ಭಾರತದೊಂದಿಗೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಜತೆಗೆ, ನಾವು ಭಾರತಕ್ಕೆ ಕಲ್ಲಿದ್ದಲು ರಫ್ತನ್ನು ಹೆಚ್ಚಿಸುತ್ತೇವೆ ಎಂದೂ ಘೋಷಿಸಿದ್ದಾರೆ.

ನ್ಯೂಯಾರ್ಕ್‌/ವಾಷಿಂಗ್ಟನ್‌: ಭಾರತದೊಂದಿಗೆ ಏರ್ಪಟ್ಟಿರುವ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಜತೆಗೆ, ನಾವು ಭಾರತಕ್ಕೆ ಕಲ್ಲಿದ್ದಲು ರಫ್ತನ್ನು ಹೆಚ್ಚಿಸುತ್ತೇವೆ ಎಂದೂ ಘೋಷಿಸಿದ್ದಾರೆ. ‘ಚ್ಯಾಂಪಿಯನ್‌ ಆಫ್‌ ಕೋಲ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್‌, ‘ನನ್ನ ನಾಯಕತ್ವದಲ್ಲಿ ಅಮೆರಿಕ ಅತಿದೊಡ್ಡ ಇಂಧನ ರಫ್ತುದಾರ ದೇಶವಾಗುತ್ತಿದೆ. ಕಲ್ಲಿದ್ದಲು ರಫ್ತನ್ನು ಗಣನೀಯವಾಗಿ ಏರಿಸುವ ಸಲುವಾಗಿ ಭಾರತ, ಜಪಾನ್‌, ಕೊರಿಯಾ ಸೇರಿದಂತೆ ಕೆಲ ದೇಶಗಳೊಂದಿಗೆ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದಾಗಿ ನಾವು ವಿಶ್ವದಲ್ಲೇ ಅತ್ಯುತ್ತಮವಾದ ಕಲ್ಲಿದ್ದಲನ್ನು ವಿಶ್ವಾದ್ಯಂತ ರಫ್ತು ಮಾಡುತ್ತಿದ್ದೇವೆ’ ಎಂದು ಹೇಳಿದರು. ಭಾರತ-ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಕಳೆದ ಶನಿವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಭಾರತ ಅಮೆರಿಕದಿಂದ ಕಲ್ಲಿದ್ದಲು ಸೇರಿ 45 ಲಕ್ಷ ಕೋಟಿ ರು. ಮೌಲ್ಯದ ವಸ್ತುಗಳನ್ನು 5 ವರ್ಷಗಳಲ್ಲಿ ಆಮದು ಮಾಡಿಕೊಳ್ಳಲಾಗುವ ಬಗ್ಗೆ ಘೋಷಿಸಲಾಗಿತ್ತು.

==

ಭಾರತ-ಅಮೆರಿಕ ಡೀಲ್‌ ವಿರುದ್ಧದ ಭಾರತ ಬಂದ್‌ ನೀರಸ

- ಜನಜೀವನದ ಮೇಲೆ ಪರಿಣಾಮವಿಲ್ಲ

ನವದೆಹಲಿ: ‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಹಾಗೂ ಕೇಂದ್ರ ಸರ್ಕಾರದ ನೀತಿಗಳು ಕಾರ್ಮಿಕ, ರೈತ ಹಾಗೂ ದೇಶ ವಿರೋಧಿ’ ಎಂದು ಆರೋಪಿಸಿ ಕಾರ್ಮಿಕ/ರೈತ ಸಂಘಗಳು ಗುರುವಾರ ಕರೆ ನೀಡಿದ್ದ ಭಾರತ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಹೆಚ್ಚು ತೊಡಕಿಲ್ಲದೆ ಎಂದಿನಂತಿತ್ತು.

ಹೊಸ 4 ಕಾರ್ಮಿಕ ಸಂಹಿತೆಗಳ ರದ್ದತಿ, ಕರಡು ಬೀಜ ಮಸೂದೆ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಪರಮಾಣು ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ಶಾಂತಿ ಮಸೂದೆಯ ಹಿಂಪಡೆತ, ಜಿ-ರಾಮ್‌-ಜಿ ಬದಲು ಮನರೇಗಾ ಮರುಜಾರಿ, ಭಾರತ-ಅಮೆರಿಕ ಡೀಲ್‌ ರದ್ದತಿ ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಸೇರಿದಂತೆ ಎಡಪಕ್ಷಗಳ ಬೆಂಬಲವಿತ್ತು.

ಪರಿಣಾಮ ಒಡಿಶಾದ ಕೆಲ ಪ್ರದೇಶಗಳಲ್ಲಿ ವಾಹನ ಸಂಚಾರ, ಮಾರುಕಟ್ಟೆ, ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಕೊಂಚ ತೊಂದರೆಯಾಯಿತು. ಜಾರ್ಖಂಡ್‌ನಲ್ಲಿ ಬ್ಯಾಂಕಿಂಗ್‌ ವಲಯದ ಮೇಲೆ ಬಂದ್‌ ಪರಿಣಾಮ ಬೀರಿತ್ತು. ತಮಿಳುನಾಡಿನ ಕೆಲ ಬಂದರುಗಳು ಮತ್ತು ಕೈಗಾರಿಕಾ ಪ್ರದೇಶಗಳ ಕೆಲಸಕ್ಕೆ ಅಡಚಣೆಯಾಯಿತು. ಕೇರಳ ಮತ್ತು ಪಂಜಾಬ್‌ ಸರ್ಕಾರಗಳೂ ಬಂದ್‌ ಬೆಂಬಲಿಸಿದ್ದ ಕಾರಣ ಕೆಲ ಅಗತ್ಯ ಸೇವೆಗಳು ಲಭ್ಯವಿರಲಿಲ್ಲ.