ಸಾರಾಂಶ
- ಅಮೆರಿಕ ಆದೇಶ । ಭಾರತೀಯರ ಮೇಲೆ ತೀವ್ರ ಪರಿಣಾಮ- ಎಚ್1ಬಿ ವೀಸಾ ಶುಲ್ಕ ₹2 ಲಕ್ಷದಿಂದಮೀಗ ₹88 ಲಕ್ಷಕ್ಕೇರಿಕೆ!- ಇಂದು ಮಧ್ಯರಾತ್ರಿಯಿಂದಲೇ ಜಾರಿ । ಐಟಿ ವಲಯದ ತಲ್ಲಣ- ರಾತ್ರಿಯೊಳಗೆ ಅಮೆರಿಕಕ್ಕೆ ಮರಳಲು ಕಂಪನಿಗಳು ತಾಕೀತು
===ಏನಿದು ಎಚ್1ಬಿ?
ವಿಶೇಷ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕದಲ್ಲಿನ ಕಂಪನಿಗಳು ವಿದೇಶಿ ತಜ್ಞರನ್ನು ನೇಮಿಸಿಕೊಳ್ಳಲು ನೀಡುವ ವೀಸಾ. ಪ್ರತಿ ವರ್ಷ ಅಂದಾಜು 65000- 85000 ಎಚ್1ಬಿ ವೀಸಾಗಳನ್ನು ಅಮೆರಿಕ ಸರ್ಕಾರ ವಿತರಿಸುತ್ತದೆ. ಈ ಪೈಕಿ ಶೇ.71ರಷ್ಟನ್ನು ಭಾರತೀಯರೇ ಪಡೆದುಕೊಳ್ಳುತ್ತಾರೆ.==ಶುಲ್ಕ ಈವರೆಗೆ ಎಷ್ಟಿತ್ತು?
ಕಂಪನಿ, ಒಟ್ಟಾರೆ ಸಿಬ್ಬಂದಿ ಗಾತ್ರ ಆಧರಿಸಿ ಪ್ರತಿ ಎಚ್1ಬಿ ವೀಸಾಕ್ಕೆ ಸರ್ಕಾರವು 1.75 ಲಕ್ಷ ರು.ನಿಂದ 4 ಲಕ್ಷ. ರು.ವರೆಗೂ ಶುಲ್ಕ ವಿಧಿಸುತ್ತಿತ್ತು. ಈ ಶುಲ್ಕವನ್ನು ಉದ್ಯೋಗಿ ಪರವಾಗಿ ಆತನ ಕಂಪನಿಗಳು ಪಾವತಿಸುತ್ತಿದ್ದವು. ಈ ಶುಲ್ಕವನ್ನು ಇದೀಗ ದಿಢೀರ್ 88 ಲಕ್ಷ ರು.ವರೆಗೂ ಹೆಚ್ಚಿಸಲಾಗಿದೆ.==ಈಗ ಹೆಚ್ಚಳ ಏಕೆ?2003ರಲ್ಲಿ ಅಮೆರಿಕದ ಐಟಿ ಉದ್ಯಮದಲ್ಲಿ ಎಚ್1ಬಿ ವೀಸಾ ಪಡೆದವರ ಪಾಲು ಶೇ.30ರ ಆಸುಪಾಸಿತ್ತು. ಅದು ಈಗ ಶೇ.65ರ ಗಡಿ ದಾಟಿದೆ. ಇದರಿಂದ ಅಮೆರಿಕನ್ನರಿಗೆ ಉದ್ಯೋಗ ಕೈತಪ್ಪುತ್ತಿದೆ ಎಂಬ ಕಾರಣಕ್ಕೆ ವೀಸಾ ಶುಲ್ಕ ಹೆಚ್ಚಿಸಲಾಗಿದೆ.==
ಕೋರ್ಟ್ ಕಟಕಟೆಗೆಎಚ್1ಬಿ ಪ್ರಕರಣ?
