ಯುದ್ಧದ ವೇಳೆ ಭಾರತ-ಆಸಿಯಾನ್ ಸ್ನೇಹ ಮುಖ್ಯ: ಮೋದಿ

| Published : Oct 11 2024, 11:46 PM IST

ಸಾರಾಂಶ

ಪ್ರಪಂಚದ ಕೆಲವು ಭಾಗಗಳು ಘರ್ಷಣೆಗಳು ಮತ್ತು ಉದ್ವಿಗ್ನತೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತ-ಆಸಿಯಾನ್ ಸ್ನೇಹ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಪಿಟಿಐ ವಿಯೆಂಟಿಯಾನ್‌

ಪ್ರಪಂಚದ ಕೆಲವು ಭಾಗಗಳು ಘರ್ಷಣೆಗಳು ಮತ್ತು ಉದ್ವಿಗ್ನತೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತ-ಆಸಿಯಾನ್ ಸ್ನೇಹ ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.ಇಲ್ಲಿ 21ನೇ ಭಾರತ-ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘10 ವರ್ಷಗಳ ಹಿಂದೆ ಆ್ಯಕ್ಟ್ ಈಸ್ಟ್ ನೀತಿಯನ್ನು ಘೋಷಿಸಿದ್ದೆ ಮತ್ತು ಕಳೆದ ದಶಕದಲ್ಲಿ ಅದು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಬಾಂಧವ್ಯಕ್ಕೆ ಹೊಸ ಶಕ್ತಿ, ನಿರ್ದೇಶನ ಮತ್ತು ವೇಗವನ್ನು ನೀಡಿದೆ‘ ಎಂದು ಹೇಳಿದರು.

‘ಕಳೆದ ದಶಕದಲ್ಲಿ, ಭಾರತ-ಆಸಿಯಾನ್ ವ್ಯಾಪಾರವು ದ್ವಿಗುಣಗೊಂಡಿದೆ ಮತ್ತು ಈಗ 130 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ ಎಂದ ಅವರು, ಏಷ್ಯಾದ ಶತಮಾನ ಎಂದೂ ಕರೆಯಲ್ಪಡುವ 21ನೇ ಶತಮಾನವು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ಶತಮಾನ ಎಂದು ನಾನು ನಂಬುತ್ತೇನೆ’ ಎಂದು ಪ್ರಧಾನಿ ಹೇಳಿದರು.‘ಪ್ರಪಂಚದ ಹಲವಾರು ಭಾಗಗಳು ಘರ್ಷಣೆಗಳು ಮತ್ತು ಉದ್ವಿಗ್ನತೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತ-ಆಸಿಯಾನ್ ಸ್ನೇಹ, ಸಮನ್ವಯ ಮಾತುಕತೆ ಮತ್ತು ಸಹಕಾರವು ಬಹಳ ಮುಖ್ಯವಾಗಿದೆ’ ಎಂದು ಅವರು ಹೇಳಿದರು.ಇದಕ್ಕೂ ಮುನ್ನ ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು 2 ದಿನಗಳ ಭೇಟಿಗಾಗಿ ಮೋದಿ ಇಲ್ಲಿಗೆ ಲಾವೋಸ್‌ಗೆ ಆಗಮಿಸಿದರು. ಆಗ ಅವರಿಗೆ ಲಾವೋಸ್‌ ಸರ್ಕಾರದ ವತಿಯಿಂದ ಹಾಗೂ ಲಾವೋಸ್‌ನಲ್ಲಿನ ಭಾರತೀಯರ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.

ಆಸಿಯಾನ್ ಸದಸ್ಯ ರಾಷ್ಟ್ರಗಳು ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌ ಸಿಂಗಾಪುರ್, ಥೈಲ್ಯಾಂಡ್, ಭಾರತ, ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾ ಮತ್ತು ಬ್ರೂನಿ ದಾರುಸ್ಸಲಾಮ್- ಇವು ಆಸಿಯಾನ್‌ ದೇಶಗಳು.