ಸಾರಾಂಶ
ನವದೆಹಲಿ: ಸೌದಿ ಅರೇಬಿಯಾದ ಜತೆಗೆ ರಕ್ಷಣಾ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕ್ ನಾಯಕರ ಭಂಡ ಧೈರ್ಯ ಹೆಚ್ಚಿದ್ದು, ‘ಒಂದು ವೇಳೆ ಭಾರತ ನೆರೆಯ ರಾಷ್ಟ್ರಗಳ ಮೇಲೆ ಯುದ್ಧ ಘೋಷಿಸಿದರೆ ಸೌದಿ ನಮ್ಮ ಬೆನ್ನಿಗೆ ನಿಲ್ಲಲಿದೆ’ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಈ ಒಪ್ಪಂದವನ್ನು ಯಾವುದೇ ಆಕ್ರಮಣಕ್ಕೆ ಬಳಸಿಕೊಳ್ಳುವ ಉದ್ದೇಶ ನಮಗಿರಲಿಲ್ಲ. ಆದರೆ ಬೆದರಿಕೆ ಹಾಕಿದರೆ ನಿಸ್ಸಂಶಯವಾಗಿ ಇದು ಕಾರ್ಯರೂಪಕ್ಕೆ ಬರುತ್ತದೆ. ಸೌದಿ ಜತೆಗಿನ ಒಪ್ಪಂದ ಆಕ್ರಮಣಕಾರಿ ಎನ್ನುವುದಕ್ಕಿಂತ ರಕ್ಷಣಾತ್ಮಕವಾಗಿದೆ. ಭಾರತವು ಯುದ್ಧ ಘೋಷಿಸಿದರೆ ಸೌದಿ ಪಾಕಿಸ್ತಾನದ ಪರ ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದಿದ್ದಾರೆ.ನಮ್ಮ ಅಣ್ವಸ್ತ್ರ ಇನ್ನು ಸೌದಿಗೂ ಲಭ್ಯ: ಪಾಕ್ಇಸ್ಲಾಮಾಬಾದ್: ಸೌದಿ ಅರೇಬಿಯಾದೊಂದಿಗೆ ಆಗಿರುವ ರಕ್ಷಣಾ ಒಪ್ಪಂದದ ಅಡಿಯಲ್ಲಿ ತನ್ನ ದೇಶದ ಪರಮಾಣು ಸಾಮರ್ಥ್ಯಗಳು ಸೌದಿಗೂ ಲಭ್ಯವಾಗಲಿದೆ ಎಂದು ಪಾಕಿಸ್ತಾನ ಘೋಷಿಸಿದೆ. ಈ ಮೂಲಕ, ಅಣ್ವಸ್ತ್ರ ಹೊಂದಿರುವ ಏಕೈಕ ಇಸ್ಲಾಮಿಕ್ ದೇಶ ತಾನೊಬ್ಬನೇ ಎಂದು ಪರೋಕ್ಷವಾಗಿ ಕೊಚ್ಚಿಕೊಂಡಿದೆ.ಈ ಕುರಿತು ಮಾಧ್ಯಮದವರಲ್ಲಿ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್, ‘ಪಾಕಿಸ್ತಾನವು ಅಣ್ವಸ್ತ್ರವನ್ನು ಬಹಳ ಹಿಂದೆಯೇ ಸಿದ್ಧಿಸಿಕೊಂಡಿತ್ತು. ಜತೆಗೆ ಆಗಿನಿಂದಲೇ ಸೇನೆಗೂ ಅದರ ತರಬೇತಿ ಕೊಡಲಾಗುತ್ತಿದೆ. ಈಗ ಆಗಿರುವ ಒಪ್ಪಂದದ ಅಡಿ ಇವುಗಳು(ಅಣ್ವಸ್ತ್ರ) ಸೌದಿಗೂ ದೊರೆಯಲಿವೆ’ ಎಂದು ಹೇಳಿದ್ದಾರೆ.ಜತೆಗೆ, ‘ಪಾಕ್ ಅಥವಾ ಸೌದಿ ಮೇಲೆ ಯಾವ ಕಡೆಯಿಂದ ದಾಳಿ ನಡೆದರೂ ಇಬ್ಬರೂ ಒಟ್ಟಿಗೆ ಅದನ್ನು ತಡೆದು ಪ್ರತಿದಾಳಿ ಮಾಡುತ್ತೇವೆ’ ಎಂದು ಹೇಳಿದರು. ಈ ಮೂಲಕ, ಸೌದಿಯ ಮೇಲೆ ಯಾರಾದರೂ ದಾಳಿ ಮಾಡಿದರೆ, ಅವರ ರಕ್ಷಣೆಗೆ ತಾವು ಅಣ್ವಸ್ತ್ರ ಒದಗಿಸುವುದಾಗಿ ಹೇಳಿದ್ದಾರೆ.