ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಮೆರಿಕ, ಕೆಲ ತಿಂಗಳ ಹಿಂದೆ ಇಂಥದ್ದೇ ಪ್ರಯತ್ನ ನಡೆಸಿ ಅದರಲ್ಲಿ ವಿಫಲವಾಗಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ

ವಾಷಿಂಗ್ಟನ್‌: ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಮೆರಿಕ, ಕೆಲ ತಿಂಗಳ ಹಿಂದೆ ಇಂಥದ್ದೇ ಪ್ರಯತ್ನ ನಡೆಸಿ ಅದರಲ್ಲಿ ವಿಫಲವಾಗಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಮಡುರೋ ವಿಮಾನವನ್ನೇ ಕಿಡ್ನಾಪ್‌ ಮಾಡಿ ಬಂಧನಕ್ಕೆ ಅಮೆರಿಕ ಯತ್ನಿಸಿತ್ತು. ಆದರೆ ಮಡುರೋ ವಿಮಾನದ ಪೈಲಟ್‌ ಅದಕ್ಕೆ ಒಪ್ಪದ ಕಾರಣ ಯತ್ನ ವಿಫಲವಾಗಿತ್ತು.

ನಿಕೋಲಸ್‌ ಸೆರೆಗೆ ಅಮೆರಿಕ 16 ತಿಂಗಳ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಅದರ ಭಾಗವಾಗಿ ಅಮೆರಿಕದ ಏಜೆಂಟ್‌ ಎಡ್ವಿನ್‌ ಲೋಪೆಜ್‌, ಅಧ್ಯಕ್ಷ ಮಡುರೋ ವಿಮಾನದ ಪೈಲಟ್‌ಗೆ ದೊಡ್ಡ ಮೊತ್ತದ ಲಂಚದ ಆಮಿಷವನ್ನೊಡಿದ್ದರು. ಈ ಆಫರ್‌ ಅನ್ವಯ ಮಡುರೋ ವಿದೇಶಕ್ಕೆ ತೆರಳಿದ್ದ ವೇಳೆ ತಾವು ಹೇಳಿದ್ದ ರಹಸ್ಯ ಸ್ಥಳಕ್ಕೆ ವಿಮಾನ ತಿರುಗಿಸಬೇಕು ಎನ್ನಲಾಗಿತ್ತು. ಆದರೆ ಪೈಲಟ್‌ ಇದನ್ನು ಒಪ್ಪಿರಲಿಲ್ಲ. ಆದರೂ ಲೋಪೆಜ್‌ ಪ್ರಯತ್ನ ಕೈಬಿಡಲಿಲ್ಲ. ಪೈಲಟ್‌ ಬಳಿ ನಿನ್ನನ್ನು ಅತಿ ಶ್ರೀಮಂತನಾಗಿ ಮಾಡುತ್ತೇನೆ ಎನ್ನುವ ಡಿಮ್ಯಾಂಡ್‌ ಅನ್ನು ಪದೇ ಪದೇ ಇಡುತ್ತಿದ್ದನು. ಆದರೂ ಆತ ಒಪ್ಪಿರಲಿಲ್ಲ.

ಲಂಚದ ಮೊತ್ತವೂ ಏರಿಕೆ:

ಇದರ ನಡುವೆ ಕಳೆದ ಜುಲೈನಲ್ಲಿ ಲೋಪೆಜ್‌ ನಿವೃತ್ತಿ ಬಳಿಕವೂ ತನ್ನ ಯತ್ನ ಬಿಡಲಿಲ್ಲ. ಐಷಾರಾಮಿ ಖಾಸಗಿ ಜೆಟ್‌, ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ರಹಸ್ಯ ಸಭೆಗಳು ನಡೆಯುತ್ತಿತ್ತು. ಎನ್‌ಕ್ರಿಪ್ಟ್‌ ಮಾಡಿದ ಸಂದೇಶ ಕಳುಹಿಸುವ ಅಪ್ಲಿಕೇಶನ್‌ ಮೂಲಕ ಪೈಲಟ್‌ಗೆ ಸಂದೇಶ ಕಳುಹಿಸುತ್ತಿದ್ದನು. ಕಳೆದ ವರ್ಷದ ಆ.7ರಂದು ಲೋಪೆಜ್‌ ಮತ್ತೆ ಮಡುರೋ ಪೈಲಟ್‌ಗೆ ಅಧ್ಯಕ್ಷರನ್ನು ಉರುಳಿಸುವ ವಿಚಾರ ಪ್ರಸ್ತಾಪಿಸಿ ‘ ನಾನು ಇನ್ನೂ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಸಂದೇಶ ಕಳುಹಿಸಿದ್ದನು. ಅಲ್ಲದೇ ಬಹುಮಾನ ಮೊತ್ತವನ್ನು 450 ಕೋಟಿ ರು,ಗೂ ಏರಿಸಿರುವುದಾಗಿ ಕಳುಹಿಸಿದ್ದನು. ಈ ಪ್ರಯತ್ನಗಳೆಲ್ಲ ವ್ಯರ್ಥದ ಬಳಿಕ ವೆನಿಜುವೆಲಾದ ಮೇಲೆ ದಾಳಿ ನಡೆಸಿ ಮಡುರೋ ಬಂಧನಕ್ಕೆ ಟ್ರಂಪ್‌ ಅಸ್ತು ಎಂದರು ಎನ್ನಲಾಗಿದೆ.

ಡ್ರೋನ್‌, ಸ್ಪೈ ಮೂಲಕ ನಿಗಾ:ಮನೆ ಮಾದರಿ ಮಾಡಿ ದಾಳಿ

ವಾಷಿಂಗ್ಟನ್‌: ಮಡುರೋ ಬಂಧನಕ್ಕಾಗಿ ಅಮೆರಿಕ ಸುದೀರ್ಘ ಕಾಲದಿಂದ ಭಾರೀ ಸಿದ್ಧತೆ ನಡೆಸಿತ್ತು. ಗುಪ್ತಚರ ಡ್ರೋನ್‌, ಉಪಗ್ರಹ ಬಳಿಕ ಮಡುರೋ ಅವರ ಎಲ್ಲಾ ಕಾರ್ಯಾಚರಣೆಗೆ ಮೇಲೆ ನಿಗಾ ಇಡಲಾಗಿತ್ತು. ಇದರ ಜೊತೆಗೆ ಅಮೆರಿಕದ ಗುಪ್ತಚರರ ಮಡುರೋ ಮೇಲೆ ಹದ್ದಿನಗಣ್ಣಿಟ್ಟಿದ್ದರು. ಅಲ್ಲದೆ ಮಡುರೋ ಸರ್ಕಾರದೊಳಗಿದ್ದ ವ್ಯಕ್ತಿಯನ್ನು ಕೂಡಾ ಇಂಥ ಬೇಹುಗಾರಿಕೆ ಬಳಸಿಕೊಳ್ಳಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಮಡುರೋ ಯಾವಾಗ ಮಲಗಿದರು, ಏನು ತಿಂದರು, ಯಾವ ಬಣ್ಣದ ಬಟ್ಟೆ ಹಾಕಿದ್ದಾರೆ ಎಂಬ ಸಣ್ಣ ಸಣ್ಣ ಸಂಗತಿಗಳನ್ನೂ ಅದು ವರದಿ ಮಾಡುತ್ತಿತ್ತು. ಮಡುರೋ ಅವರ ಸಾಕುಪ್ರಾಣಿಗಳ ಮೇಲೂ ನಿಗಾ ಇಡಲಾಗಿತ್ತು. ಡಿಸೆಂಬರ್‌ ಆರಂಭದಲ್ಲಿ ಯೋಜನೆ ಅಂತಿಮವಾಯಿತು. ಸೈನಿಕರು ಮಡುರೋ ಮನೆಯ ಮಾದರಿಯನ್ನು ಅಮೆರಿಕದಲ್ಲಿ ನಿರ್ಮಾಣ ಮಾಡಿ, ಅದನ್ನು ಭೇದಿಸುವ ಅಭ್ಯಾಸ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೆ 4 ದಿನದ ಹಿಂದೆ ಟ್ರಂಪ್ ಅನುಮತಿ ನೀಡಿದ್ದರು, ಆದರೆ ಹವಾಮಾನ ಸರಿಯಿಲ್ಲದಿದ್ದರಿಂದ ಮತ್ತೆ ಕಾಯಬೇಕಾಯಿತು. ಅಂತಿಮವಾಗಿ ಅಧ್ಯಕ್ಷರ ಆದೇಶ ಶುಕ್ರವಾರ ರಾತ್ರಿ 10:46ಕ್ಕೆ (ಭಾರತೀಯ ಸಮಯ) ಅಂದರೆ ಕರಾಕಸ್‌ನಲ್ಲಿ ಶನಿವಾರ ಬೆಳಿಗ್ಗೆ ಸುಮಾರು 3:46ಕ್ಕೆ ಬಂತು. ಅಧ್ಯಕ್ಷರು ಸೈನಿಕರಿಗೆ ‘ಗುಡ್ ಲಕ್ ಆ್ಯಂಡ್‌ ಗಾಡ್‌ಸ್ಪೀಡ್’ ಎಂದು ಶುಭ ಕೋರಿದರು. ಕರಾಕಸ್‌ನಲ್ಲಿ ರಾತ್ರಿಯಾಗಿದ್ದರಿಂದ ಕತ್ತಲೆಯಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಯಿತು. ವಾಯು, ಭೂ ಮತ್ತು ಸಮುದ್ರಮಾರ್ಗದ ಮೂಲಕ 2 ಗಂಟೆ 20 ನಿಮಿಷ ಕಾರ್ಯಾಚರಣೆ ನಡೆಯಿತು. ಒಟ್ಟು 150 ಯುದ್ಧವಿಮಾನಗಳನ್ನು ಬಳಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.

ಬಾ ನನ್ನ ಹಿಡಿ ಎಂದು ಟ್ರಂಪ್‌ಗೆ ಸವಾಲು ಹಾಕಿದ್ದ ಮಡುರೋ!

ವಾಷಿಂಗ್ಟನ್‌: ಅಮೆರಿಕದ ಡೆಲ್ಟಾ ಪೋರ್ಸ್ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆ ಹಿಡಿದ ಬೆನ್ನಲ್ಲೇ, ಬಾ ನನ್ನನ್ನು ಹಿಡಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ವೆನಿಜುವೆಲಾ ಅಧ್ಯಕ್ಷ ಸವಾಲು ಹಾಕಿದ್ದ ಹಳೆಯ ವಿಡಿಯೋವೊಂದನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಕಳೆದ ಆಗಸ್ಟ್‌ನಲ್ಲಿ ವಿಮಾನ ಅಪಹರಣ ಮೂಲಕ ಮಡುರೋ ಸೆರೆಗೆ ಅಮೆರಿಕ ನಡೆಸಿದ ಯತ್ನ ವಿಫಲವಾಗಿತ್ತು. ಈ ವಿಷಯ ಮಡುರೋಗೆ ತಿಳಿದ ಬೆನ್ನಲ್ಲೇ ಮಡುರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಿಟ್ಟಿಗೆದ್ದು ‘ನಾನು ನಿಮಗಾಗಿ ಮಿರ್‌ಫ್ಲೋರ್ಸ್‌ ಅರಮನೆ ( ವೆನಿಜುವೆಲಾ ಅಧ್ಯಕ್ಷರ ನಿವಾಸ)ದಲ್ಲಿ ಕಾಯುತ್ತಿರುತ್ತೇನೆ. ತಡ ಮಾಡಬೇಡಿ. ನನ್ನನ್ನು ಬಂದು ಕರೆದುಕೊಂಡು ಹೋಗಿ. ಹೇಡಿ’ ಎಂದು ಟ್ರಂಪ್‌ ಉಲ್ಲೇಖಿಸದೆ ಪರೋಕ್ಷವಾಗಿ ಅವರ ವಿರುದ್ಧ ಕಿರಿಕಾರಿದ್ದರು.

ಬೆಳಗಿನ ಜಾವ 4:30ಕ್ಕೆ ಸ್ವತಃ ಪತ್ರಕರ್ತನ ಕರೆ ಸ್ವೀಕರಿಸಿದ ಟ್ರಂಪ್!

ವಾಷಿಂಗ್ಟನ್: ವೆನಿಜುವೆಲಾ ಅಧ್ಯಕ್ಷರನ್ನು ಸೆರೆಹಿಡಿದ ವಿಚಾರವನ್ನು ಶನಿವಾರ ಬೆಳಗಿನ ಜಾವ 4:21ಕ್ಕೆ ಟ್ರುತ್‌ ಸೋಷಿಯಲ್‌ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದರು. ಅದಾಗಿ 10 ನಿಮಿಷಕ್ಕೆ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ಶ್ವೇತಭವನದ ವರದಿಗಾರ ಟೈಲರ್ ಪೇಜರ್ ನೇರವಾಗಿ ಟ್ರಂಪ್‌ ಮೊಬೈಲ್‌ಗೆ ಕರೆ ಮಾಡಿದರು. ಅಚ್ಚರಿ ಎಂಬಂತೆ 3 ರಿಂಗ್ ಬಳಿಕ ಕರೆ ಸ್ವೀಕರಿಸಿದ ಟ್ರಂಪ್, ಪೇಜರ್‌ ಜೊತೆ ಚುಟುಕು ಮಾತುಕತೆ ನಡೆಸಿದರು ಎಂಬ ವಿಚಾರವನ್ನು ಸ್ವತಃ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಬೆಳಿಗ್ಗೆ 1 ಗಂಟೆಗೆ ವೆನಿಜುವೆಲಾದಲ್ಲಿದ್ದ ಸಹೋದ್ಯೋಗಿ ಅನಟೋಲಿ ಕುರ್ಮನೇವ್ ಕರಾಕಸ್‌ನಲ್ಲಿ ಬಾಂಬ್ ದಾಳಿ ನಡೆದಿದ್ದಾಗಿ ಪೇಜರ್‌ಗೆ ಸಂದೇಶ ಕಳಿಸಿದರು. ಈ ಬಗ್ಗೆ ಟ್ರಂಪ್ 4:21ಕ್ಕೆ ಪೋಸ್ಟ್ ಮಾಡಿದ ನಂತರ, ಪೇಜರ್ ನೇರವಾಗಿ ಟ್ರಂಪ್‌ಗೆ ಫೋನ್ ಮಾಡಿದರು. ಟ್ರಂಪ್ ‘ಹಲೋ’ ಎಂದ ಕೂಡಲೇ, ಪೇಜರ್‌ ‘ಕಾರ್ಯಾಚರಣೆ ಬಗ್ಗೆ ಪ್ರಶ್ನೆಗಳಿವೆ’ ಎಂದರು. ಅದಕ್ಕೆ ‘ಕೆಲವು ಗಂಟೆಗಳ ನಂತರ ಸುದ್ದಿಗೋಷ್ಠಿ ನೋಡಿ’ ಎಂದ ಟ್ರಂಪ್‌ ಕರೆ ಕಟ್ ಮಾಡಿದರು. 50 ಸೆಕೆಂಡ್‌ಗಳಯಲ್ಲಿ ಪೇಜರ್‌ 4 ಪ್ರಶ್ನೆ ಕೇಳಿದರು ಎಂದು ಪತ್ರಿಕೆ ವರದಿ ಮಾಡಿದೆ.