ವೆನಿಜುವೆಲಾ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಸೆರೆ ಹಿಡಿದ ಟ್ರಂಪ್ ಕ್ರಮವನ್ನು ಭಾರತ ಮೂಲದ ಕಮಲಾ ಹ್ಯಾರಿಸ್‌, ರೋ ಖನ್ನಾ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ನಾಯಕರು ಖಂಡಿಸಿದ್ದಾರೆ.

ವಾಷಿಂಗ್ಟನ್: ವೆನಿಜುವೆಲಾ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದ ಟ್ರಂಪ್ ಕ್ರಮವನ್ನು ಭಾರತ ಮೂಲದ ಕಮಲಾ ಹ್ಯಾರಿಸ್‌, ರೋ ಖನ್ನಾ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ನಾಯಕರು ಖಂಡಿಸಿದ್ದಾರೆ.

ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್‌, ‘ವೆನೆಜುವೆಲಾದಲ್ಲಿ ಟ್ರಂಪ್ ಅವರ ಕ್ರಮ ಕಾನೂನುಬಾಹಿರ ಮತ್ತು ಅವಿವೇಕತನದ್ದು. ಇದು ಡ್ರಗ್ಸ್‌ ಅಥವಾ ಪ್ರಜಾಪ್ರಭುತ್ವದ ಸಲುವಾಗಿ ನಡೆದ ಕಾರ್ಯಾಚರಣೆಯಲ್ಲ. ತೈಲ ಮತ್ತು ಪ್ರಾದೇಶಿಕವಾಗಿ ತಾನು ಬಲಿಷ್ಠ ಎಂದು ತೋರಿಸಿಕೊಳ್ಳುವ ಟ್ರಂಪ್ ಅವರ ಬಯಕೆಯಿಂದಾಗಿ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ರೋ ಖನ್ನಾ, ‘ಕ್ಸಿ ಜಿನ್‌ಪಿಂಗ್ ತೈವಾನ್ ಮುಖ್ಯಸ್ಥ ಲಿಯವರನ್ನು ಹಾಗೂ ಪುಟಿನ್ ಉಕ್ರೇನ್‌ನ ಜೆಲೆನ್ಸ್ಕಿಯವರನ್ನು ಬಂಧಿಸಿದರೆ ಏನೆನ್ನುವುದು? ಈ ಯುದ್ಧೋನ್ಮಾದದ ವಿರುದ್ಧ ಅಮೆರಿಕನ್ನರು ಆಂದೋಲನ ನಡೆಸಬೇಕು’ ಎಂದರು.

ಮಡುರೋ ರೀತಿ ಉಗ್ರ ಮಸೂದ್‌ನನ್ನೂ ಮೋದಿ ಹಿಡಿದು ತರಲಿ: ಒವೈಸಿ

ಮುಂಬೈ: ‘ಡ್ರಗ್ಸ್‌ ವ್ಯಾಪಾರದ ಆರೋಪದಲ್ಲಿ ವೆನಿಜುವೆಲಾ ಅಧ್ಯಕ್ಷರನ್ನು ಟ್ರಂಪ್ ಹಿಡಿದು ದೇಶಕ್ಕೆ ಕರೆತಂದಂತೆ ಉಗ್ರ ಮಸೂದ್‌ ಅಜರ್‌ನನ್ನೂ ಪ್ರಧಾನಿ ಮೋದಿ ಪಾಕ್‌ನಿಂದ ಹಿಡಿದು ತರಲಿ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, ‘ಟ್ರಂಪ್‌ಗೆ ವೆನಿಜುವೆಲಾದ ಅಧ್ಯಕ್ಷ ಮಡುರೋ ಅವರನ್ನು ಅಪಹರಿಸಲು ಸಾಧ್ಯವಾದರೆ ನೀವು ( ಪ್ರಧಾನಿ ಮೋದಿ) ಪಾಕಿಸ್ತಾನಕ್ಕೆ ಹೋಗಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ್ನು ಭಾರತಕ್ಕೆ ಕರೆ ತರಬಹುದು. ನೀವು ಪಾಕಿಸ್ತಾನಕ್ಕೆ ಹೋಗಿ ಮುಂಬೈ ದಾಳಿ ನಡೆಸಿದ ಕ್ರೂರ ಜನರನ್ನು ಮರಳಿ ಕರೆತರಬಹುದು. ಅದು ಮಸೂದ್‌ ಅಜರ್‌ ಆಗಿರಬಹುದು ಅಥವಾ ಎಲ್‌ಇಟಿಯ ಕ್ರೂರ ರಾಕ್ಷಸರಾಗಿರಬಹುದು’ ಎಂದಿದ್ದಾರೆ.

ವೆನಿಜುವೆಲಾ ಮೇಲೆ ಅಮೆರಿಕ ದಾಳಿ: ಭಾರತ ಕಳವಳ

ನವದೆಹಲಿ: ವೆನಿಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಪತ್ನಿಯನ್ನು ಅಮೆರಿಕ ತನ್ನ ಸುಪರ್ದಿಗೆ ತೆಗೆದುಕೊಂಡಿರುವುದಕ್ಕೆ ಭಾರತದ ತೀವ್ರ ಕಳವಳ ವ್ಯಕ್ತಪಡಿಸಿದ್ದು, ‘ತೈಲ ಸಮೃದ್ಧ ರಾಷ್ಟ್ರ ವೆನಿಜುವೆಲಾದ ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದೆ.ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಭಾರತ, ‘ವೆನಿಜುವೆಲಾದ ಇತ್ತೀಚಿನ ಬೆಳವಣಿಗೆಗಳು ತೀವ್ರ ಕಳವಳಕಾರಿ ವಿಷಯ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ವೆನಿಜುವೆಲಾ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಭಾರತ ಬೆಂಬಲ ನೀಡುತ್ತದೆ. ಮಾತುಕತೆ, ಸಂವಾದದ ಮೂಲಕ ಶಾಂತಿಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳಿ. ಎರಡೂ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಿ’ ಎಂದಿದೆ.

ಅಮೆರಿಕ ದಾಳಿಗೆ ‘ಆಪರೇಷನ್‌ ಅಬ್ಸೊಲ್ಯೂಟ್‌ ರಿಸಾಲ್ವ್‌’ ಹೆಸರು

ವಾಷಿಂಗ್ಟನ್‌: ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ವಿರುದ್ಧ ಡೆಲ್ಟಾ ಫೋರ್ಸ್‌ ನಡೆಸಿದ ದಾಳಿಗೆ ಅಮೆರಿಕ ಪರೇಷನ್‌ ಅಬ್ಸೊಲ್ಯೂಟ್‌ ರಿಸಾಲ್ವ್‌ ಎಂದು ಹೆಸರು ಇಟ್ಟಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ದಾಳಿಯನ್ನು ವೇಚನಾಯುಕ್ತ, ನಿಖರ ಎಂದು ಅಮೆರಿಕ ಬಣ್ಣಿಸಿದೆ.

ಅಮೆರಿಕ ವಾಯುದಾಳಿಗೆ ಸೈನಿಕರು, ನಾಗರಿಕರು ಸೇರಿ 40 ಮಂದಿ ಸಾವು

ಕಾರಕಸ್: ಶನಿವಾರ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ವೆನಿಜುವೆಲಾದ ಸೇನಾ ಸಿಬ್ಬಂದಿ ಹಾಗೂ ನಾಗರಿಕರು ಸೇರಿ ಕನಿಷ್ಠ 40 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ 3 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಹಾನಿಯಾಗಿ, ಹೊರಭಾಗದ ಗೋಡೆ ಕುಸಿದುಬಿದ್ದಿತ್ತು. ಹಲವರು ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದೀಗ ಸಾವಿನ ಸಂಖ್ಯೆಯನ್ನು ವೆನಿಜುವೆಲಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.