ಅಮೆರಿಕ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಟ್ರಂಪ್‌ರಿಂದ ಲೈಂಗಿಕ ಹಿಂಸೆ : ಮಾಜಿ ರೂಪದರ್ಶಿ ಆರೋಪ

| Published : Oct 25 2024, 12:47 AM IST / Updated: Oct 25 2024, 04:17 AM IST

ಅಮೆರಿಕ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಟ್ರಂಪ್‌ರಿಂದ ಲೈಂಗಿಕ ಹಿಂಸೆ : ಮಾಜಿ ರೂಪದರ್ಶಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇನ್ನೊಂದು ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇನ್ನೊಂದು ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ನ.5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವ ಮುನ್ನ ಇದು ಟ್ರಂಪ್‌ರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.

31 ವರ್ಷದ ಹಿಂದೆ ಟ್ರಂಪ್‌ ತಮ್ಮನ್ನು ಅಸಭ್ಯವಾಗಿ ತಬ್ಬಿಕೊಂಡು, ಸ್ತನ ಹಾಗೂ ಪೃಷ್ಠವನ್ನು ಮರ್ದಿಸಿದ್ದರು ಎಂದು 56 ವರ್ಷದ ಮಾಜಿ ರೂಪದರ್ಶಿ ಸ್ಟೇಸಿ ವಿಲಿಯಮ್ಸ್‌ ಎಂಬುವರು ಆರೋಪಿಸಿದ್ದಾರೆ. ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಪರ ಪ್ರಚಾರ ಮಾಡುತ್ತಿರುವ ಗುಂಪೊಂದು ಜೂಮ್‌ ಕಾಲ್‌ನಲ್ಲಿ ಮಾಧ್ಯಮಗಳ ಜೊತೆಗೆ ಏರ್ಪಡಿಸಿದ್ದ ಸಂವಾದದಲ್ಲಿ ಸ್ಟೇಸಿ ಈ ಆರೋಪ ಮಾಡಿದ್ದಾರೆಂದು ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

‘1992ರಲ್ಲಿ ನನಗೆ ಜೆಫ್ರಿ ಎಪ್‌ಸ್ಟೀನ್‌ (ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ) ಮೂಲಕ ಟ್ರಂಪ್‌ ಪರಿಚಯವಾಯಿತು. ಜೆಫ್ರಿ ಜೊತೆ ನಾನು ಡೇಟಿಂಗ್‌ ಮಾಡುತ್ತಿದ್ದೆ. ಒಂದು ದಿನ ಜೆಫ್ರಿ ನನ್ನನ್ನು ಟ್ರಂಪ್‌ ಅವರ ಕಚೇರಿಗೆ ಕರೆದುಕೊಂಡು ಹೋದರು. ಆಗ ಟ್ರಂಪ್‌ ನನ್ನನ್ನು ಎಳೆದು ತಬ್ಬಿಕೊಂಡು ಅಸಭ್ಯವಾಗಿ ಸ್ತನ ಹಾಗೂ ಪೃಷ್ಠವನ್ನು ಮರ್ದಿಸಿದರು. ಏನು ಮಾಡಬೇಕೆಂದು ತಿಳಿಯದೆ ನಾನು ಶಾಕ್‌ ಆಗಿ ನಿಂತಿದ್ದೆ’ ಎಂದು ಸ್ಟೇಸಿ ಹೇಳಿದ್ದಾರೆ.

ಈ ಹಿಂದೆಯೂ ನೀಲಿಚಿತ್ರ ತಾರೆ, ಮಾಡೆಲ್‌ ಹಾಗೂ ಕೆಲ ಮಹಿಳೆಯರಿಂದ ಟ್ರಂಪ್‌ ವಿರುದ್ಧ ಲೈಂಗಿಕ ದೌರ್ಜನ್ಯದ ದೂರುಗಳು ಕೇಳಿಬಂದಿದ್ದವು.