ರಷ್ಯಾದಿಂದ ತೈಲ ಖರೀದಿ ಮಾಡುವ ದೇಶಗಳಿಗೆ ಕಡಿವಾಣ ಹಾಕಲು ನಾನಾ ತಂತ್ರ ಹೆಣೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಂಥ ದೇಶಗಳ ಮೇಲೆ ಶೇ.500ರಷ್ಟು ತೆರಿಗೆ ಹಾಕಲು ಅವಕಾಶ ಕಲ್ಪಿಸುವ ‘ರಷ್ಯಾ ನಿರ್ಬಂಧ ಮಸೂದೆ’ ಮಂಡನೆಗೆ ಹಸಿರು ನಿಶಾನೆ ತೋರಿದ್ದಾರೆ.
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮಾಡುವ ದೇಶಗಳಿಗೆ ಕಡಿವಾಣ ಹಾಕಲು ನಾನಾ ತಂತ್ರ ಹೆಣೆಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಂಥ ದೇಶಗಳ ಮೇಲೆ ಶೇ.500ರಷ್ಟು ತೆರಿಗೆ ಹಾಕಲು ಅವಕಾಶ ಕಲ್ಪಿಸುವ ‘ರಷ್ಯಾ ನಿರ್ಬಂಧ ಮಸೂದೆ’ ಮಂಡನೆಗೆ ಹಸಿರು ನಿಶಾನೆ ತೋರಿದ್ದಾರೆ.
ಒಂದು ವೇಳೆ ಮಸೂದೆಗೆ ಅಮೆರಿಕ ಸಂಸತ್‌ನ ಅನುಮೋದನೆ ಸಿಕ್ಕರೆ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸಿರುವ ಭಾರತ, ಬ್ರೆಜಿಲ್‌ನಂಥ ದೇಶಗಳು ಅಮೆರಿಕಕ್ಕೆ ರಫ್ತು ಮಾಡುವ ಉತ್ಪನ್ನಗಳ ಮೇಲೆ ಅಮೆರಿಕ ಶೇ.500ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಪ್ರತಿತೆರಿಗೆ ಹೆಸರಲ್ಲಿ ಭಾರತದ ಉತ್ಪನ್ನಗಳಿಗೆ ಅಮೆರಿಕ ಶೇ.50ರಷ್ಟು ತೆರಿಗೆ ಹೇರಿದೆ. ಅದರ ಬೆನ್ನಲ್ಲೇ ಭಾರತದ ಮೇಲೆ ಕಂಡುಕೇಳರಿಯದ ಪ್ರಮಾಣದ ತೆರಿಗೆ ದಾಳಿಗೆ ಟ್ರಂಪ್ ಸಜ್ಜಾಗಿದ್ದಾರೆ. ಆದರೆ ಭಾರತ ಈಗಾಗಲೇ ಅಮೆರಿಕದ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯಲ್ಲಿ ಅಂತಿಮ ಹಂತಕ್ಕೆ ಬಂದಿದೆ. ಒಂದು ವೇಳೆ ಆ ಒಪ್ಪಂದ ಜಾರಿಯಾದರೆ ಮಸೂದೆಯಲ್ಲಿ ಪ್ರಸ್ತಾಪ ಮಾಡಿದಷ್ಟು ತೆರಿಗೆ ಭಾರತದ ಮೇಲೆ ಬೀಳುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದಿಂದ ತೈಲ ಆಮದನ್ನು ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಡಿತಗೊಳಿಸಿವೆಯಾದರೂ ಸಂಪೂರ್ಣವಾಗಿ ನಿಲ್ಲಿಸಿಲ್ಲ. ಇದು ಅಮೆರಿಕದ ಕಣ್ಣು ಕೆಂಪಗಾಗಿಸಿದೆ ಎನ್ನಲಾಗುತ್ತಿದೆ.
ತೆರಿಗೆ ದಾಳಿಯೇಕೆ?:
ನೊಬೆಲ್ ಶಾಂತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟ್ರಂಪ್, ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಹರಸಾಹಸ ಮಾಡುತ್ತಿದ್ದಾರೆ. ಆದರೆ ರಷ್ಯಾ ಯುದ್ಧ ನಿಲ್ಲಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಭಾರತ, ಚೀನಾ ಮೊದಲಾದ ದೇಶಗಳು ರಷ್ಯಾದಿಂದ ತೈಲವನ್ನು ಖರೀದಿಸಿ, ಪರೋಕ್ಷವಾಗಿ ಯುದ್ಧಕ್ಕೆ ಬೆಂಬಲ ನೀಡುತ್ತಿವೆ ಎಂಬುದು ಟ್ರಂಪ್ ಆರೋಪ. ಹೀಗಾಗಿ ಈ ದೇಶಗಳ ಮೇಲೆ ತೆರಿಗೆ ಬರೆ ಎರೆದರೆ ರಷ್ಯಾದ ಆರ್ಥಿಕ ಮೂಲವನ್ನು ದುರ್ಬಲಗೊಳಿಸುವ ಲೆಕ್ಕಾಚಾರ ಹೊಂದಿದ್ದಾರೆ.
ಏನಿದು ರಷ್ಯಾ ನಿರ್ಬಂಧ ಮಸೂದೆ?:
ರಿಪಬ್ಲಿಕನ್ ಸಂಸದ ಲಿಂಡ್ಸೆ ಗ್ರಹಾಂ ಹಾಗೂ ಡೆಮಾಕ್ರಟಿಕ್ ಪಕ್ಷದ ಸಂಸದ ರಿಚರ್ಡ್ ಬ್ಲೂಮೆಂಟಲ್ ಈ ಮಸೂದೆಯನ್ನು ಸಿದ್ಧಪಡಿಸಿದ್ದಾರೆ. ಇದು ಸಂಸತ್ತಿನಲ್ಲಿ ಅನುಮೋದನೆ ಪಡೆದರೆ, ರಷ್ಯಾದ ತೈಲ, ಅನಿಲ, ಯುರೇನಿಯಂ ಮತ್ತು ಇತರ ವಸ್ತುಗಳನ್ನು ಖರೀದಿಸುವ ದೇಶಗಳ ಮೇಲೆ ಅಧ್ಯಕ್ಷರು ಶೇ.500ರಷ್ಟು ತೆರಿಗೆ ವಿಧಿಸಲು ಅನುವು ಮಾಡಿಕೊಡುತ್ತದೆ.
- ಅಮೆರಿಕದ ಒತ್ತಡಕ್ಕೆ ಮಣಿದು ಭಾರತ ಈಗಾಗಲೇ ರಷ್ಯಾದಿಂದ ತೈಲ ಖರೀದಿ ಕಡಿತಗೊಳಿಸಿದೆ
- ಆದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಅಗ್ಗದ ತೈಲ ಆಮದು ನಿಲ್ಲಿಸಿಲ್ಲ
- ಭಾರತ, ಬ್ರೆಜಿಲ್‌ನಂತಹ ದೇಶಗಳ ವರ್ತನೆಯಿಂದ ಅಮೆರಿಕ ಸರ್ಕಾರ ಕೆಂಡಾಮಂಡಲ
- ಹೀಗಾಗಿ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500% ತೆರಿಗೆ ಹೇರುವ ಯೋಜನೆ
- ಸಂಸತ್ತಲ್ಲಿ ಮಸೂದೆ ಮಂಡಿಸಲು ಅಧ್ಯಕ್ಷ ಟ್ರಂಪ್ ಅಸ್ತು. ಜಾರಿ ಆದರೆ ಭಾರತಕ್ಕೆ 550% ತೆರಿಗೆ?