ಟ್ರಂಪ್ ನಿರ್ಧಾರದ ಬಗ್ಗೆ ಅಮೆರಿಕ ಕಂಪನಿಗಳು ಹಾಗೂ ಅಲ್ಲಿ ನೆಲೆಸಿರುವ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲರೂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.--ಕುಟುಂಬಗಳಿಗೆ ಸಮಸ್ಯೆ
ವೀಸಾ ದುಬಾರಿಯಾಗುವುದರಿಂದ ಹಲವು ಕುಟುಂಬಗಳಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಇದನ್ನು ಉಭಯ ದೇಶಗಳಿಗೆ ಅನುಕೂಲವಾಗುವಂತೆ ಮಾಡುವತ್ತ ಅಮೆರಿಕದ ಅಧಿಕಾರಿಗಳು ಗಮನಹರಿಸುವ ಭರವಸೆ ಭಾರತ ಸರ್ಕಾರಕ್ಕಿದೆ. ಇದರ ಪೂರ್ಣ ಪರಿಣಾಮವನ್ನು ಭಾರತದ ಕಂಪನಿಗಳು ಪರಿಶೀಲಿಸುತ್ತಿವೆ.- ರಣಧೀರ್ ಜೈಸ್ವಾಲ್, ವಿದೇಶಾಂಗ ಕಾರ್ಯದರ್ಶಿ--
ನ್ಯೂಯಾರ್ಕ್/ವಾಷಿಂಗ್ಟನ್: ಗಣೇಶ ಚತುರ್ಥಿ ಮುನ್ನಾದಿನ ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ನವರಾತ್ರಿಗೂ ಮುನ್ನ ಭಾರತದ ಮೇಲೆ ಹೊಸ ಪ್ರಹಾರ ನಡೆಸಿದ್ದಾರೆ. ಭಾರತದ ಐಟಿ ಕಂಪನಿಗಳು ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಎಚ್1-ಬಿ ವೀಸಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ.ಅದರಂತೆ, ಇನ್ನು ಮುಂದೆ ಎಚ್-1ಬಿ ವೀಸಾ ಪ್ರಾಯೋಜಕತ್ವ ಕಾರ್ಯಕ್ರಮದಡಿ ವಿದೇಶಿ ನೌಕರರಿಗೆ ಉದ್ಯೋಗ ನೀಡುವ ಕಂಪನಿಗಳು ವಾರ್ಷಿಕವಾಗಿ 88 ಲಕ್ಷ ರು. ಶುಲ್ಕ ಪಾವತಿಸುವುದು ಕಡ್ಡಾಯ. ಈ ಕುರಿತು ಟ್ರಂಪ್ ಅಧಿಸೂಚನೆ ಹೊರಡಿಸಿದ್ದು, ಸೆ.21ರ ಬೆಳಗಿನ ಜಾವ 12.01 ನಿಮಿಷದಿಂದ ಹೊಸ ನಿಯಮ ಜಾರಿಗೆ ಬರಲಿದೆ.
ಈವರೆಗೆ ಈ ವೀಸಾ ಶುಲ್ಕ 1.75 ಲಕ್ಷದಿಂದ 4 ಲಕ್ಷ ರು.ವರೆಗೆ ಇತ್ತು. ಇದೀಗ ಆ ಶುಲ್ಕವನ್ನು ಸುಮಾರು 40 ಪಟ್ಟು ಹೆಚ್ಚಿಸಲು ಟ್ರಂಪ್ ನಿರ್ಧರಿಸಿದ್ದಾರೆ. ಅಮೆರಿಕನ್ನರ ಉದ್ಯೋಗಕ್ಕೆ ಸಂಚಕಾರ ಬರುತ್ತಿದೆ ಎಂಬ ಕಾರಣವೊಡ್ಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಮೇಲ್ನೋಟಕ್ಕೆ ಅಮೆರಿಕದಲ್ಲಿರುವ ಹಾಗೂ ಅಮೆರಿಕದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಎಲ್ಲಾ ದೇಶಗಳ ಉದ್ಯೋಗಿಗಳ ಮೇಲೂ ಈ ಹೊಸ ನಿಯಮ ಅನ್ವಯವಾದರೂ ಬಹುದೊಡ್ಡ ಹೊಡೆತ ಬೀಳುವುದು ಮಾತ್ರ ಭಾರತದ ಮೇಲೆ. ಯಾಕೆಂದರೆ ಅಮೆರಿಕದಲ್ಲಿ ಕಳೆದ ಕೆಲ ವರ್ಷಗಳಿಂದ ವಿತರಣೆಯಾಗುತ್ತಿರುವ ಎಚ್1ಬಿ ವೀಸಾದ ಅತಿದೊಡ್ಡ ಲಾಭ ಪಡೆಯುತ್ತಿರುವುದೇ ಭಾರತೀಯರು. ಅಲ್ಲಿ ವಿತರಣೆಯಾಗುತ್ತಿರುವ ಎಚ್1ಬಿ ವೀಸಾದ ಶೇ.71ರಷ್ಟು ಪಾಲು ಭಾರತೀಯ ನೌಕರರ ಪಾಲಾಗುತ್ತಿದೆ. ಇದೀಗ ಟ್ರಂಪ್ ಅವರ ಹೊಸ ನೀತಿಯಿಂದಾಗಿ ಭಾರತದ ಐಟಿ ಕಂಪನಿಯ ಲಕ್ಷಾಂತರ ನೌಕರರ ‘ಅಮೆರಿಕದ ಕನಸಿಗೆ’ ತಣ್ಣೀರೆರಚಿದಂತಾಗಲಿದೆ.ರಾಷ್ಟ್ರೀಯ ಭದ್ರತೆಗೆ ಅಪಾಯದ ನೆಪ:
ವಲಸೆಯೇತರ ನೌಕರರ ಅಮೆರಿಕ ಪ್ರವೇಶಕ್ಕೆ ನಿಯಂತ್ರಣ ಹೇರುವ ಕುರಿತ ಎಚ್1ಬಿ ವೀಸಾದ ಅಧಿಸೂಚನೆಗೆ ಸಹಿಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಎಚ್1ಬಿ ವೀಸಾ ದುರ್ಬಳಕೆ ದೇಶದ ರಾಷ್ಟ್ರೀಯ ಭದ್ರತೆಗೆ ಒಡ್ಡಿದ ಅಪಾಯ. ಉನ್ನತ ಕೌಶಲ ಹೊಂದಿರುವ ವಿದೇಶಿ ನೌಕರರನ್ನು ಅಮೆರಿಕಕ್ಕೆ ತಾತ್ಕಾಲಿಕವಾಗಿ ಕರೆತರಲು ಎಚ್1ಬಿ ವೀಸಾ ನಿಯಮ ರೂಪಿಸಲಾಗಿತ್ತು. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅಮೆರಿಕದ ಉದ್ಯೋಗಿಗಳಿಗೆ ಪರ್ಯಾಯವಾಗಿ ಕಡಿಮೆ ಕೌಶಲ್ಯ ಹೊಂದಿರುವ, ಕಡಿಮೆ ವೇತನದ ನೌಕರರನ್ನು ಹೊರಗಿನಿಂದ ಕರೆತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ತಂತ್ರಜ್ಞಾನ ಕಂಪನಿಗಳು ಈ ಹೊಸ ನಿಯಮ ಬಗ್ಗೆ ಕಳವಳ ವ್ಯಕ್ತಪಡಿಸಿಲ್ವಾ ಎಂಬ ಪ್ರಶ್ನೆಗೆ, ಅವರೆಲ್ಲ ತುಂಬಾ ಖುಷಿ ಪಡಲಿದ್ದಾರೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಈ ಹೊಸ ನಿಯಮ ಹಾಲಿ ಅಮೆರಿಕದಲ್ಲೇ ಇರುವ ಉದ್ಯೋಗಿಗಳಿಗೆ ಅನ್ವಯ ಆಗುತ್ತಾ, ವೀಸಾ ನವೀಕರಕ್ಕೂ ಅನ್ವಯ ಆಗುತ್ತಾ, ರಜೆ ಮೇಲೆ ತವರಿಗೆ ತೆರಳಿರುವ ಉದ್ಯೋಗಿಗಳ ಮೇಲೂ ಅನ್ವಯ ಆಗುತ್ತಾ ಎಂಬುದರ ಬಗ್ಗೆ ಅಮೆರಿಕ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲಹೀಗಾಗಿ ಅಮೆಜಾನ್, ಮೈಕ್ರೋಸಾಫ್ಟ್ ಮತ್ತಿತರ ಸಂಸ್ಥೆಗಳು ರಜೆ ಅಥವಾ ಉದ್ಯೋಗ ನಿಮಿತ್ತ ಅಮೆರಿಕದಿಂದ ಹೊರಗಿರುವ ಎಚ್1ಬಿ ವೀಸಾದಡಿಯ ಸಿಬ್ಬಂದಿ ಹಾಗೂ ಕುಟುಂಬಸ್ಥರಿಗೆ 24 ಗಂಟೆಯೊಳಗೆ ವಾಪಸಾಗುವಂತೆ ಸೂಚಿಸಿವೆ. ಅಮೆರಿಕದಿಂದ ತವರಿಗೆ ಹೊರಡಲು ವಿಮಾನ ಏರಿ ಕುಳಿತವರು ವಿಷಯ ತಿಳಿದ ಕೂಡಲೇ ವಿಮಾನದಿಂದ ಕೆಳಗಿಳಿದಿದ್ದಾರೆ. ರಜೆಗೆಂದು ತವರಿಗೆ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ.
--ವೀಸಾ ದುರ್ಬಳಕೆ ರಾಷ್ಟ್ರೀಯ ಭದ್ರತೆಗೆ ಬಲು ಅಪಾಯಕಾರಿಎಚ್1ಬಿ ವೀಸಾ ದುರ್ಬಳಕೆ ದೇಶದ ರಾಷ್ಟ್ರೀಯ ಭದ್ರತೆಗೆ ಒಡ್ಡಿದ ಅಪಾಯ. ಉನ್ನತ ಕೌಶಲ ಹೊಂದಿರುವ ವಿದೇಶಿ ನೌಕರರನ್ನು ಅಮೆರಿಕಕ್ಕೆ ತಾತ್ಕಾಲಿಕವಾಗಿ ಕರೆತರಲು ಎಚ್1ಬಿ ವೀಸಾ ನಿಯಮ ರೂಪಿಸಲಾಗಿತ್ತು. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅಮೆರಿಕದ ಉದ್ಯೋಗಿಗಳಿಗೆ ಪರ್ಯಾಯವಾಗಿ ಕಡಿಮೆ ಕೌಶಲ್ಯ ಹೊಂದಿರುವ, ಕಡಿಮೆ ವೇತನದ ನೌಕರರನ್ನು ಹೊರಗಿನಿಂದ ಕರೆತರಲಾಗುತ್ತಿದೆ.ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ==