ಮಹಾ ದರ್ಶನ- ದೇವನೂರು ಶ್ರೀ ಗುರುಮಲ್ಲೇಶ್ವರರ ಜೀವನ- ಸಾಧನೆ

| Published : May 03 2024, 01:05 AM IST / Updated: May 03 2024, 06:07 AM IST

ಸಾರಾಂಶ

 ದೇವನೂರಿನ ಶ್ರೀ ಗುರುಮಲ್ಲೇಶ್ವರರು. ಆಧುನಿಕ ಶರಣ ಸಮೂಹದಲ್ಲಿ ಮುಂಚೂಣಿಯ ಹೆಸರು. ಸಮಾಜದ ಎಲ್ಲಾ ಬಗೆಯ ಕಾಯಕಜೀವಿಗಳಿಗೆ ಅವರು ತಮ್ಮ ಅನುಗ್ರಹದ ದೀಕ್ಷೆ ನೀಡಿದವರು.

 ಮೈಸೂರು :  ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಮಹೇಂದ್ರಮೂರ್ತಿ ದೇವನೂರು ಅವರ ಮಹಾದರ್ಶನ ಕೃತಿಯು ದೇವನೂರು ಶ್ರೀ ಗುರುಮಲ್ಲೇಶ್ವರರ ಜೀವನ- ಸಾಧನೆ ಕುರಿತದ್ದು.

ಜನಸಾಮಾನ್ಯರಂತೆ ಬದುಕಿ, ಶರಣರ ಕಾಯಕ ಮತ್ತು ದಾಸೋಹ ತತ್ವಗಳನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಹಳೆಯ ಮೈಸೂರು ಭಾಗದ ಜನಮಾನಸದಲ್ಲಿ ವಿರಾಜಮಾನರಾಗಿರುವವರು ದೇವನೂರಿನ ಶ್ರೀ ಗುರುಮಲ್ಲೇಶ್ವರರು. ಆಧುನಿಕ ಶರಣ ಸಮೂಹದಲ್ಲಿ ಮುಂಚೂಣಿಯ ಹೆಸರು. ಸಮಾಜದ ಎಲ್ಲಾ ಬಗೆಯ ಕಾಯಕಜೀವಿಗಳಿಗೆ ಅವರು ತಮ್ಮ ಅನುಗ್ರಹದ ದೀಕ್ಷೆ ನೀಡಿದವರು. ಹಳ್ಳಿಗಳಲ್ಲಿ ಭಿಕ್ಷದ ಮಠಗಳನ್ನು ಆರಂಭಿಸಿ, ಜನಸಾಮಾನ್ಯರನ್ನು ಹಸಿವಿನಿಂದ ಹೊರಬರುವಂತೆ ಮಾಡಿದವರು. ಮಡಿ- ಮೈಲಿಗೆ, ಮೂಢನಂಬಿಕೆಗಳಿಗೆ ತಿಲಾಂಜಲಿ ಇತ್ತ ಕೀರ್ತಿ ಇವರಿಗೆ ಸಲ್ಲಬೇಕು. ಅವರ ಮಾಡಿದ ಕೆಲಸಗಳೆಲ್ಲಾ ಪವಾಡಗಳಾಂಥವು. ಆದರೆ ಅವು ಪವಾಡಗಳಲ್ಲ, ಪ್ರತಿಯೊಬ್ಬರೂ ಸಾಧಿಸಿ ತೋರಿಸಬಹುದು ಎಂಬ ಅರಿವಿನ ಜ್ಯೋತಿಯನ್ನು ಬೆಳಗಿದವರು ಶ್ರೀ ಗುರುಮಲ್ಲೇಶ್ವರರು. ಸ್ಛಾವರ ಸಂಸ್ಕೃತಿಗೆ ವಿರೋಧವಾಗಿ ಜಂಗಮ ಸಂಸ್ಕೃತಿಯ ಪ್ರತೀಕವಾದರು.

ಆತ್ಮಚಿಂತನೆ, ಕಾಯಕ, ದಾಸೋಹ ಪ್ರಜ್ಢೆ, ಇಲ್ಲದವರ ಪರವಾದ ಒಲವು, ಸಮಸಮಾಜದ ಚಿಂತನೆ, ಅಂತರಂಗ ಶುದ್ಧತೆ, ಭಿಕ್ಷೆ, ಭಜನೆ, ವೈಚಾರಿಕ ಬದುಕಿಗೆ ನೀಡಿದ ಮಾನ್ಯತೆ- ಇವೇ ಮೊದಲಾದ ಮೌನಕ್ರಾಂತಿ ನಡೆಸಿದರು. ದಯೆ, ಪ್ರೀತಿ, ಪ್ರೇಮ, ಕರುಣೆ, ಮಾನವೀಯತೆ, ಶಾಂತಿ, ಕಾಳಜಿ, ಭ್ರಾತೃತ್ವ, ಸೌಹಾರ್ದ, ತಾತ್ವಿಕ ದರ್ಶನಗಳ ಮೂಲಕ ಹತ್ತೊಂಬತ್ತನೆ ಶತಮಾನದಲ್ಲಿ ಹನ್ನೆರಡನೆ ಶತಮಾನದ ಬಸವಾದಿ ಶರಣರ ದರ್ಶನ ಮಾಡಿಸಿದರು.ಮಹಿಳೆಯರಿಗೆ ದೀಕ್ಷೆ ನೀಡಿ, ಲಿಂಗತಾರತಮ್ಯ ಹೋಗಲಾಡಿಸಿದರು. ಮುಮ್ಮಡಿ ಕೃಷ್ಣರಾಜರು ನೀಡಿದ ಸಂಪತ್ತನ್ನು ಒಲ್ಲೆನೆಂದರು. ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದರು.

ಇಂತಹ ಮಹಾಮಹಿಮರ ಜೀವನ, ಸಾಧನೆಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಇದರ ಒಡಲೊಳಗೆ ದೇವನೂರಿನ ಸಾಮಾಜಿಕ, ಧಾರ್ಮಿಕ ಸಂರಚನೆಗಳು ಕೂಡ ಹಾಸು ಹೊಕ್ಕಾಗಿವೆ.

ಶ್ರೀ ರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಪ್ರಕಟಿಸಿದ್ದು, ಪ್ರೊ.ಮಲೆಯೂರು ಗುರುಸ್ವಾಮಿ ಅವರ ಮುನ್ನುಡಿ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರ ಆಶಯ ನುಡಿ ಇದೆ. ಆಸಕ್ತರು ಪ್ರಕಾಶಕ ಡಿ.ಎನ್. ಲೋಕಪ್ಪ, ಮೊ. 99026 39593 ಲೇಖಕ ಡಾ.ಮಹೇಂದ್ರಮೂರ್ತಿ ದೇವನೂರು, ಮೊ. 99802 24546 ಸಂಪರ್ಕಿಸಬಹುದು.