ಭಾರತದ ಪರಮಾಣು ವಿದ್ಯುತ್ ಯೋಜನೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ, ಭಾರತಕ್ಕೆ ಆಸ್ಟ್ರೇಲಿಯಾದಿಂದ ಯುರೇನಿಯಂ ಪೂರೈಕೆ ಮಾಡುವ ಐತಿಹಾಸಿಕ ಒಪ್ಪಂದಕ್ಕೆ 12 ವರ್ಷಗಳ ಬಳಿಕ ಉಭಯ ದೇಶಗಳು ಗುರುವಾರ ಸಹಿ ಹಾಕಿವೆ.
ಮೆಲ್ಬರ್ನ್ : ಭಾರತದ ಪರಮಾಣು ವಿದ್ಯುತ್ ಯೋಜನೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ, ಭಾರತಕ್ಕೆ ಆಸ್ಟ್ರೇಲಿಯಾದಿಂದ ಯುರೇನಿಯಂ ಪೂರೈಕೆ ಮಾಡುವ ಐತಿಹಾಸಿಕ ಒಪ್ಪಂದಕ್ಕೆ 12 ವರ್ಷಗಳ ಬಳಿಕ ಉಭಯ ದೇಶಗಳು ಗುರುವಾರ ಸಹಿ ಹಾಕಿವೆ. ಇದೇ ವೇಳೆ, ನಾಗರಿಕ ಪರಮಾಣು ಇಂಧನ, ಕಡಲ ಭದ್ರತೆ ಮತ್ತು ನಿರ್ಣಾಯಕ ಖನಿಜಗಳ ವಲಯಗಳಿಗೆ ಸಂಬಂಧಪಟ್ಟ ಹಲವು ಒಪ್ಪಂದಗಳಿಗೂ ಸಹಿ ಹಾಕಲಾಗಿದೆ.
ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಅವರೊಂದಿಗೆ ಈ ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ. ಆ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಇಂದು ನಾವು ಪರಮಾಣು ಇಂಧನ ಕ್ಷೇತ್ರದಲ್ಲಿ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆಗೆ ದಾರಿ ಮಾಡಿಕೊಡುವುದಲ್ಲದೆ, ನಮ್ಮ ಶುದ್ಧ ಇಂಧನ ಗುರಿಗಳಿಗೆ ಹೊಸ ಚಾಲನೆ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು ಯುರೇನಿಯಂ ಒಪ್ಪಂದ?:
ಈ ಒಪ್ಪಂದದ ಅನ್ವಯ ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡಲಿದೆ. 2015ರಲ್ಲಿ ಸಹಿ ಹಾಕಿದ ನಾಗರಿಕ ಪರಮಾಣು ಸಹಕಾರ ಒಪ್ಪಂದ ಈಗ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಯುರೇನಿಯಂ ಅನ್ನು ಶಾಂತಿಯ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂಬುದು ಒಪ್ಪಂದದ ಪ್ರಮುಖ ನಿಬಂಧನೆ. ಇದರ ಮೇಲೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಕಟ್ಟುನಿಟ್ಟಾದ ಮೇಲ್ವಿಚಾರಣೆ ಇರುತ್ತದೆ.
ಒಪ್ಪಂದ ಏಕೆ ಮಹತ್ವದ್ದು?:
ಯುರೇನಿಯಂ ಎಂದರೆ ಪರಮಾಣು ರಿಯಾಕ್ಟರ್‌ಗಳಿಗೆ ಬಳಸುವ ಇಂಧನ. ಇದನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಪ್ರಸ್ತುತ ಭಾರತದ ನ್ಯೂಕ್ಲಿಯರ್ ಸಾಮರ್ಥ್ಯ ಸುಮಾರು 8 ಗಿ.ವ್ಯಾ. ಇದೆ. ಇದನ್ನು 2047ರೊಳಗೆ 100 ಗಿ.ವ್ಯಾ.ಗೆ ಹೆಚ್ಚಿಸುವ ಗುರಿ ಇದೆ.
ರಿಯಾಕ್ಟರ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಯುರೇನಿಯಂ ಅಗತ್ಯ ಬಹಳ ಹೆಚ್ಚಾಗಿದೆ. ಆಸ್ಟ್ರೇಲಿಯಾ ಪ್ರಪಂಚದಲ್ಲಿ ಅತಿ ಹೆಚ್ಚು, ಶೇ.28 ಯುರೇನಿಯಂ ನಿಕ್ಷೇಪ ಹೊಂದಿದೆ. ಭಾರತ ಈಗಾಗಲೇ ಕಜಕಿಸ್ತಾನ, ಕೆನಡಾ, ರಷ್ಯಾ ಇತ್ಯಾದಿ ದೇಶಗಳಿಂದ ಯುರೇನಿಯಂ ಆಮದು ಮಾಡಿಕೊಳ್ಳುತ್ತಿದ್ದರೂ, ರಾಜಕೀಯವಾಗಿ ಸ್ಥಿರವಾಗಿರುವ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ.

