ಜಾರ್ಖಂಡಲ್ಲಿ ಸಿಕ್ಕಿದ್ದು ಹಣದ ಪರ್ವತ: ಮೋದಿ ವಾಗ್ದಾಳಿ

| Published : May 07 2024, 01:14 AM IST / Updated: May 07 2024, 05:10 AM IST

ಸಾರಾಂಶ

ಈವರೆಗೆ ಜಾರಿ ನಿರ್ದೇಶನಾಲಯವೊಂದೇ ದೇಶದಲ್ಲಿ ಭ್ರಷ್ಟರಿಗೆ ಸೇರಿದ 1.25 ಲಕ್ಷ ಕೋಟಿ ರು. ಹಣ ಜಪ್ತಿ ಮಾಡಿದೆ. ಇತರೆ ತನಿಖಾ ಸಂಸ್ಥೆಗಳ ಹಣ ಸೇರಿದರೆ ಅದರ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಈ ಹಣವನ್ನು ಯಾರಿಂದ ಲೂಟಿ ಮಾಡಲಾಗಿತ್ತೋ ಅವರಿಗೆ ಮರಳಿಸುವುದು ಹೇಗೆಂದು ಸಮಾಲೋಚಿಸಲಾಗುತ್ತಿದೆ  

ಭುವನೇಶ್ವರ/ಅಮರಾವತಿ: ಜಾರ್ಖಂಡ್‌ ಕಾಂಗ್ರೆಸ್‌ ಸಚಿವರೊಬ್ಬರ ಆಪ್ತರ ಬಳಿ 30 ಕೋಟಿ ರು. ಪತ್ತೆಯಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್‌ ಪಕ್ಷ ಹಾಗೂ ಇಂಡಿಯಾ ಕೂಟದ ವಿರುದ್ಧ ಹರಿತ ವಾಗ್ದಾಳಿ ನಡೆಸಿದ್ದಾರೆ. ‘ಜಾರ್ಖಂಡ್‌ನಲ್ಲಿ ಇಂದು ಹಣದ ಪರ್ವತವೇ ಪತ್ತೆ ಆಗಿದೆ. ಕಾಂಗ್ರೆಸ್‌ ಪಕ್ಷವು ಕಪ್ಪು ಹಣದ ಗೋದಾಮುಗಳನ್ನು ದೇಶದೆಲ್ಲೆಡೆ ತೆರೆದಿದೆ. ಇಂದು ಜಾರ್ಖಂಡ್‌ನಲ್ಲಿ ಇದು ಸಾಬೀತಾಗಿದೆ. ಈ ಬಗ್ಗೆ ಶೆಹಜಾದಾ (ರಾಹುಲ್‌ ಗಾಂಧಿ) ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಸೋಮವಾರ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಲೂಟಿ ತಡೆದಿದ್ದಕ್ಕಾಗಿ ನನ್ನ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಆದರೆ ನನ್ನ ನಿಜವಾದ ಚಿಂತೆ ಬಡವರ ಹಣ ಈ ರೀತಿ ಲೂಟಿ ಆಗುತ್ತಿರುವ ಬಗ್ಗೆ’ ಎಂದು ಹೇಳಿದರು.

‘ಇಂದು ನೆರೆಯ ರಾಜ್ಯ ಜಾರ್ಖಂಡ್‌ನಲ್ಲಿ ಬೆಟ್ಟದಷ್ಟು ನಗದು ಹಣ ಪತ್ತೆಯಾಗಿದೆ. ಕೆಲವರು ನನ್ನ ಮೇಲೆ ಕಳ್ಳತನದ ಆರೋಪ ಮಾಡಿದರು ಮತ್ತು ಮೋದಿ ಹಣ ತೆಗೆದುಕೊಂಡು ಹೋದರು ಎಂದೆಲ್ಲಾ ಆರೋಪಿಸಿದ್ದರು. ಹಾಗಿದ್ದರೆ ಇದೀಗ ಹೇಳಿ, ನಾನು ಅವರ ಕಳ್ಳತನ ತಡೆದರೆ, ಅವರ ಆದಾಯಕ್ಕೆ ಕೊಕ್ಕೆ ಹಾಕಿದರೆ, ಅವರ ಲೂಟಿಯನ್ನು ತಡೆದರೆ ಅವರು ಮೋದಿಯನ್ನು ಬೈಯುತ್ತಾರೋ ಇಲ್ಲವೋ? ಜೊತೆಗೆ ನಾನು ಇಂಥ ಕೆಲಸ ಮಾಡಬೇಕೋ? ಬೇಡವೋ?’ ಎಂದು ಜನರನ್ನು ಪ್ರಶ್ನಿಸಿದರು.