಂದಿಗೆ ಭಾರತ ಬೃಹತ್‌ ಗೆಲುವಿನತ್ತ ದಾಪುಗಾಲಿಟ್ಟಿದೆ.ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ ಕಲೆಹಾಕಿದರೆ, ಬಾಂಗ್ಲಾ ಕೇವಲ 149ಕ್ಕೆ ಸರ್ವಪತನ ಕಂಡಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 2ನೇ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 81 ರನ್‌ ಗಳಿಸಿದೆ. ತಂಡ ಒಟ್ಟು 308 ಮುನ್ನಡೆ ಸಾಧಿಸಿದೆ. 

37 ರನ್‌ ಸೇರ್ಪಡೆ: ಮೊದಲ ದಿನ 6 ವಿಕೆಟ್‌ಗೆ 339 ರನ್‌ ಕಲೆಹಾಕಿದ್ದ ಭಾರತ ಶುಕ್ರವಾರ ಅದಕ್ಕೆ 37 ರನ್‌ ಸೇರಿಸಿತು. ಶತಕವೀರ ಅಶ್ವಿನ್‌ 113ಕ್ಕೆ ವಿಕೆಟ್‌ ಒಪ್ಪಿಸಿದರೆ, ರವೀಂದ್ರ ಜಡೇಜಾ(86) ಶತಕ ವಂಚಿತರಾದರು. ಹಸನ್‌ ಮಹ್ಮೂದ್ 5 ವಿಕೆಟ್‌ ಕಿತ್ತರು. 

ಬಾಂಗ್ಲಾ ಪತನ: ಬಳಿಕ ಇನ್ನಿಂಗ್ಸ್‌ ಆರಂಭಿಸಿ ಬಾಂಗ್ಲಾ ತಂಡ ಭಾರತೀಯ ಬೌಲರ್‌ಗಳ ಮುಂದೆ ನಿರುತ್ತರವಾಯಿತು. ಮೊದಲ ಓವರ್‌ನಲ್ಲೇ ಬೂಮ್ರಾ ಎಸೆತದಲ್ಲಿ ಶದ್ಮಾನ್‌ ಇಸ್ಲಾಂ(02) ಕ್ಲೀನ್‌ ಬೌಲ್ಡ್‌ ಆಗುವುದರೊಂದಿಗೆ ತಂಡದ ಪತನ ಆರಂಭಗೊಂಡಿತು. ಬಳಿಕ ಜಾಕಿರ್ ಹುಸೈನ್‌(03) ಹಾಗೂ ಮೋಮಿನುಲ್‌ ಹಕ್‌(00)ರನ್ನು ಆಕಾಶ್‌ದೀಪ್‌ ಸತತ ಎಸೆತಗಳಲ್ಲಿ ಬೌಲ್ಡ್ ಮಾಡಿದರು.ಅಗ್ರ ಐವರು ಬ್ಯಾಟರ್‌ಗಳ ಪೈಕಿ ನಾಯಕ ನಜ್ಮುಲ್‌ ಹೊಸೈನ್‌(20) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಆದರೆ ಅವರಿಗೆ ಸಿರಾಜ್‌ ಪೆವಿಲಿಯನ್‌ ಹಾದಿ ತೋರಿದರು. 40ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಶಕೀಬ್‌ ಅಲ್‌ ಹಸನ್‌(32), ಲಿಟನ್‌ ದಾಸ್‌(22) ಹಾಗೂ ಮೆಹಿದಿ ಹಸನ್ ಮೀರಾಜ್(27) ಅಲ್ಪ ಆಸರೆಯಾದರು. ಆದರೆ ಶಕೀಬ್‌ ಹಾಗೂ ಲಿಟನ್‌ರನ್ನು ಜಡೇಜಾ ಔಟ್‌ ಮಾಡುವ ಮೂಲಕ ಬಾಂಗ್ಲಾ ಮತ್ತೆ ಕುಸಿತಕ್ಕೊಳಗಾಯಿತು. ಮೀರಾಜ್‌ ಕೊನೆ 3 ಬ್ಯಾಟರ್‌ಗಳ ಜೊತೆಗೂಡಿ ಒಟ್ಟು 57 ರನ್‌ ಜೊತೆಯಾಟವಾಡಿದ್ದರಿಂದ ತಂಡ 150ರ ಸನಿಹ ತಲುಪಿತು. ಬೂಮ್ರಾ ಪ್ರಮುಖ ನಾಲ್ವರನ್ನು ಔಟ್‌ ಮಾಡಿದರೆ, ಸಿರಾಜ್‌ಮ ಆಕಾಶ್‌ ದೀಪ್‌ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಪಡೆದರು.

ಆರಂಭಿಕ ಆಘಾತ: ಮೊದಲ ಇನ್ನಿಂಗ್ಸ್‌ನಲ್ಲಿ 227 ರನ್‌ ಗುರಿ ಪಡೆದರೂ ಭಾರತ ತಂಡ ಬಾಂಗ್ಲಾ ಮೇಲೆ ಫಾಲೋಆನ್‌ ಹೇರದೆ 2ನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಆರಂಭಿಸಿತು. ಆದರೆ 3ನೇ ಓವರ್‌ನಲ್ಲೇ ನಾಯಕ ರೋಹಿತ್‌ ಶರ್ಮಾ(05) ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್‌(10) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ವಿರಾಟ್‌ ಕೊಹ್ಲಿ 17 ರನ್‌ಗೆ ಔಟಾಗಿ ನಿರಾಸೆ ಅನುಭವಿಸಿದರು. ಸದ್ಯ ಶುಭ್‌ಮನ್ ಗಿಲ್‌(ಔಟಾಗದೆ 33) ಹಾಗೂ ರಿಷಭ್‌ ಪಂತ್‌(ಔಟಾಗದೆ 12) 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 376/10(ಅಶ್ವಿನ್‌ 113, ಜಡೇಜಾ 86, ಮಹ್ಮೂದ್‌ 5/83), 2ನೇ ಇನ್ನಿಂಗ್ಸ್‌ 81/3(2ನೇ ದಿನದಂತ್ಯಕ್ಕೆ) (ಗಿಲ್‌ 33*, ಕೊಹ್ಲಿ 17, ನಹೀದ್‌ 1-12), ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ 149/10 (ಶಕೀಬ್‌ 32, ಮೀರಾಜ್‌ 27, ಬೂಮ್ರಾ 4-50)