ಕರ್ನಾಟಕದಲ್ಲಿ ಬಿಜೆಪಿಗೆ 18ರಿಂದ 20 ಸ್ಥಾನ ನಿರೀಕ್ಷೆ

| Published : May 10 2024, 01:37 AM IST / Updated: May 10 2024, 04:27 AM IST

ಕರ್ನಾಟಕದಲ್ಲಿ ಬಿಜೆಪಿಗೆ 18ರಿಂದ 20 ಸ್ಥಾನ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡು ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಭರದಿಂದ ಸಾಗಿದ್ದು, ಜೆಡಿಎಸ್ ಜತೆಗೂಡಿ ಕನಿಷ್ಠ 18ರಿಂದ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿದೆ.

 ಬೆಂಗಳೂರು :  ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡು ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಭರದಿಂದ ಸಾಗಿದ್ದು, ಜೆಡಿಎಸ್ ಜತೆಗೂಡಿ ಕನಿಷ್ಠ 18ರಿಂದ 20 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹೊಂದಿದೆ.

ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಸ್ಪರ್ಧಿಸಿದ್ದು, ಇನ್ನುಳಿದ ಮೂರು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮುಂದಿಟ್ಟುಕೊಂಡು ಮತಯಾಚಿಸಿರುವುದರಿಂದ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವನ್ನೇನೊ ಬಿಜೆಪಿ ನಾಯಕರು ಹೊಂದಿದ್ದಾರೆ. ಆದರೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಒಳಗೊಳಗೆ ಭಯ ಇದ್ದೇ ಇದೆ. ಈ ಯೋಜನೆಗಳು ತಳಹಂತದಲ್ಲಿ ಹೇಗೆ ಕೆಲಸ ಮಾಡಿದೆಯೋ ಎಂಬ ಆತಂಕವೂ ಸಣ್ಣದಾಗಿ ಕಂಡು ಬರುತ್ತಿದೆ.

ಕಳೆದ ಬಾರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆ ಎಂಬಂತೆ 25 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇದೀಗ ಅವರ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ರಾಜ್ಯಾಧ್ಯಕ್ಷರಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆಯೂ ಹೌದು. ಹೀಗಾಗಿ, ವಿಜಯೇಂದ್ರ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ರಾಜ್ಯ ನಾಯಕರು ಕಳೆದ ಬಾರಿಯ ದಾಖಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳ್ಳುವ ಬಗ್ಗೆ ಪಕ್ಷದಲ್ಲಿ ಅನುಮಾನ ಕಂಡು ಬರುತ್ತಿದೆ.

ಮೋದಿ ಗ್ಯಾರಂಟಿ ವರ್ಸಸ್‌ ಸಿದ್ದರಾಮಯ್ಯ ಗ್ಯಾರಂಟಿ ನಡುವೆ ನಡೆದ ಚುನಾವಣಾ ಹೋರಾಟದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದ್ದರೂ ಕರಾರುವಾಕ್ಕಾಗಿ ಹೇಳದಂಥ ಸನ್ನಿವೇಶ ಇದೆ. ಆರಂಭದಲ್ಲಿ ಇದ್ದ ವಿಶ್ವಾಸ ನಂತರದ ದಿನಗಳಲ್ಲಿ ತುಸು ಕಡಮೆಯಾಯಿತು. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವೂ ಒಂದು ಕಾರಣ. ನಾವು 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎನ್ನುತ್ತಿದ್ದರೂ ಆ ಸಂಖ್ಯೆ ದಿನೇ ದಿನೇ ಕಡಮೆಯಾಗಿ ಅಂತಿಮವಾಗಿ 18ರಿಂದ 20 ಸ್ಥಾನಗಳನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲ್ಲಬಹುದು ಎಂಬ ಮಾಹಿತಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ಗೊತ್ತಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆ ಬಿಜೆಪಿಗೆ ದೊಡ್ಡ ಹೊಡೆತ ನೀಡಿತು. ಪರಿಣಾಮ ಬಿಜೆಪಿ ಹೀನಾಯ ಸೋಲನುಭವಿಸಿತು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮುಂದಿಟ್ಟುಕೊಂಡು ಭರ್ಜರಿ ಪ್ರಚಾರ ನಡೆಸಿದರೂ ಮತದಾರರು ದೇಶಕ್ಕಾಗಿ ಮೋದಿ ಎಂಬ ಅಂಶವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮತ್ತೊಬ್ಬ ಮುಖಂಡರು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪ್ರಬಲ ಹೋರಾಟ:  ಬಿಜೆಪಿ ರಾಜ್ಯ ನಾಯಕರ ಪ್ರಕಾರ, ಬೀದರ್‌, ಕಲಬುರಗಿ, ಕೊಪ್ಪಳ, ಬಳ್ಳಾರಿ, ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಹಾಸನ, ಚಿತ್ರದುರ್ಗ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ ಮತ್ತಿತರ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಬಲ ಹೋರಾಟ ನಡೆದಿದೆ.

ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಪಕ್ಕಾ ಎನ್ನುವಂತೆ ಹೇಳುವುದು ತುಸು ಕಷ್ಟ. ಗೆದ್ದರೂ ಪ್ರಯಾಸದ ಗೆಲುವು ಆಗಬಹುದೇ ಹೊರತು ಸುಲಭವಂತೂ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಳೆ ಪರಿಶೀಲನಾ ಸಭೆ 

ಲೋಕಸಭಾ ಚುನಾವಣೆಯ ಮತದಾನದ ಬಳಿಕ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸುವ ಸಂಬಂಧ ಶನಿವಾರ ಬಿಜೆಪಿ ಮುಖಂಡರ ಪರಿಶೀಲನಾ ಸಭೆ ನಡೆಯಲಿದೆ.

ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರು-ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಚುನಾವಣಾ ಪ್ರಚಾರ ನಡೆದ ಬಗೆ, ಯಾವ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗಬಹುದು, ಆ ಹಿನ್ನಡೆಗೆ ಕಾರಣಗಳೇನು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.