400 ರೇಪ್‌: ರಾಹುಲ್‌ಗಾಂಧಿ ಹೇಳಿಕೆಗೆ ಎಚ್‌ಡಿಕೆ ಆಕ್ರೋಶ

| Published : May 04 2024, 05:51 AM IST

HDK

ಸಾರಾಂಶ

ಪ್ರಜ್ವಲ್ ಕೇಸ್ ಸಂಬಂಧ ಎಸ್ಐಟಿ ನೋಟಿಸ್ ಜಾರಿ ಮಾಡಿ ಮಾಹಿತಿ ಕಲೆ ಹಾಕಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ಸಿಂಧನೂರು :  ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್‌ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರ ಭಾಷಣದಲ್ಲಿ ಆರೋಪಿಸಿದ್ದಾರೆ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ? ಅವರು ಆ ರೀತಿ ಹೇಳಬೇಕಿದ್ದರೆ ಏನಾದರೂ ದಾಖಲೆಗಳು ಇರಲೇಬೇಕು. ಮೊದಲು ಅವರಿಗೆ ಎಸ್ಐಟಿ ನೋಟಿಸ್ ಜಾರಿ ಮಾಡಿ ಮಾಹಿತಿ ಕಲೆ ಹಾಕಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ರಾಹುಲ್‌ ಹೇಳಿಕೆಗೆ ಸಂಬಂಧಿಸಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಬ್ಬ ಮಾಜಿ ಪ್ರಧಾನಿ ಮಗನಾಗಿರುವ ರಾಹುಲ್‌ ಗಾಂಧಿಗೆ ಸಾರ್ವಜನಿಕ ವೇದಿಕೆಯಲ್ಲಿ ಏನು ಮಾತನಾಡಬೇಕು ಎಂಬ ಪರಿಜ್ಞಾನವಿಲ್ಲ. ಇವರನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಎಷ್ಟು ಗೌರವ ಕೊಡುತ್ತದೆ ಎಂಬುದು ಗೊತ್ತಾಗುತ್ತದೆ. ಮೊದಲು ಈ ದೇಶದ ಮಹಿಳೆಯರಿಗೆ ಗೌರವ ಕೊಡುವುದನ್ನು ಅವರು ಕಲಿಯಲಿ. ರಾಹುಲ್ ಗಾಂಧಿ ಅವರು ಹಗುರ ಮಾತುಗಳಿಂದ ಮಹಿಳೆಯರನ್ನು ಅವಮಾನಿಸಿದ್ದಾರೆ. ಇದು ಆ ಪಕ್ಷದ ಸಂಸ್ಕೃತಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ಮೋದಿ ಭಾಷಣ ಮಾಡಿ ಮತಯಾಚನೆ ಮಾಡಿ ಹೋಗಿದ್ದಾರೆ. ಈ ಮೂಲಕ ಪರೋಕ್ಷವಾಗಿ ಪ್ರಜ್ವಲ್‌ರನ್ನು ಮೋದಿ ಬೆಂಬಲಿಸಿದಂತಾಗಿದೆ. ಕೂಡಲೇ ಅವರು ಕ್ಷಮೆ ಕೊರಬೇಕು ಎಂದು ಕೇಳಿದ್ದಾರೆ. ಇದು ಎಷ್ಟು ಸರಿ? ಚುನಾವಣೆಗೂ ಪೂರ್ವದಲ್ಲಿ ಕಾಂಗ್ರೆಸ್ ನವರಿಗೆ ಪ್ರಜ್ವಲ್ ಅವರ ವೀಡಿಯೋಗಳ ಮಾಹಿತಿ ಇದ್ದರೆ ಅವರು ಆಗಲೇ ಬಹಿರಂಗಪಡಿಸಬಹುದಿತ್ತು. ಇದು ಕೇವಲ ಮೇ 7ರ ವರೆಗೆ ನಡೆಯುವ ಪ್ರಚಾರದ ಭಾಗವಾಗಿದೆ ಅಷ್ಟೆ. ಜೆಡಿಎಸ್ ಮುಖಂಡರನ್ನು ಅವಮಾನಿಸುವ ಹುನ್ನಾರ ಇದರಲ್ಲಿ ಅಡಗಿದೆ. ಮೋದಿ ಅವರಿಗೂ ಪ್ರಜ್ವಲ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಕೂಡ ಸ್ಪಷ್ಟನೆ ನೀಡಿದ್ದಾರೆ. ಆದರೂ ಪ್ರತಿನಿತ್ಯ ದೇವೇಗೌಡರು ಹಾಗೂ ಮೋದಿ ಅವರ ಹೆಸರನ್ನು ಈ ಪ್ರಕರಣದಲ್ಲಿ ತಳಕು ಹಾಕುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬಾಗಲಕೋಟೆ ಶಾಸಕರೊಬ್ಬರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕರು ಪ್ರಚಾರ ಭಾಷಣ ಮಾಡಲು ಹೋಗಿರಲಿಲ್ಲವೇ? ಆಗ ಅವರಿಗೆಲ್ಲ ಆ ಶಾಸಕರ ವಿರುದ್ಧ ಲೈಂಗಿಕ ಕಿರುಕುಳದ ಕೇಸು ದಾಖಲಾಗಿದ್ದು ಗೊತ್ತಿದ್ದರೂ ಪ್ರಚಾರಕ್ಕೆ ಏಕೆ ಹೋಗಿದ್ದರು? ಆದರೆ ಮೋದಿ ಅವರು ಪ್ರಚಾರಕ್ಕೆ ಬಂದಾಗ ಪ್ರಜ್ವಲ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಅವರನ್ನು ವಿನಾ ಕಾರಣ ಈ ವಿಷಯದಲ್ಲಿ ಎಳೆತರುತ್ತಿರುವುದು ಸರಿಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಹಾನಾಯಕನ ಸಾಧನೆ ಬಹಿರಂಗಪಡಿಸ್ತೇವೆ:

