ರಾಜೀವ್‌ ಕುರಿತ ಮೋದಿ ಹೇಳಿಕೆ ಸುಳ್ಳು : ಕಾಂಗ್ರೆಸ್‌

| Published : Apr 26 2024, 12:58 AM IST / Updated: Apr 26 2024, 05:04 AM IST

ರಾಜೀವ್‌ ಕುರಿತ ಮೋದಿ ಹೇಳಿಕೆ ಸುಳ್ಳು : ಕಾಂಗ್ರೆಸ್‌
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ತಾಯಿ ಇಂದಿರಾ ಗಾಂಧಿಯವರ ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಪ್ಪಿಸಲು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ರದ್ದುಪಡಿಸಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್‌ ಪಕ್ಷ ತಿರುಗೇಟು ನೀಡಿದೆ.

 ನವದೆಹಲಿ :  ತಮ್ಮ ತಾಯಿ ಇಂದಿರಾ ಗಾಂಧಿಯವರ ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಪ್ಪಿಸಲು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ರದ್ದುಪಡಿಸಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್‌ ಪಕ್ಷ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಪ್ರಧಾನಿಯ ಸುಳ್ಳುಗಳು ಮತ್ತೆ ಅನಾವರಣಗೊಳ್ಳುತ್ತಿವೆ. 1985ರ ಬಜೆಟ್‌ ಭಾಷಣದಲ್ಲಿ ವಿತ್ತ ಮಂತ್ರಿ ವಿ.ಪಿ.ಸಿಂಗ್‌ ಅವರು ಎಸ್ಟೇಟ್‌ ತೆರಿಗೆ ರದ್ದುಪಡಿಸುವ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಕಾರಣಗಳನ್ನೂ ಅಲ್ಲೇ ಹೇಳಿದ್ದರು.

 ಸಂಪತ್ತಿನ ತೆರಿಗೆ ಮತ್ತು ಎಸ್ಟೇಟ್‌ ತೆರಿಗೆ ಇವೆರಡನ್ನೂ ಒಂದೇ ಆಸ್ತಿಯ ಮೇಲೆ- ವ್ಯಕ್ತಿ ಬದುಕಿದ್ದಾಗ ಒಂದು ತೆರಿಗೆ, ವ್ಯಕ್ತಿ ಸತ್ತ ಮೇಲೆ ಇನ್ನೊಂದು ತೆರಿಗೆ - ವಿಧಿಸುವುದು ತೆರಿಗೆದಾರರಿಗೆ ಕಿರುಕುಳ ನೀಡಿದಂತಾಗುತ್ತದೆ. ಹೀಗಾಗಿ ಎಸ್ಟೇಟ್‌ ತೆರಿಗೆ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದ್ದರು. 

ಆದರೆ ಇಂದಿರಾ ಗಾಂಧಿಯವರು ಅಲಹಾಬಾದ್‌ನ ತಮ್ಮ ಆಸ್ತಿಯನ್ನು 1970ರಲ್ಲೇ ನೆಹರು ಸ್ಮಾರಕ ನಿಧಿಗೆ ದಾನವಾಗಿ ನೀಡಿದ್ದರು. ಹೀಗಾಗಿ ಮೋದಿ ಹೇಳಿದ್ದು ಸುಳ್ಳು ಎಂಬುದು ಸಾಬೀತಾಗುತ್ತದೆ. ಪ್ರತಿ ಬಾರಿ ಪ್ರಧಾನಿ ಬಾಯಿ ತೆರೆದಾಗಲೂ ಅವರ ಸಣ್ಣತನ ಹಾಗೂ ಸುಳ್ಳು ಬುರುಕುತನ ಅನಾವರಣಗೊಳ್ಳುತ್ತಿದೆ’ ಎಂದು ಕಿಡಿಕಾರಿದ್ದಾರೆ.