ಡೆನ್ಮಾರ್ಕ್‌ನ ಸ್ವಾಯತ್ತ ಪ್ರಾಂತ್ಯವಾದ ಗ್ರೀನ್‌ಲ್ಯಾಂಡ್ ಅನ್ನು ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿರುವ ಅಮೆರಿಕ ಇದೀಗ ಅಲ್ಲಿನ ಜನರಿಗೆ ಹಣ ಕೊಟ್ಟು ಡೆನ್ಮಾರ್ಕ್‌ನಿಂದ ಪ್ರತ್ಯೇಕವಾಗುವಂತೆ ಪ್ರಚೋದಿಸಲು ಮುಂದಾಗಿದೆ.
ವಾಷಿಂಗ್ಟನ್: ಡೆನ್ಮಾರ್ಕ್‌ನ ಸ್ವಾಯತ್ತ ಪ್ರಾಂತ್ಯವಾದ ಗ್ರೀನ್‌ಲ್ಯಾಂಡ್ ಅನ್ನು ತನ್ನ ಕೈವಶ ಮಾಡಿಕೊಳ್ಳಲು ಮುಂದಾಗಿರುವ ಅಮೆರಿಕ ಇದೀಗ ಅಲ್ಲಿನ ಜನರಿಗೆ ಹಣ ಕೊಟ್ಟು ಡೆನ್ಮಾರ್ಕ್‌ನಿಂದ ಪ್ರತ್ಯೇಕವಾಗುವಂತೆ ಪ್ರಚೋದಿಸಲು ಮುಂದಾಗಿದೆ. ಅದಕ್ಕಾಗಿ ಪ್ರತಿ ವ್ಯಕ್ತಿಗೆ 9 ಲಕ್ಷ ರು.ಗಳಿಂದ 90 ಲಕ್ಷ ರು. (10,000 ಡಾಲರ್‌ನಿಂದ 1,00,000 ಡಾಲರ್) ನೀಡಲು ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಗ್ರೀನ್‌ಲ್ಯಾಂಡ್ ನಿಯಂತ್ರಣಕ್ಕೆ ತೆಗದುಕೊಳ್ಳಲು ಡೊನಾಲ್ಡ್ ಟ್ರಂಪ್ ಆಡಳಿತವು ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಅವುಗಳಲ್ಲಿ 9 ಲಕ್ಷದಿಂದ 90 ಲಕ್ಷ ರು.ವರೆಗೆ ಹಣ ನೀಡುವ ತಂತ್ರವೂ ಸೇರಿದೆ.
ಗ್ರೀನ್‌ಲ್ಯಾಂಡ್‌ನಲ್ಲಿ ಅರ್ಧದಷ್ಟು ಜನ ಅಮೆರಿಕ ಪರ ಒಲವು ಹೊಂದಿದ್ದರೆ, ಇನ್ನರ್ಧದಷ್ಟು ಜನ ಅಮೆರಿಕ ವಿರೋಧಿಗಳಾಗಿದ್ದಾರೆ ಎನ್ನಲಾಗಿದೆ. ಇಂಥದ್ದರಲ್ಲಿ ಡೆನ್ಮಾರ್ಕ್ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಆದರೆ ಶ್ವೇತಭವನದ ಅಧಿಕಾರಿಗಳ ಈ ಪ್ರಸ್ತಾವವನ್ನು ಗ್ರೀನ್‌ಲ್ಯಾಂಡ್ ಮತ್ತು ಯುರೋಪಿಯನ್ ದೇಶಗಳ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ ಎಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಗ್ರೀನ್‌ಲ್ಯಾಂಡ್ ಮೇಲೇಕೆ ಟ್ರಂಪ್ ಕಣ್ಣು?:ಪ್ರಪಂಚದ ಅತಿ ದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್, ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಭಾಗದಲ್ಲಿ ಬರುವ ದ್ವೀಪವು ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಯುರೋಪ್ ಮತ್ತು ಉತ್ತರ ಅಮೆರಿಕದ ನಡುವೆ ಇದೆ. 50ರ ದಶಕದಲ್ಲಿ ಶೀತಲ ಸಮರದ ವೇಳೆ ಅಮೆರಿಕ ಹಾಗೂ ಯುರೋಪ್ ದೇಶಗಳ ನಡುವೆ ಕೆಲವು ಒಪ್ಪಂದ ಆಗಿದ್ದವು. ಈ ಪ್ರಕಾರ, ಗ್ರೀನ್‌ಲ್ಯಾಂಡ್‌ನ ಯಾವುದೇ ಭಾಗದಲ್ಲಿ ಅಮೆರಿಕ ಸೇನಾ/ವಾಯು/ನೌಕಾನೆಲೆ ಹೊಂದಬಹುದಾಗಿದೆ. ಅದರಂತೆ ಈಗಾಗಲೇ ಅಮೆರಿಕದ ದೊಡ್ಡ ವಾಯುನೆಲೆ ಇದೆ. ಇದೀಗ ಹಳೆಯ ಒಪ್ಪಂದ ಬಂಡವಾಳ ಮಾಡಿಕೊಂಡು ಅಮೆರಿಕ ಇತರ ಭಾಗಗಳಲ್ಲೂ ನೆಲೆಗಳನ್ನು ಸ್ಥಾಪಿಸಿ ವಶಕ್ಕೆ ಮುಂದಾಗಿದೆ.
ಇಲ್ಲಿ ಸೇನಾನೆಲೆಯನ್ನು ಬಲಪಡಿಸಿಕೊಂಡರೆ, ಅಮೆರಿಕವು ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಿಂದ ಬರುವ ಯಾವುದೇ ಕ್ಷಿಪಣಿಗಳನ್ನು ತಡೆಯಬಹುದು. ಅದೇ ರೀತಿ, ಏಷ್ಯಾ ಅಥವಾ ಯುರೋಪ್ ಕಡೆಗೆ ಕ್ಷಿಪಣಿಗಳನ್ನು ಅಥವಾ ಹಡಗುಗಳನ್ನು ಗ್ರೀನ್‌ಲ್ಯಾಂಡ್‌ನಿಂದ ಸುಲಭವಾಗಿ ಉಡಾಯಿಸಬಹುದು ಎಂಬುದು ಟ್ರಂಪ್ ಲೆಕ್ಕಾಚಾರ.
ಜೊತೆಗೆ, ಗ್ರೀನ್‌ಲ್ಯಾಂಡ್‌ನಲ್ಲಿ ಅಪರೂಪದ ಖನಿಜಗಳು ಹೇರಳವಾಗಿವೆ. ಇವುಗಳನ್ನು ಮೊಬೈಲ್, ಎಲೆಕ್ಟ್ರಿಕ್ ವಾಹನಗಳು, ಬಾಂಬ್‌ಗಳು, ಶಸ್ತ್ರಾಸ್ತ್ರಗಳು ಮೊದಲಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಜಗತ್ತಿನ ಬಹುಪಾಲು ಖನಿಜಗಳ ಮೇಲೆ ಚೀನಾ ಪ್ರಾಬಲ್ಯ ಹೊಂದಿದೆ. ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಂಡರೆ, ಚೀನಾ ಪ್ರಾಬಲ್ಯಕ್ಕೆ ಹೊಡೆತ ಕೊಟ್ಟು, ಖನಿಜಗಳ ರಫ್ತಿನ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಬಹುದು ಎಂಬುದು ಟ್ರಂಪ್ ಲೆಕ್ಕಾಚಾರ.
ಟ್ರಂಪ್ ವ್ಯಾಮೋಹ ಏಕೆ?
1. ಗ್ರೀನ್‌ಲ್ಯಾಂಡ್‌ನಲ್ಲಿ ವಶಕ್ಕೆ ತೆಗೆದುಕೊಂಡರೆ ಏಷ್ಯಾ, ಯುರೋಪ್ ಮೇಲೆ ದಾಳಿ ಸುಲಭ
2. ರಷ್ಯಾ, ಚೀನಾಗಳು ಅಮೆರಿಕ ಮೇಲೆ ಮಾಡಬಹುದಾದ ಕ್ಷಿಪಣಿ ದಾಳಿಗಳ ತಡೆಯಬಹುದು
3. ಗ್ರೀನ್‌ಲ್ಯಾಂಡ್‌ನಲ್ಲಿರುವ ಅಪರೂಪದ ಖನಿಜಗಳನ್ನು ಬಳಸಿ ಚೀನಾಕ್ಕೆ ಸಡ್ಡು ಹೊಡೆಯಬಹುದು
ಈಗಿನ ಪ್ಲಾನ್ ಏನು?
- ಗ್ರೀನ್‌ಲ್ಯಾಂಡ್ ಎಂಬುದು ಡೆನ್ಮಾರ್ಕ್ ದೇಶದ ಸ್ವಾಯತ್ತ ಪ್ರಾಂತ್ಯ. ಅಮೆರಿಕಕ್ಕೆ ನೀಡಲು ಡೆನ್ಮಾರ್ಕ್ ವಿರೋಧ
- ಗ್ರೀನ್‌ಲ್ಯಾಂಡ್‌ನಲ್ಲಿರುವ ಅರ್ಧದಷ್ಟು ಜನ ಅಮೆರಿಕ ಪರ, ಇನ್ನರ್ಧ ಜನ ಅಮೆರಿಕ ವಿರುದ್ಧ ನಿಲುವು ಹೊಂದಿದ್ದಾರೆ
- ಹೀಗಾಗಿ ಜನರಿಗೆ ಹಣದ ಆಮಿಷವೊಡ್ಡಿ ಡೆನ್ಮಾರ್ಕ್ ವಿರುದ್ಧ ತಿರುಗಿಬೀಳುವಂತೆ ಕುಮ್ಮಕ್ಕು ನೀಡುವ ಯೋಜನೆ
