ಸಂಪತ್ತಿನ ಮರು ಹಂಚಿಕೆ ಮಾಡುತ್ತೇವೆ ಎಂದು ‘ಕೈ’ ಹೇಳಿಲ್ಲ: ಹನುಮಂತಯ್ಯ

| Published : Apr 26 2024, 01:30 AM IST / Updated: Apr 26 2024, 04:45 AM IST

Congress flag
ಸಂಪತ್ತಿನ ಮರು ಹಂಚಿಕೆ ಮಾಡುತ್ತೇವೆ ಎಂದು ‘ಕೈ’ ಹೇಳಿಲ್ಲ: ಹನುಮಂತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ಹೇಳಿಲ್ಲ. ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಮಾಜಿ ಸಂಸದ ಡಾ। ಎಲ್‌.ಹನುಮಂತಯ್ಯ ಹೇಳಿದ್ದಾರೆ.

  ಬೆಂಗಳೂರು : ಸೋಲಿನ ಭೀತಿಯಲ್ಲಿರುವ ಬಿಜೆಪಿಯವರು ರಾಹುಲ್‌ಗಾಂಧಿ ಅವರ ಹೇಳಿಕೆಯನ್ನು ತಿರುಚಿ ಅಪಪ್ರಚಾರ ನಡೆಸುತ್ತಿದ್ದಾರೆ. ಸಂಪತ್ತಿನ ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ಎಲ್ಲೂ ಹೇಳಿಲ್ಲ ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ। ಎಲ್‌.ಹನುಮಂತಯ್ಯ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಒದಗಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಗ್ಯಾರಂಟಿ ನೀಡಿದೆ. ಆದಾಯ ಅಸಮಾನತೆಯನ್ನು ತೊಡೆದು ಹಾಕಿ ಸಂಪತ್ತಿನ ಸಮಾನ ಹಂಚಿಕೆ ಮಾಡಲು ನೀತಿಗಳು ರೂಪಿಸುವುದಾಗಿ ರಾಹುಲ್‌ಗಾಂಧಿ ಹೇಳಿದ್ದಾರೆ. ಆದರೆ ಬಿಜೆಪಿಯವರು ಸೋಲಿನ ಭೀತಿಯಿಂದ ಸಂಪತ್ತನ್ನು ಕಾಂಗ್ರೆಸ್‌ ಪಕ್ಷ ಮರು ಹಂಚಿಕೆ ಮಾಡಲಿದೆ ಎಂದು ಅಪ ಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇತ್ತೀಚೆಗೆ ಬಿಡುಗಡೆಯಾಗಿರುವ ಆದಾಯ ಅಸಮಾನತೆ ವರದಿ ಪ್ರಕಾರ ದೇಶದ ಒಟ್ಟು ಸಂಪತ್ತಿನಲ್ಲಿ ಶೇ.20 ರಷ್ಟು ಸಂಪತ್ತು ಶೇ.1 ರಷ್ಟು ಜನಸಂಖ್ಯೆ ಬಳಿ, ಶೇ.10 ರಷ್ಟು ಸಂಪತ್ತು ಶೇ.0.1 ರಷ್ಟು ಜನಸಂಖ್ಯೆ ಬಳಿ ಇದೆ. ಎಸ್ಸಿ,ಎಸ್ಟಿ, ಒಬಿಸಿ ಹಾಗೂ ಮಧ್ಯಮವರ್ಗದ ಸಂಪತ್ತು ಕಳೆದ ಹತ್ತು ವರ್ಷಗಳಲ್ಲಿ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬಡ ಹಾಗೂ ಮಧ್ಯಮವರ್ಗದವರ ಆದಾಯ ವೃದ್ಧಿಯಾಗುವ ಬದಲಿಗೆ ಶ್ರೀಮಂತರದ್ದು ವೇಗವಾಗಿ ಬೆಳೆಯುತ್ತಿದೆ.

 ಈ ನಿಟ್ಟಿನಲ್ಲಿ ಬಡವರ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳುವುದು ಕಾಂಗ್ರೆಸ್‌ ಉದ್ದೇಶ ಎಂದು ಸ್ಪಷ್ಟನೆ ನೀಡಿದರು.ಇನ್ನು ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೆ ತರುವುದಾಗಿ ಕಾಂಗ್ರೆಸ್‌ ಎಲ್ಲೂ ಹೇಳಿಲ್ಲ. ಬಿಜೆಪಿಯವರು ಕಾಂಗ್ರೆಸ್‌ ಹೇಳಿದಿರುವುದನ್ನು ಹೇಳಿರುವುದಾಗಿ ಬಿಂಬಿಸುತ್ತಿದೆ. ಕೇವಲ ಸುಳ್ಳುಗಳ ಮೂಲಕ ಚುನಾವಣೆ ಎದುರಿಸಲು ಹೊರಟಿದೆ. ಹತ್ತು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವುದರಿಂದ ಬಿಜೆಪಿಗೆ ಚುನಾವಣೆಗೆ ಹೋಗಲು ಸುಳ್ಳುಗಳೇ ಅನಿವಾರ್ಯ ಎಂಬಂತಾಗಿದೆ ಎಂದು ಟೀಕಿಸಿದರು.