ಈ ಹಿಂದೆ ಅಶ್ಲೀಲ ಚಿತ್ರಗಳ ಚಲನಚಿತ್ರಗಳ ರೀಲ್‌ಗಳ ಪೆಟ್ಟಿಗೆಗಳನ್ನು ಟೆಂಟ್ ಟಾಕೀಸ್‌ಗಳಲ್ಲಿ ತೋರಿಸುತ್ತಿದ್ದ ಸಂಸ್ಕೃತಿ ಹೊಂದಿರುವ ಮಹಾ ನಾಯಕ, ಪ್ರಜ್ವಲ್ ವಿರುದ್ಧ ಪ್ರಕರಣ ಹುಟ್ಟು ಹಾಕಿದ್ದಾರೆ. ಸಂದರ್ಭ ಬಂದಾಗ ದಾಖಲೆ ಸಮೇತ ಆ ಮಹಾನಾಯಕನ ಸಾಧನೆ ಬಯಲಿಗೆಳೆಯಲಾಗುವುದು. ಅಲ್ಲದೆ ಬೆಳಗಾವಿ ಕ್ಷೇತ್ರದ ಶಾಸಕರೊಬ್ಬರ ವಿರುದ್ಧ ಇಂತಹದ್ದೇ ರಾಸಲೀಲೆ ಪ್ರಕರಣವನ್ನು ಆ ಮಹಾನಾಯಕ ಹೆಣೆದಿದ್ದರು. ಆಗ ಆ ಶಾಸಕ ಮಹಾ ನಾಯಕನ ವಿರುದ್ಧ ಸಮರವನ್ನೇ ಸಾರಿದ್ದನ್ನು ರಾಜ್ಯದ ಜನತೆ ಮರೆತಿಲ್ಲ ಎಂದು ಹೆಸರು ಹೇಳದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಹರಿಹಾಯ್ದರು.

ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೆ ಪ್ರಕರಣಗಳು ದಾಖಲಾಗಿವೆ. ಎಲ್ಲರು ತನಿಖೆಗೆ ಸಹಕರಿಸುತ್ತಾರೆ. ತನಿಖೆ ಕಾನೂನು ಬದ್ಧವಾಗಿ ನಡೆಯಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿ. ಇದಕ್ಕೆ ತಮ್ಮ ಕುಟುಂಬ ಸದಾ ಸಹಕರಿಸುತ್ತದೆ. ಆದರೆ ಪ್ರಕರಣದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡದಿರಲಿ. ಸಿಎಂ, ಡಿಸಿಎಂ, ಗೃಹ ಸಚಿವರು ವಿವಿಧ ತರಹದ ಹೇಳಿಕೆಗಳನ್ನು, ಸಂಬಂಧ ಪಡದವರ ಹೆಸರುಗಳನ್ನು ಹೇಳುವುದು, ವಿಸಾ-ಪಾಸ್ಪೋರ್ಟ್‌ಗಳ ಬಗ್ಗೆ ಮಾತನಾಡಿ ಎಸ್ಐಟಿ ಅಧಿಕಾರಿಗಳ ತನಿಖೆ ದಾರಿತಪ್ಪಿಸಬಾರದು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯಗೆ ಮನುಷ್ಯತ್ವ ಇಲ್ವಾ: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ತಮಗೂ ರೇವಣ್ಣ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಕುಮಾರಸ್ವಾಮಿ ಹಾಗೂ ದೇವೇಗೌಡರು ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಇದೇ ವೇಳೆ ಮಾಜಿ ಮುಖ್ಯಮಂತ್ರಿ ತೀವ್ರ ಕಿಡಿಕಾರಿದರು.

ಈ ಮುಖ್ಯಮಂತ್ರಿಗೆ ಮನುಷ್ಯತ್ವವೇ ಇಲ್ಲವೇ? ಅವರಿಗೆ ತಮ್ಮ ತಂದೆ-ತಾಯಿ ಮೇಲೆ ಗೌರವ ಇಲ್ಲವೇ? ನೋವಿನಲ್ಲಿರುವ ನನ್ನ ತಂದೆಗೆ ಧೈರ್ಯ ತುಂಬಲು ಎರಡು ದಿನ ಬೆಂಗಳೂರಿನ ಅವರ ಮನೆಯಲ್ಲಿದ್ದೆ. ಅಲ್ಲಿ ಕ್ಯಾಮೆರಾಗಳೂ ಇದ್ದವು. ಬೇಕಿದ್ದರೆ ವಿಡಿಯೋಗಳನ್ನು ತರಿಸಿಕೊಂಡು ನೋಡಲಿ. ನಿಮಗೆ ತಂದೆ-ತಾಯಿ ಬಾಂಧವ್ಯ ಇಲ್ಲದೇ ಇರಬಹುದು. ಆದರೆ ನನಗೆ ನನ್ನ ತಂದೆ ತಾಯಿ ಮುಖ್ಯ ಎಂದು ತಿರುಗೇಟು ನೀಡಿದರು.