ದುಬೈ: ಅಮೆರಿಕ-ಇರಾನ್‌ ನಡುವೆ ಶಾಂತಿ ಸಂಧಾನ ಯತ್ನದ ಹೊರತಾಗಿಯೂ ಎರಡೂ ದೇಶಗಳು ಭಾನುವಾರ ಮತ್ತೆ ಪರಸ್ಪರ ತೀವ್ರ ದಾಳಿ-ಪ್ರತಿದಾಳಿ ನಡೆಸಿವೆ. ಅದರ ಬೆನ್ನಲ್ಲೇ ಇರಾನ್‌ ಸರ್ಕಾರ ಹೋರ್ಮುಜ್ ಜಲಸಂಧಿ ಮುಚ್ಚಿರುವುದಾಗಿ ಘೋಷಿಸಿದೆ. ಹೀಗಾಗಿ ಕದನ ವಿರಾಮದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ಕಚ್ಚಾತೈಲ ಬೆಲೆ ಏರಿಕೆಯ ಭೀತಿ ಜೊತೆಗೆ, ಜಾಗತಿಕ ವ್ಯಾಪಾರ ವಹಿವಾಟಿಗೆ ಮತ್ತೆ ಪೆಟ್ಟು ಬೀಳುವ ಆತಂಕ ಸೃಷ್ಟಿಯಾಗಿದೆ.

ನಿಗದಿತ ಮಾರ್ಗ ಬಿಟ್ಟು ಬೇರೆ ಕಡೆ ಸಂಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಭಾನುವಾರ ಬೆಳಗ್ಗೆ 11 ಭಾರತೀಯ ಸಿಬ್ಬಂದಿ ಇದ್ದ ಹಡಗೊಂದರ ಮೇಲೆ ಇರಾನ್‌ ದಾಳಿ ಮಾಡಿ, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೊಂಡಿ ಆಗಿರುವ ಹೋರ್ಮುಜ್‌ ಜಲಸಂಧಿಯನ್ನು ಮುಚ್ಚಿತ್ತು. ಇದರಿಂದ ಕ್ರುದ್ಧಗೊಂಡ ಅಮೆರಿಕ, ಇರಾನ್‌ನ 140 ನೆಲೆಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಇದರಲ್ಲಿ ಕ್ಷಿಪಣಿ ಮತ್ತು ಡ್ರೋನ್‌ ಲಾಂಚ್‌ ಸೈಟ್‌ಗಳು, ಗನ್‌ಪೌಡರ್‌ ಡಂಪ್‌ಗಳು, ಸಂವಹನ ಕೇಂದ್ರಗಳು ಹಾಗೂ ಇತರ ಸೇನಾ ನೆಲೆಗಳು ಸೇರಿವೆ. ಹೋರ್ಮುಜ್‌ನಲ್ಲಿ ನಾಗರಿಕ ಹಡಗುಗಳು ಮತ್ತು ವಾಣಿಜ್ಯ ನೌಕೆಗಳ ಮೇಲೆ ಇರಾನ್‌ನ ದಾಳಿಯ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ. ಇದು ಈ ವಾರದಲ್ಲಿ ಇರಾನ್‌ ಮೇಲಿನ ಅಮೆರಿಕದ 3ನೇ ಸುತ್ತಿನ ದಾಳಿ. ಜೊತೆಗೆ ಈ ದಾಳಿ ಮುಗಿಸಿದ ಬೆನ್ನಲ್ಲೇ ‘ನಮ್ಮ ಉದ್ದೇಶ ಈಡೇರಿದೆ. ಹೊಸ ಸುತ್ತಿನ ದಾಳಿ ಅಂತ್ಯಗೊಳಿಸಿದ್ದೇವೆ’ ಎಂದಿದೆ.

ಜೊತೆಗೆ, ಹೋರ್ಮುಜ್‌ ಮುಚ್ಚಲಾಗಿದೆ ಎಂಬ ಇರಾನ್‌ ಹೇಳಿಕೆಗೆ ತಿರುಗೇಟು ನೀಡಿರುವ ಅಮೆರಿಕ ಸೇನಾ ಕಮಾಂಡ್, ‘ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಕಾನೂನುಬದ್ಧವಾಗಿ ಸಾಗಬಯಸುವ ಎಲ್ಲಾ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತವಾಗಿದೆ. ಇರಾನಿನ ಅನಗತ್ಯ ಆಕ್ರಮಣ, ಕಿರುಕುಳ, ಬೆದರಿಕೆ ಹೊರತಾಗ್ಯೂ ನೌಕಾಯಾನ ಸ್ವಾತಂತ್ರ್ಯ ಖಚಿತಪಡಿಸಿಕೊಳ್ಳಲು ಅಮೆರಿಕ ಪಡೆಗಳು ಸಿದ್ಧವಾಗಿವೆ. ಇರಾನ್ ಜಲಸಂಧಿಯನ್ನು ನಿಯಂತ್ರಿಸುವುದಿಲ್ಲ. ಸಂಚಾರ ಸುಗಮವಾಗಿದೆ’ ಎಂದಿದೆ.


ಇರಾನ್‌ ಬಾಂಬ್:

ಇದಾದ ನಂತರ ಬಹ್ರೈನ್‌, ಕುವೈತ್, ಕತಾರ್‌ ಮತ್ತು ಒಮಾನ್‌ ಮೇಲೆ ಇರಾನ್‌ ಭೀಕರ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

ಹೋರ್ಮುಜ್‌ ಬಂದ್‌ ಆತಂಕ:

ಹೋರ್ಮುಜ್‌ ಜಲಸಂಧಿ ಜಾಗತಿಕ ವ್ಯಾಪಾರ ವಹಿವಾಟಿಗೆ ಬಹುಮುಖ್ಯವಾದ ಮಾರ್ಗ. ವಿಶ್ವ ತೈಲ ವ್ಯಾಪಾರದ ಸುಮಾರು ಶೇ.20 ಮತ್ತು ನೈಸರ್ಗಿಕ ಅನಿಲದ ಶೇ.25ರಷ್ಟು ಹೋರ್ಮುಜ್‌ ಮೂಲಕವೇ ಸಾಗುತ್ತದೆ. ಪ್ರತಿದಿನ ಸರಾಸರಿ 2 ಕೋಟಿ ಬ್ಯಾರೆಲ್ ತೈಲ ಇಲ್ಲಿಂದ ಹಾದುಹೋಗುತ್ತದೆ. ಭಾರತ ತನ್ನ ಶೇ.80-85 ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಇರಾಕ್, ಇರಾನ್‌ನ ತೈಲ ರಫ್ತು ಹೋರ್ಮುಜ್‌ ಮೇಲೆಯೇ ಅವಲಂಬಿತವಾಗಿದೆ.

ಸೈಪ್ರಸ್‌ ನೌಕೆ ಮೇಲೆ ಇರಾನ್ ದಾಳಿ: 10 ಭಾರತೀಯರ ರಕ್ಷಣೆ

ನವದೆಹಲಿ: ಒಮಾನ್‌ ಕರಾವಳಿಯ ಬಳಿಯ ಹೋರ್ಮುಜ್‌ ಜಲಸಂಧಿಯಲ್ಲಿ ಸೈಪ್ರಸ್‌ ಧ್ವಜ ಹೊತ್ತ ವಾಣಿಜ್ಯ ಹಡಗಿನ ಮೇಲೆ ಇರಾನ್ ಭಾನುವಾರ ಮುಂಜಾನೆ ದಾಳಿ ನಡೆಸಿದೆ. ಈ ವೇಳೆ ಹಡಗಿನಲ್ಲಿದ್ದ 11 ಭಾರತೀಯರಲ್ಲಿ 10 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಕಾಣೆಯಾಗಿದ್ದಾರೆ. ತಾನು ಅನುಮೋದಿಸಿದ ಮಾರ್ಗವನ್ನು ಬಿಟ್ಟು, ಬೇರೆ ಪಥದಲ್ಲಿ ಸಂಚರಿಸಿದ್ದರಿಂದ ದಾಳಿ ನಡೆಸಿದ್ದಾಗಿ ಇರಾನ್‌ ತಿಳಿಸಿದೆ. ಈ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದೆ.