ಬೆಂಗ್ಳೂರು ಅರ್ಚಕರ ಪ್ರಾರ್ಥನೆ ಮೂಲಕ ಡೆಮಾಕ್ರೆಟ್‌ ಪಕ್ಷದ ಕಮಲಾ ಹ್ಯಾರಿಸ್‌ ಪಕ್ಷದ ಸಮಾವೇಶ ಪ್ರಾರಂಭ

| Published : Aug 23 2024, 01:08 AM IST / Updated: Aug 23 2024, 03:58 AM IST

ಸಾರಾಂಶ

ಅಮೆರಿಕದ ಡೆಮಾಕ್ರೆಟ್‌ ಪಕ್ಷದ ರಾಷ್ಟ್ರೀಯ ಸಮಾವೇಶದ 3ನೇ ದಿನದ ಕಾರ್ಯಕ್ರಮಕ್ಕೆ ಹಿಂದೂ ಪ್ರಾರ್ಥನೆ ಮೂಲಕ ಚಾಲನೆ ನೀಡಲಾಯಿತು.

ಶಿಕಾಗೋ: ಅಮೆರಿಕದ ಡೆಮಾಕ್ರೆಟ್‌ ಪಕ್ಷದ ರಾಷ್ಟ್ರೀಯ ಸಮಾವೇಶದ 3ನೇ ದಿನದ ಕಾರ್ಯಕ್ರಮಕ್ಕೆ ಹಿಂದೂ ಪ್ರಾರ್ಥನೆ ಮೂಲಕ ಚಾಲನೆ ನೀಡಲಾಯಿತು. ಬೆಂಗಳೂರು ಮೂಲದ ಅರ್ಚಕ ರಾಕೇಶ್‌ ಭಟ್‌ ಈ ಕಾರ್ಯಕ್ರಮ ನಡೆಸಿಕೊಟ್ಟರು. ಡೆಮಾಕ್ರಟ್‌ ಪಕ್ಷದಿಂದ ಈ ಬಾರಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ.

‘ನಮ್ಮಲ್ಲಿ ವಿವಿಧತೆಗಳಿದ್ದರೂ ರಾಷ್ಟ್ರದ ವಿಷಯಕ್ಕೆ ಬಂದಾಗ ಒಗ್ಗಟ್ಟಾಗಿ ನ್ಯಾಯದೆಡೆ ನಡೆಯಬೇಕು. ನಮ್ಮ ಮನಸ್ಸು ಒಂದೇ ರೀತಿ ಯೋಚಿಸಿ ಹೃದಯಗಳು ಒಟ್ಟಾಗಿ ಮಿಡಿಯಲಿ. ನಾವು ಶಕ್ತಿವಂತರಾಗಿ ದೇಶಕ್ಕೆ ಹೆಮ್ಮೆ ತರೋಣ’ ಎಂದು ಹಾರೈಸುವ ಮೂಲಕ ಹಿರಿಯ ಅರ್ಚಕರಾದ ರಾಕೇಶ್‌ ಭಟ್‌ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಸಮಾವೇಶವನ್ನು ಆರಂಭಿಸಿದರು.

ಬೆಂಗಳೂರು ಮೂಲದವರಾದ ಭಟ್‌ ಪ್ರಸ್ತುತ ಮೇರಿಲ್ಯಾಂಡ್‌ನ ಶ್ರೀ ಶಿವ ವಿಷ್ಣು ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಉಡುಪಿ ಅಷ್ಟಮಠದ ಪೇಜಾವರ ಸ್ವಾಮಿಗಳಿಂದ ಋಗ್ವೇದ ಮತ್ತು ತಂತ್ರಸಾರ ಅಧ್ಯಯನ ನಡೆಸಿದ್ದಾರೆ. ಕೆಲ ವರ್ಷಗಳ ಕಾಲ ಅಷ್ಟಮಠದಲ್ಲಿ ಸೇವೆ ಸಲ್ಲಿಸಿದ ಭಟ್‌ ನಂತರ ಬದರಿನಾಥ ಹಾಗೂ ಸೇಲಂನಲ್ಲಿ ಕೂಡ ಕೆಲಸ ಮಾಡಿದ್ದಾರೆ.