ಸಾರಾಂಶ
ಪ್ರಸಕ್ತ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆಡಳಿತಾರೂಢ ಕಾಂಗ್ರೆಸ್‌ಗೆ ತಲೆಬಿಸಿ ಉಂಟುಮಾಡಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕುತೂಹಲ ಮೂಡಿದೆ
ಬೆಂಗಳೂರು : ಪ್ರಸಕ್ತ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಆಡಳಿತಾರೂಢ ಕಾಂಗ್ರೆಸ್‌ಗೆ ತಲೆಬಿಸಿ ಉಂಟುಮಾಡಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕುತೂಹಲ ಮೂಡಿದೆ. ಸಂಡೂರಿನಲ್ಲಿ ಇ.ತುಕಾರಾಂ ಪುತ್ರಿ ಅಥವಾ ಪತ್ನಿಗೆ ಟಿಕೆಟ್ ಬಹುತೇಕ ಅಂತಿಮ ಎಂಬಂತಾಗಿದ್ದರೂ ಶಿಗ್ಗಾವಿ ಮತ್ತು ಚನ್ನಪಟ್ಟಣದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಲೆಕ್ಕಾಚಾರ ನಡೆದಿದೆ. ಶಿಗ್ಗಾವಿಯಲ್ಲಿ ಹಿಂದೂ ಅಥವಾ ಮುಸ್ಲಿಂ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಅಂತಿಮವಾಗಲಿದ್ದು, ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆಯ್ಕೆವರೆಗೆ ಕಾದು ನೋಡುವ ತಂತ್ರ ಅನುಸರಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ತುಕಾರಾಂ ಲೋಕಸಭೆಗೆ ಆಯ್ಕೆಯಾದ ಕಾರಣ ತೆರವಾದ ಸಂಡೂರು ಕ್ಷೇತ್ರಕ್ಕೆ ತುಕಾರಾಂ ಪುತ್ರಿ ಸೌಪರ್ಣಿಕಾ ಅಥವಾ ಪತ್ನಿ ಇ.ಅನ್ನಪೂರ್ಣ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಆದರೆ ಲಕ್ಷ್ಮಣ್ ಎಂಬುವವರು ಉಪಚುನಾವಣೆಯಲ್ಲೂ ಅವರದ್ದೇ ಕುಟುಂಬಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಈ ಬೇಡಿಕೆಗೆ ಮನ್ನಣೆ ಸಿಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಅಭ್ಯರ್ಥಿ ಬದಲಿಗೆ ಹಿಂದೂ ಅಭ್ಯರ್ಥಿ, ಅದರಲ್ಲೂ ಲಿಂಗಾಯತರಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಗೆಲುವಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
2004ರಿಂದಲೂ ಸತತ ಐದು ಬಾರಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದೆ. ಒಂದು ಬಾರಿಯೂ ಕ್ಷೇತ್ರವನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಲಿಂಗಾಯತರಿಗೆ ನೀಡಬೇಕು ಎಂಬ ಒತ್ತಾಯವಿದೆ. ಮತ್ತೊಂದೆಡೆ ಸಚಿವ ಜಮೀರ್ ಅಹಮದ್ ಖಾನ್ ಅಲ್ಪಸಂಖ್ಯಾತರಿಗೆ ಇರುವ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನೇ ಕಣಕ್ಕಿಳಿಸಬೇಕು ಎಂದು ಒತ್ತಡ ಹಾಕಿದ್ದಾರೆ. ಹೀಗಾಗಿ ಹೈಕಮಾಂಡ್ ಅಂತಿಮ ನಿರ್ಧಾರ ಮಾಡಬೇಕಿದೆ. ಒಂದೊಮ್ಮೆ ಹಿಂದೂಗಳಿಗೆ ಸ್ಪರ್ಧೆಗೆ ಅವಕಾಶ ನೀಡಿದರೆ ಬೇವಿನಮರದ್, ಆರ್.ಶಂಕರ್ ಸೇರಿ ಹಲವರು ಆಕಾಂಕ್ಷಿಗಳಿದ್ದು, ಲಿಂಗಾಯತ ಸಮುದಾಯದ ಬೇವಿನಮರದ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಚನ್ನಪಟ್ಟಣದಲ್ಲಿ ಕಾದುನೋಡುವ ತಂತ್ರ: ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಅಂತಿಮಗೊಳಿಸಲು ಕಾಯುತ್ತಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಮೇಲೆ ಸ್ಪರ್ಧೆಗೆ ಒತ್ತಡ ಇದೆ. ಒಂದೊಮ್ಮೆ ಜೆಡಿಎಸ್‌ನಿಂದ ಯೋಗೇಶ್ವರ್‌ಗೆ ಟಿಕೆಟ್ ಕೈತಪ್ಪಿ ಯೋಗೇಶ್ವರ್ ಕಾಂಗ್ರೆಸ್‌ಗೆ ಬರುವುದಾದರೆ ಕಾಂಗ್ರೆಸ್ ಯೋಗೇಶ್ವರ್‌ಗೇ ಟಿಕೆಟ್ ನೀಡಲಿದೆ. ಹೀಗಾಗಿ ಕಾಂಗ್ರೆಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶಿಗ್ಗಾವಿಯಲ್ಲಿ ಯಾರು?
- 2004ರಿಂದ ಸತತ 5 ಬಾರಿ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಒಮ್ಮೆಯೂ ಗೆದ್ದಿಲ್ಲ
- ಲಿಂಗಾಯತರಿಗೆ ಅವಕಾಶ ಕೊಟ್ಟರೆ ಪಕ್ಷಕ್ಕೆ ಗೆಲುವು ಎನ್ನುತ್ತಿವೆ ಪಕ್ಷದ ಆಂತರಿಕ ಸಮೀಕ್ಷೆ
- ಕ್ಷೇತ್ರ ಬಿಟ್ಟುಕೊಡಲು ಅಲ್ಪಸಂಖ್ಯಾತರ ಹಿಂದೇಟು. ಹೈಕಮಾಂಡ್ ಅಂಗಳಕ್ಕೆ ಚೆಂಡು
ಸಂಡೂರಿಗೆ ಯಾರು?
- ತುಕಾರಾಂ ಲೋಕಸಭೆಗೆ ಆಯ್ಕೆಯಾದ ಕಾರಣ ತೆರವಾಗಿರುವ ಕ್ಷೇತ್ರವಿದು
- ತುಕಾರಾಂ ಪುತ್ರಿ ಸೌಪರ್ಣಿಕಾ/ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ಸಾಧ್ಯತೆ
- ಟಿಕೆಟ್ ನೀಡದಂತೆ ಲಕ್ಷ್ಮಣ್ ಎಂಬುವರಿಂದ ಪಟ್ಟು. ಮನ್ನಣೆ ಸಂಭವ ಕ್ಷೀಣ
ಚನ್ನಪಟ್ಟಣದಲ್ಲಿ ಸಸ್ಪೆನ್ಸ್
- ಎನ್‌ಡಿಎ ಅಭ್ಯರ್ಥಿ ಯಾರಾಗಲಿದ್ದಾರೆ ಎಂದ ಕಾದು ನೋಡುತ್ತಿರುವ ಕಾಂಗ್ರೆಸ್
- ಡಿಕೆಸು ಸ್ಪರ್ಧೆಗೆ ಒತ್ತಡ. ಯೋಗೇಶ್ವರ್ ಪಕ್ಷಕ್ಕೆ ಬಂದರೆ ಅವರಿಗೇ ಟಿಕೆಟ್
- ಇಲ್ಲದಿದ್ದರೆ ಮತ್ತೊಬ್ಬರು ಅಭ್ಯರ್ಥಿಯಾಗುವುದು ಖಚಿತ. ಅದು ಯಾರು?