ಅಂಕಾರ/ದುಬೈ/ಟೆಹ್ರಾನ್: ಕಳೆದ 2 ದಿನಗಳಿಂದ ಇರಾನ್ ಮೇಲೆ ಪುನಾರಂಭಿಸಿದ್ದ ಭೀಕರ ದಾಳಿಯನ್ನು ನಿಲ್ಲಿಸಿದ್ದಾಗಿ ಅಮೆರಿಕದ ಕೇಂದ್ರ ಕಮಾಂಡ್ (ಸೆಂಟ್‌ಕಾಂ) ಶುಕ್ರವಾರ ಘೋಷಿಸಿದೆ.
ಬುಧವಾರ ಇರಾನ್‌ನ 80 ಕಡೆ ಹಾಗೂ ಗುರುವಾರ 90 ಸೇನಾ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಆದರೆ ಈ ದಾಳಿಯನ್ನು ಪೂರ್ಣಗೊಳಿಸಿದ್ದಾಗಿ ಶುಕ್ರವಾರ ಹೇಳಿಕೆ ನೀಡಿದೆ. ಇದರ ಬೆನ್ನಲ್ಲೇ ವಿಶ್ವದ ಷೇರುಪೇಟೆಗಳು ಚೇತರಿಕೆ ಕಂಡಿವೆ. ಬ್ಯಾರೆಲ್‌ಗೆ 80 ಡಾಲರ್ ತಲುಪಿದ್ದ ಕಚ್ಚಾತೈಲ ಬೆಲೆ 76 ಡಾಲರ್‌ಗೆ ಇಳಿದಿದೆ.
ಆದರೂ ನಿಗೂಢ ದಾಳಿ:
ಇದರ ಹೊರತಾಗಿಯೂ ಇರಾನ್‌ನ ಹಲವೆಡೆ ಸಣ್ಣಪುಟ್ಟ ನಿಗೂಢ ವೈಮಾನಿಕ ದಾಳಿಗಳು ನಡೆದಿವೆ. ಬುಶೆಹರ್ ಪರಮಾಣು ಸ್ಥಾವರದ ಸಮೀಪ ಸೇರಿದಂತೆ ಇರಾನ್‌ನ ದಕ್ಷಿಣ ಭಾಗದಾದ್ಯಂತ ಸರಣಿ ಸ್ಫೋಟಗಳು ಸಂಭವಿಸಿವೆ. ಈ ದಾಳಿಯನ್ನು ತಾನು ಮಾಡಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಅಮೆರಿಕವು ಈ ದಾಳಿ ನಡೆಸಿದೆ ಎಂದು ಎಲ್ಲೂ ನೇರ ಆರೋಪ ಮಾಡಿಲ್ಲ
ಇರಾನ್ ಕೂಡ ಅಮೆರಿಕವು ಈ ದಾಳಿ ನಡೆಸಿದೆ ಎಂದು ಎಲ್ಲೂ ನೇರ ಆರೋಪ ಮಾಡಿಲ್ಲ. ಆದರೆ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿ ಸದಸ್ಯ ಎಸ್ಮಾಯಿಲ್ ಕೌಸಾರಿ ಮಾತನಾಡಿ, ‘ಯುಎಇ ಅಮೆರಿಕಕ್ಕೆ ಸಹಕಾರ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ದಾಳಿಯಲ್ಲಿ ಯುಎಇ ಅಥವಾ ಅಮೆರಿಕದ ಮಿತ್ರದೇಶಗಳು ಕೈಜೋಡಿಸಿರುವ ಶಂಕೆಯಿದೆ.
