ಮೋದಿ ಅವರು ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಮಾತನಾಡಲಿಲ್ಲ. ಹೀಗಾಗಿ ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಈವರೆಗೆ ಆಗಲೇ ಇಲ್ಲ. ಡೀಲ್ ಗಡುವು ಮುಗಿದ ಬಳಿಕ ನಾವು ಒಪ್ಪಂದಕ್ಕೆ ಸಿದ್ಧ ಎಂದು ಭಾರತದ ಕಡೆಯಿಂದ ಕರೆ ಬಂತು. ಎಂದು ಅಮೆರಿಕದ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್ ಹೇಳಿಕೊಂಡಿದ್ದಾರೆ.
ನ್ಯೂಯಾರ್ಕ್ : ‘ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಮಾತನಾಡಲಿಲ್ಲ. ಹೀಗಾಗಿ ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಈವರೆಗೆ ಆಗಲೇ ಇಲ್ಲ. ಡೀಲ್ ಗಡುವು ಮುಗಿದ ಬಳಿಕ ನಾವು ಒಪ್ಪಂದಕ್ಕೆ ಸಿದ್ಧ ಎಂದು ಭಾರತದ ಕಡೆಯಿಂದ ಕರೆ ಬಂತು. ಆದರೆ ಅಷ್ಟೊತ್ತಿಗೆ ಸಮಯ ಮುಗಿದಿತ್ತು’ ಎಂದು ಅಮೆರಿಕದ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್ ಹೇಳಿಕೊಂಡಿದ್ದಾರೆ.
ಆಲ್-ಇನ್-ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಈವರೆಗೂ ಬಾಕಿ ಉಳಿದಿರುವ ಕುರಿತು ಇಂಥದ್ದೊಂದು ವ್ಯಾಖ್ಯಾನ ನೀಡಿದ್ದಾರೆ.
‘ನಾನು ಮೊದಲ ವ್ಯಾಪಾರ ಒಪ್ಪಂದ ನಡೆಸಿದ್ದು ಬ್ರಿಟನ್ ಜತೆಗೆ. ಮಾತುಕತೆ ನಡೆಸುವ ವೇಳೆಯೇ ಈ ಒಪ್ಪಂದ 2 ಶುಕ್ರವಾರಕ್ಕಿಂತ ಮೊದಲು (ಅರ್ಥಾತ್ 2 ವಾರದೊಳಗೆ) ಪೂರ್ಣಗೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಿದ್ದೆ. ಆ ಬಳಿಕ ನಿಲ್ದಾಣವನ್ನು ರೈಲು ಬಿಡಲಿದೆ ಅಂದಿದ್ದೆ. ಇದು ಡೊನಾಲ್ಡ್ ಟ್ರಂಪ್ ಅವರು ವ್ಯವಹರಿಸುವ ರೀತಿ. ಅವರು ಸರದಿಯಂತೆ ಡೀಲ್ ಮಾಡಿಕೊಳ್ಳುತ್ತಾರೆ’ ಎಂದರು.
‘ಅವರ ಮೊದಲ ಬಾರಿಯ ಡೀಲ್ ಯಾವತ್ತೂ ಆಕರ್ಷಕವಾಗಿರುತ್ತದೆ. ಆ ನಂತರ ನೀವು ಉತ್ತಮ ಡೀಲ್ ಗಳಿಸಲು ಸಾಧ್ಯವಿಲ್ಲ. ಟ್ರಂಪ್ ಅವರ ಇಂಥ ಚಿಂತನಾ ಕ್ರಮ ಬೇರೆ ದೇಶಗಳನ್ನು ಸುಲಭವಾಗಿ ಮಾತುಕತೆ ಮೇಜಿಗೆ ಬಂದು ಕೂರಿಸುತ್ತದೆ’ ಎಂದು ಲುಟ್ನಿಕ್ ಸಮರ್ಥಿಸಿಕೊಂಡರು.
‘ಬ್ರಿಟನ್ ಬಳಿಕ ಭಾರತದ ಜತೆಗೆ ಡೀಲ್ ಮಾಡಿಕೊಳ್ಳುತ್ತೇವೆ ಎಂದು ಟ್ರಂಪ್ ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ನಾವು ಭಾರತದ ಜತೆಗೆ ಮಾತುಕತೆ ಆರಂಭಿಸಿದಾಗ ಅವರಿಗೂ 3 ಶುಕ್ರವಾರದ ಟೈಂ (3 ವಾರದ ಗಡುವು) ನೀಡಿದ್ದೆವು. ನಾನು ಒಪ್ಪಂದದ ಮಾತುಕತೆ, ಭೂಮಿಕೆ ಸಿದ್ಧಪಡಿಸುತ್ತೇನೆ. ಆದರೆ, ಆ ಡೀಲ್ ಅಂತಿಮಗೊಳಿಸುವುದು ಮಾತ್ರ ಟ್ರಂಪ್. ಹೀಗಾಗಿ ಮೋದಿ ಅವರು ಟ್ರಂಪ್‌ಗೆ ವೈಯಕ್ತಿಕವಾಗಿ ಕರೆ ಮಾಡಬೇಕು ಎಂದು ತಿಳಿಸಿದ್ದೆ. ಆದರೆ ಮೋದಿ ಅವರು ಟ್ರಂಪ್‌ಗೆ ಕರೆ ಮಾಡಲೇ ಇಲ್ಲ’ ಎಂದು ಲುಟ್ನಿಕ್ ಹೇಳಿದರು.
‘ಭಾರತದ ಗಡುವು ಮುಗಿದ ಬಳಿಕ ಇಂಡೋನೇಷ್ಯಾ, ಫಿಲಿಪ್ಪಿನ್ಸ್ ಮತ್ತು ವಿಯೆಟ್ನಾಂ ಜತೆಗೆ ಒಪ್ಪಂದ ಮಾಡಿಕೊಂಡೆವು. ಆ ಬಳಿಕ ಕರೆ ಮಾಡಿ ‘ನಾವು ಡೀಲ್‌ಗೆ ಸಿದ್ಧ’ ಎಂದು ಭಾರತ ಹೇಳಿತು. ಮೂರು ವಾರಗಳ ಮೊದಲೇ ನಿಲ್ದಾಣ ಬಿಟ್ಟ ರೈಲಿಗೆ ನೀವು ಸಿದ್ಧರಾಗಿದ್ದೀರಾ? ಎಂದು ಪ್ರಶ್ನಿಸಿದೆ’ ಎಂದು ಲುಟ್ನಿಕ್ ವ್ಯಂಗ್ಯವಾಡಿದರು.
ಲುಟ್ನಿಕ್ ಹೇಳಿಕೆ ವಾಸ್ತವಕ್ಕೆ ದೂರ:
ಭಾರತ- 8 ಸಲ ಮೋದಿ-ಟ್ರಂಪ್ ಫೋನ್ ಚರ್ಚೆ- ಅನೇಕ ವ್ಯಾಪಾರ ಮಾತುಕತೆ ಆಗಿವೆ- ಭಾರತದ ವಿದೇಶಾಂಗ ವಕ್ತಾರ ಸ್ಪಷ್ಟನೆನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಲಿಲ್ಲ. ಎರಡೂ ದೇಶದ ವ್ಯಾಪಾರ ಒಪ್ಪಂದ ಆಗದಿರುವುದಕ್ಕೆ ಇದು ಕಾರಣ’ ಎಂದಿದ್ದ ಅಮೆರಿಕದ ವಾಣಿಜ್ಯ ಸಚಿವ ಹೋವರ್ಡ್ ಲುಟ್ನಿಕ್ ಹೇಳಿಕೆಯನ್ನು ಭಾರತ ಅಲ್ಲಗೆಳೆದಿದ್ದು, ‘ಉಭಯ ನಾಯಕರ ನಡುವೆ 8 ಬಾರಿ ಮಾತುಕತೆ ನಡೆದಿತ್ತು. ಭಾರತದ ನಿಯೋಗ ಕೂಡ ಅನೇಕ ಬಾರಿ ವ್ಯಾಪಾರ ಮಾತುಕತೆಯನ್ನು ಈವರೆಗೆ ನಡೆಸಿದೆ’ ಎಂದಿದೆ.
ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ‘ಕಳೆದ ವರ್ಷ ಫೆ.13ರಿಂದಲೂ ಭಾರತ ವ್ಯಾಪಾರ ಒಪ್ಪಂದದ ಮಾತುಕತೆಗೆ ಬದ್ಧವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ವ್ಯಾಪಾರ ಒಪ್ಪಂದಕ್ಕೆ ಬರಲು ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿವೆ. 2025ರಲ್ಲಿ ಮೋದಿ ಮತ್ತು ಟ್ರಂಪ್ 8 ಸಲ ಫೋನ್‌ನಲ್ಲಿ ಮಾತನಾಡಿದ್ದಾರೆ. ಹೀಗಾಗಿ ಲುಟ್ನಿಕ್ ಹೇಳಿಕೆ ವಾಸ್ತವಕ್ಕೆ ದೂರವಾಗಿದೆ’ ಎಂದರು.
ಮೋದಿ, ಟ್ರಂಪ್ 8 ಸಲ ಮಾತಾಡಿದ್ದಾರೆ
ಕಳೆದ ವರ್ಷ ಫೆ.13ರಿಂದಲೂ ಭಾರತ ವ್ಯಾಪಾರ ಒಪ್ಪಂದದ ಮಾತುಕತೆಗೆ ಬದ್ಧವಾಗಿತ್ತು. ಅಂದಿನಿಂದ ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿವೆ. 2025ರಲ್ಲಿ ಮೋದಿ ಮತ್ತು ಟ್ರಂಪ್ 8 ಸಲ ಫೋನ್‌ನಲ್ಲಿ ಮಾತನಾಡಿದ್ದಾರೆ. ಲುಟ್ನಿಕ್ ಹೇಳಿಕೆ ವಾಸ್ತವಕ್ಕೆ ದೂರ.
- ರಣಧೀರ್ ಜೈಸ್ವಾಲ್, ವಿದೇಶಾಂಗ ವಕ್ತಾರ
