ಉಗ್ರ ಕಸಬ್ ಪರ ಕಾಂಗ್ರೆಸ್ಸಿಗನ ಹೇಳಿಕೆಗೆ ತರೂರ್ ಬೆಂಬಲ

| Published : May 07 2024, 01:04 AM IST / Updated: May 07 2024, 04:56 AM IST

ಸಾರಾಂಶ

2008ರಲ್ಲಿ 26/11 ಮುಂಬೈ ದಾಳಿ ವೇಳೆ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ಬಲಿಯಾಗಿದ್ದು ಉಗ್ರ ಕಸಬ್‌ ಗುಂಡಿಗಲ್ಲ, ಬದಲಿಗೆ ಆರ್‌ಎಸ್‌ಎಸ್‌ ನಂಟಿನ ಪೊಲೀಸರಿಗೆ ಎಂಬ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್ ಹೇಳಿಕೆಯನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬೆಂಬಲಿಸಿದ್ದಾರೆ.

ನವದೆಹಲಿ: 2008ರಲ್ಲಿ 26/11 ಮುಂಬೈ ದಾಳಿ ವೇಳೆ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ಬಲಿಯಾಗಿದ್ದು ಉಗ್ರ ಕಸಬ್‌ ಗುಂಡಿಗಲ್ಲ, ಬದಲಿಗೆ ಆರ್‌ಎಸ್‌ಎಸ್‌ ನಂಟಿನ ಪೊಲೀಸರಿಗೆ ಎಂಬ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿಜಯ್‌ ವಡೆಟ್ಟಿವಾರ್ ಹೇಳಿಕೆಯನ್ನು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಬೆಂಬಲಿಸಿದ್ದಾರೆ.

ಸೋಮವಾರ ಮಾತನಾಡಿದ ಅವರು, ‘ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ವಿಷಯದ ಕುರಿತು ವಿಧಾನಸಭೆಯ ವಿಪಕ್ಷ ನಾಯಕರು ಪ್ರಸ್ತಾಪಿಸಿದಾಗ ಆ ಕುರಿತು ತನಿಖೆ ನಡೆಸುವುದು ಅವಶ್ಯಕ. ಇದು ಅತ್ಯಂತ ಗಂಭೀರ ವಿಷಯ. ದೇಶದ ಜನರಿಗೆ ಸತ್ಯ ತಿಳಿಯುವ ಹಕ್ಕಿದೆ. ಏಕೆಂದರೆ ಮಾಜಿ ಐಜಿ ಎಸ್.ಎಂ. ಮುಶ್ರೀಫ್‌ ಅವರು ಕರ್ಕರೆ ದೇಹದಲ್ಲಿ ಹೊಕ್ಕ ಗುಂಡು ಪೊಲೀಸ್‌ ರಿವಾಲ್ವರ್‌ನಿಂದ ಸಿಡಿದಿತ್ತು ಎಂದಿದ್ದರು’ ಎಂದು ಹೇಳಿದ್ದಾರೆ.

ಇದೇ ವೇಳೆ, ‘ಉಗ್ರ ಕಸಬ್‌ಗೆ ಜೈಲಲ್ಲಿ ಬಿರಿಯಾನಿ ತಿನ್ನಿಸಲಾಗಿತ್ತು’ ಎಂಬ ಮುಂಬೈ ದಾಳಿ ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿದ್ದ ಮತ್ತು ಹಾಲಿ ಮುಂಬೈ ಮಧ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉಜ್ವಲ್‌ ನಿಕ್ಕಂ ಹೇಳಿಕೆಯನ್ನೂ ತರೂರ್‌ ಕಟುವಾಗಿ ಟೀಕಿಸಿದ್ದಾರೆ. ‘ಅವರು (ಉಜ್ವಲ್‌ ನಿಕ್ಕಂ) ಈ ಸಮರ್ಥನೀಯವಲ್ಲದ ಸುಳ್ಳನ್ನು ಹೇಳಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಇದೀಗ ಅವರ ರಾಜಕೀಯ ಒಲವು ಕೂಡಾ ಬಹಿರಂಗವಾಗಿರುವುದರಿಂದ ಅವರ ಇಂಥ ನಿಲುವು ಅವರ ಇತರೆ ಯಾವುದಾದರೂ ನಿಲುವುಗಳ ಮೇಲೂ ಪ್ರಭಾವ ಬೀರಿದೆಯೇ ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹ’ ಎಂದು ತರೂರ್‌ ಹೇಳಿದ್ದಾರೆ.