ಬ್ರಿಕ್ಸ್‌ ದೇಶಗಳ ಶೃಂಗ ಸಭೆ ವೇಳೆ ಶಾಂತಿ ಮಾತುಕತೆ ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿ

| Published : Oct 24 2024, 12:42 AM IST / Updated: Oct 24 2024, 04:06 AM IST

ಸಾರಾಂಶ

ಲಡಾಖ್‌ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಸಲುವಾಗಿ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.

ಕಝಾನ್‌: ಲಡಾಖ್‌ ವಲಯದಲ್ಲಿನ ಸಂಘರ್ಷದ ವಾತಾವರಣ ತಿಳಿಗೊಳಿಸುವ ಸಲುವಾಗಿ ಇತ್ತೀಚೆಗೆ ನಡೆದ ಶಾಂತಿ ಮಾತುಕತೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ. ರಷ್ಯಾದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ದೇಶಗಳ ಶೃಂಗ ಸಭೆ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಬುಧವಾರ ನಡೆದ ಮಹತ್ವದ ದ್ವಿಪಕ್ಷೀಯ ಮಾತುಕತೆ ವೇಳೆ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ.

ಬುಧವಾರದ ಮಾತುಕತೆ ವೇಳೆ ಉಭಯ ನಾಯಕರು, ‘ಎರಡೂ ದೇಶಗಳ ನಡುವೆ ಶಾಂತಿಯುತ ಹಾಗೂ ಸ್ಥಿರ ಸಂಬಂಧ ಸ್ಥಾಪಿಸುವ ಕುರಿತು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಬುದ್ಧತೆ, ಪರಸ್ಪರರನ್ನು ಗೌರವಿಸುವ ಮೂಲಕ ಭಾರತ ಮತ್ತು ಚೀನಾ ಶಾಂತಿಯುತ ಹಾಗೂ ಸ್ಥಿರ ಸಂಬಂಧವನ್ನು ಹೊಂದಬಹುದು ಎಂಬ ನಿಲುವನ್ನು ಎರಡೂ ದೇಶಗಳ ವ್ಯಕ್ತಪಡಿಸಿವೆ.2020ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ನಡುವೆ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಬಳಿಕ ಇದು ಭಾರತ ಮತ್ತು ಚೀನಾ ನಡುವೆ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ಎಂಬುದು ಗಮನಾರ್ಹ.

ಮತ್ತಷ್ಟು ಮಾತುಕತೆ:ಈ ವೇಳೆ ಗಡಿಯಲ್ಲಿ ಏರ್ಪಟ್ಟಿರುವ ಸಂಘರ್ಷದ ಸನ್ನಿವೇಶದ ಕುರಿತು ಮೋದಿ- ಜಿನ್‌ಪಿಂಗ್‌ ಚರ್ಚೆ ನಡೆಸಿದ್ದು, ಇದನ್ನು ಬಗೆಹರಿಸುವಲ್ಲಿ ವಿಶೇಷ ಪ್ರತಿನಿಧಿಗಳು ಮಹತ್ವದ ಪಾತ್ರ ವಹಿಸಲಿದ್ದು, ಅವರ ಮುಂದಿನ ಸಭೆಗೆ ಸೂಕ್ತ ದಿನಾಂಕ ನಿಗದಿಪಡಿಸಲು ಒಪ್ಪಿದ್ದಾರೆ.

ನಂಬಿಕೆ, ಗೌರವ:ದ್ವಿಪಕ್ಷೀಯ ಮಾತುಕತೆ ವೇಳೆ, ‘ಭಾರತ-ಚೀನಾ ಸಂಬಂಧವು, ನಮ್ಮ ದೇಶದ ಜನತೆಗೆ ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಅಗತ್ಯ. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಮೂಲಕ ಇದನ್ನು ಸಾಧಿಸಲು ಸಾಧ್ಯ. ಎರಡೂ ದೇಶಗಳ ನಡುವಿನ ವಿವಿಧತೆಗಳು ಮತ್ತು ಸಂಘರ್ಷಗಳು ಶಾಂತಿಯನ್ನು ಕೆಡಿಸದಂತೆ ನಿಭಾಯಿಸುವುದು ಅಗತ್ಯ. 

4 ವರ್ಷಗಳ ಗಡಿ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ ಒಮ್ಮತದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿರಬೇಕು. ಪರಸ್ಪರ ನಂಬಿಕೆ, ಗೌರವ ಹಾಗೂ ಸೂಕ್ಷ್ಮತೆ ದ್ವಿಪಕ್ಷೀಯ ಸಂಬಂಧದ ಆಧಾರವಾಗಿರಬೇಕು. ಈ ಕುರಿತ ಮಾತುಕತೆಗಳನ್ನು ಮುಕ್ತ ಮನಸ್ಸಿನಿಂದ ನಡೆಸುತ್ತೇವೆ ಎಂದು ನಂಬಿದ್ದೇನೆ ಎಂದು ಸಭೆಯಲ್ಲಿ ಚೀನಾ ಉದ್ದೇಶಿಸಿ ಮೋದಿ ಮಾತನಾಡಿದ್ದಾರೆ.