ಸಾರಾಂಶ
ಒಟ್ಟಾವಾ: ಭಾರತದ ಜೊತೆಗೆ ರಾಜತಾಂತ್ರಿಕ ಸಂಘರ್ಷಕ್ಕೆ ಇಳಿದಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ರಾಜೀನಾಮೆಗೆ ಅವರ ಪಕ್ಷದಲ್ಲೇ ಒತ್ತಡ ಆರಂಭವಾಗಿದೆ. ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷದ 20 ಸಂಸದರು ಅವರ ರಾಜೀನಾಮೆಗೆ ಅ.28ರ ಗಡುವು ನೀಡಿದ್ದಾರೆ. ಆದರೆ, ರಾಜೀನಾಮೆ ನೀಡದಿದ್ದರೆ ಏನು ಮಾಡುತ್ತೇವೆ ಎಂಬುದನ್ನು ತಿಳಿಸಿಲ್ಲ. ಟ್ರುಡೋ ವಿರುದ್ಧ ಪಕ್ಷದೊಳಗೆ ಹೆಚ್ಚುತ್ತಿರುವ ಆಂತರಿಕ ಅಸಮಾಧಾನದ ಕಾರಣ ಹಾಗೂ ಟ್ರುಡೋ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಹೋದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಕಾರಣವನ್ನು ಅವರು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಜೊತೆಗಿನ ಸಂಘರ್ಷಕ್ಕೂ, ಟ್ರುಡೋ ಅವರ ರಾಜೀನಾಮೆಯ ಆಗ್ರಹಕ್ಕೂ ನೇರವಾದ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆನಡಾದಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ವಾರಕ್ಕೊಮ್ಮೆ ಆಡಳಿತ ಪಕ್ಷದ ಸಭೆ ನಡೆಯುತ್ತದೆ. ಈ ಸಭೆ ಬುಧವಾರ ನಡೆದಾಗ 20 ಸಂಸದರು ಟ್ರುಡೋ ರಾಜೀನಾಮೆಗೆ ಆಗ್ರಹಿಸಿ ಸಹಿ ಮಾಡಿದ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಪ್ರತಿಯೊಬ್ಬರೂ ತಲಾ ಎರಡು ನಿಮಿಷಗಳ ಕಾಲ ಟ್ರುಡೋ ಏಕೆ ರಾಜೀನಾಮೆ ನೀಡಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ.
ರಾಜೀನಾಮೆಗೆ ಆಗ್ರಹಿಸಿದವರು ಯಾರೂ ಟ್ರುಡೋ ಸಂಪುಟದ ಸಚಿವರಲ್ಲ. ಹಾಗೆಯೇ, ಟ್ರುಡೋ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದೂ ಕೆಲ ಸಂಸದರು ವಾದ ಮಂಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಟ್ರುಡೋ ವಿರುದ್ಧ ಆಡಳಿತ ಪಕ್ಷದಲ್ಲಿ ಕೆಲ ಸಮಯದಿಂದ ಅಸಮಾಧಾನ ಸೃಷ್ಟಿಯಾಗಿದ್ದು, ಅದು ಈಗ ತೀವ್ರ ಸ್ವರೂಪ ಪಡೆದಿದೆ ಎಂದು ಹೇಳಲಾಗಿದೆ. ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದೆ.
ಕೆನಡಾದಿಂದ ನಮ್ಮ ಬೆನ್ನಿಗೆ ಚೂರಿ: ಭಾರತ ರಾಯಭಾರಿ
‘ಕೆನಡಾದಲ್ಲಿ ಸಂಭವಿಸಿದ ಖಲಿಸ್ತಾನಿ ಉಗ್ರ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ರಾಯಭಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಿಸಿದ್ದ ಅಲ್ಲಿನ ಟ್ರಡೋ ಸರ್ಕಾರ ನಮಗೆ ಯಾವುದೇ ಸಾಕ್ಷ್ಯ ನೀಡಿಲ್ಲ. ಅಲ್ಲದೆ, ತನಿಖೆಗೆ ನ್ಯಾಯಯುತ ಮಾರ್ಗ ಅನುಸರಿಸದೇ ಈ ಕೇಸಿನಲ್ಲಿ ನಮ್ಮನ್ನು ಆರೋಪಿಗಳನ್ನಾಗಿ ಮಾಡಲು ಸಂಚು ರೂಪಿಸಿ ಬೆನ್ನಿಗೆ ಚೂರಿ ಹಾಕಿತು’ ಎಂದು ಕೆನಡಾದಿಂದ ಉಚ್ಚಾಟನೆಗೊಂದು ಭಾರತಕ್ಕೆ ಮರಳಿದ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.ಟ್ರುಡೋ ಕೆಂಗಣ್ಣಿಗೆ ಗುರಿಯಾಗಿದ್ದ ವರ್ಮಾ ಭಾರತಕ್ಕೆ ಮರಳಿದ್ದು, ಗುರುವಾರ ಪಿಟಿಐಗೆ ಸಂದರ್ಶನ ನೀಡಿದರು. ‘ಖಲಿಸ್ತಾನಿ ಉಗ್ರರು ಕೆನಡಾದಲ್ಲಿ ಉಗ್ರ ಚಟುವಟಿಕೆಯಲ್ಲಿ ನಡೆಸುತ್ತಿರುವ ಬಗ್ಗೆ ಭಾರತವು ಟ್ರುಡೋಗೆ ಸಾಕ್ಷಿ ಸಮೇತ ಮಾಹಿತಿ ನೀಡಿದೆ. ಆದರೆ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.
ಆದರೆ ‘ನಮ್ಮ ಆರೋಪಕ್ಕೆ ಪ್ರತಿಯಾಗಿ, ‘ನಿಜ್ಜರ್ ಹತ್ಯೆಯಲ್ಲಿ ಸಂಜಯ್ ಸೇರಿ 6 ಭಾರತೀಯ ರಾಜತಾಂತ್ರಿಕರ ವೈಯಕ್ತಿಕ ಆಸಕ್ತಿ ಅಡಗಿದೆ’ ಎಂದು ಕೆನಡಾ ಆರೋಪಿಸಿತು. ಆದರೆ ಈ ಈ ಬಗ್ಗೆ ಒಂದು ಚೂರೂ ಪುರಾವೆಗಳನ್ನು ನೀಡದೇ ನಮ್ಮನ್ನು ಆರೋಪಿ ಮಾಡಲು ಯತ್ನಿಸಿತು ಹಾಗೂ ಬೆನ್ನಿಗೆ ಚೂರಿ ಹಾಕಿತು.ಕೆನಡಾ ಕ್ರಮ ನನಗೆ ಆಘಾತ ತಂದಿತು’ ಎಂದು ಕಿಡಿಕಾರಿದರು.